ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ (Delhi MCD Election) ಸೋಲನುಭವಿಸಿದ ಬಿಜೆಪಿಯು ಆಪರೇಷನ್ ಕಮಲಕ್ಕೆ ಮುಂದಾಗಿದೆ ಎಂದು ಆಮ್ ಆದ್ಮಿ ಪಕ್ಷವು ಗಂಭೀರ ಆರೋಪ ಮಾಡಿದೆ. “ಬಿಜೆಪಿಯು ತನ್ನ ಅಸಲಿ ಆಟ ಶುರು ಮಾಡಿದೆ. ಆಪ್ ಕೌನ್ಸಿಲರ್‌ಗಳಿಗೆ ಬಿಜೆಪಿಯಿಂದ ಕರೆಗಳು ಬರುತ್ತಿವೆ” ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆರೋಪಿಸಿದ್ದಾರೆ.
“ಬಿಜೆಪಿಯಿಂದ ಬರುವ ಪ್ರತಿಯೊಂದು ಕರೆಗಳನ್ನು ರೆಕಾರ್ಡ್ ಮಾಡುವಂತೆ ನಮ್ಮ ಪಕ್ಷದ ಕೌನ್ಸಿಲರ್‌ಗಳಿಗೆ ಸೂಚಿಸಲಾಗಿದೆ. ಬಿಜೆಪಿಯ ಯಾವುದೇ ಆಟವೂ ನಡೆಯುವುದಿಲ್ಲ. ನಮ್ಮ ಪಕ್ಷದ ಒಬ್ಬರೇ ಒಬ್ಬ ಕೌನ್ಸಿಲರ್‌ಗಳು ಮಾರಾಟವಾಗುವುದಿಲ್ಲ. ಸೋಲಿನ ಹತಾಶೆಯಿಂದಾಗಿ ಬಿಜೆಪಿಯು ಇಂತಹ ಕೃತ್ಯಕ್ಕೆ ಕೈಹಾಕಿದೆ. ಇದರಲ್ಲಿ ಅದು ಯಾವುದೇ ಕಾರಣಕ್ಕೂ ಯಶಸ್ವಿಯಾಗುವುದಿಲ್ಲ” ಎಂದು ಮನೀಷ್ ಸಿಸೋಡಿಯಾ ಹೇಳಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ೧೫ ವರ್ಷದಿಂದ ಪಾರುಪತ್ಯ ಸಾಧಿಸಿದ್ದ ಬಿಜೆಪಿಯನ್ನು ಸೋಲಿಸಿ ಆಪ್ ಗೆಲುವು ಸಾಧಿಸಿದೆ. ೨೫೦ ವಾರ್ಡ್‌ಗಳಲ್ಲಿ ಆಪ್ ೧೩೪, ಬಿಜೆಪಿ ೧೦೪, ಕಾಂಗ್ರೆಸ್ ೯ ಹಾಗೂ ೩ ವಾರ್ಡ್‌ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ | Delhi MCD Election | ದೆಹಲಿಯಲ್ಲಿ ಬಿಜೆಪಿ ಲೋಕಲ್ ಕೋಟೆ ಭೇದಿಸಿದ ಆಪ್, ಗೆಲುವಿಗೆ ಪ್ರಮುಖ ಕಾರಣಗಳೇನು?