ನವದೆಹಲಿ: ಭಾರತೀಯ ಜನತಾ ಪಾರ್ಟಿಯು ಫೆಬ್ರವರಿ 1ರಿಂದ 12ರ ವರೆಗೆ ಬಜೆಟ್ (Union Budget 2023) ಲಾಭಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನ ನಡೆಸಲಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಇದಕ್ಕಾಗಿ 9 ಸದಸ್ಯರ ಸಮಿತಿಯನ್ನು ರಚಿಸಿದ್ದಾರೆ ಎನ್ನಲಾಗಿದೆ.
ಈ ಎರಡು ವಾರಗಳ ಕಾಲ ಬಿಜೆಪಿ ನೇತೃತ್ವ ರಾಜ್ಯ ಸರ್ಕಾರಗಳ ಮುಖ್ಯಮಂತ್ರಿಗಳು, ಪಕ್ಷದ ರಾಜ್ಯ ಅಧ್ಯಕ್ಷರು, ಸಚಿವರು, ಸಂಸತ್ ಸದಸ್ಯರು, ಶಾಸಕರು ಸಮಾವೇಶಗಳನ್ನು, ಸಾರ್ವಜನಿಕ ಸಭೆಗಳನ್ನು ನಡೆಸಿ ಬಜೆಟ್‌ನಿಂದ ಜನ ಸಾಮಾನ್ಯರಿಗೆ ಆಗುವ ಲಾಭಗಳ ಕುರಿತು ತಿಳಿಸಿಕೊಡಲಿದ್ದಾರೆಂದು ಡಿಎನ್ಎ ವರದಿ ಮಾಡಿದೆ.
ಇದನ್ನೂ ಓದಿ: Union Budget 2023: ಧಾರವಾಡದ ವಿಶಿಷ್ಟ ಕಸೂತಿ ಸೀರೆ ಧರಿಸಿ, ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್
ಬಿಹಾರದ ಮಾಜಿ ಡಿಸಿಎಂ ಹಾಗೂ ರಾಜ್ಯ ಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ ಅವರನ್ನು ಈ ಸಮಿತಿಯ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಫೆಬ್ರವರಿ 4 ಮತ್ತು 5 ರಂದು ಕೇಂದ್ರ ಸಚಿವರು, ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳು, ಆರ್ಥಿಕ ತಜ್ಞರು ದೇಶದ ವಿವಿಧ ರಾಜ್ಯಗಳ ರಾಜಧಾನಿಗಳು ಸೇರಿದಂತೆ 50 ಪ್ರಮುಖ ನಗರಗಳಲ್ಲಿ ಬಜೆಟ್ ಕುರಿತು ಸಮಾವೇಶಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.