Site icon Vistara News

LK Advani: ಎಲ್‌ ಕೆ ಅಡ್ವಾಣಿ ಆರೋಗ್ಯದಲ್ಲಿ ಮತ್ತೆ ಏರುಪೇರು; ಆಸ್ಪತ್ರೆಗೆ ದಾಖಲು

LK Advani

BJP veteran LK Advani admitted to Apollo Hospital, condition stable: Report

ನವದೆಹಲಿ: ಮಾಜಿ ಉಪ ಪ್ರಧಾನಿ, ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ (L K Advani) ಅವರ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗಿದ್ದು, ದೆಹಲಿಯಲ್ಲಿರುವ ಅಪೋಲೊ ಆಸ್ಪತ್ರೆಗೆ (Apollo Hospital) ದಾಖಲಿಸಲಾಗಿದೆ. ಅಪೋಲೊ ಆಸ್ಪತ್ರೆಯ ವೈದ್ಯರು ಎಲ್‌.ಕೆ.ಅಡ್ವಾಣಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ಹೆಚ್ಚಿನ ನಿಗಾ ವಹಿಸಿದ್ದಾರೆ. ಆಸ್ಪತ್ರೆಯ ಮೂಲಗಳ ಪ್ರಕಾರ ಮಾಜಿ ಉಪ ಪ್ರಧಾನಿಯ ಆರೋಗ್ಯವು ಸ್ಥಿರವಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿದುಬಂದಿದೆ.

ಬುಧವಾರ (ಜುಲೈ 3) ರಾತ್ರಿ 9 ಗಂಟೆ ಸುಮಾರಿಗೆ ಎಲ್‌.ಕೆ.ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇದಾದ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. 96 ವರ್ಷದ ಎಲ್‌.ಕೆ.ಅಡ್ವಾಣಿ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಜೂನ್‌ 27ರಂದು ಕೂಡ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರು ಆಗಿತ್ತು. ಹಾಗಾಗಿ ಅವರನ್ನು ಅದೇ ರಾತ್ರಿ ದೆಹಲಿಯಲ್ಲಿರುವ ಏಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ಅವರನ್ನು ಡಿಸ್‌ಚಾರ್ಜ್‌ ಮಾಡಲಾಗಿತ್ತು.

ಕಳೆದ ತಿಂಗಳ ಆರಂಭದಲ್ಲಿ, ಸರ್ಕಾರ ರಚನೆಗೆ ಹಕ್ಕು ಸಾಧಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಅಡ್ವಾಣಿಯವರನ್ನು ಭೇಟಿ ಮಾಡಿದ್ದರು. ಗಾಂಧಿನಗರದ ಮಾಜಿ ಸಂಸದರಾದ ಅಡ್ವಾಣಿ, ಮೋದಿಯವರ ರಾಜಕೀಯ ಮಾರ್ಗದರ್ಶಕರಾಗಿದ್ದಾರೆ.

ಅಡ್ವಾಣಿ ಅವರಿಗೆ ಈ ವರ್ಷದ ಮಾರ್ಚ್‌ನಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು. ಅವರ ನಿವಾಸದಲ್ಲಿಯೇ ಈ ಅತ್ಯುನ್ನತ ನಾಗರಿಕ ಗೌರವವನ್ನು ಸಲ್ಲಿಸಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮುರ್ಮು ಇದನ್ನು ಕೊಡಮಾಡಿದ್ದರು. ಔಪಚಾರಿಕ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತು ಎಲ್ ಕೆ ಅಡ್ವಾಣಿ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಎಲ್‌ಕೆ ಅಡ್ವಾಣಿ ಅವರು ಜೂನ್ 2002ರಿಂದ ಮೇ 2004 ರವರೆಗೆ ಭಾರತದ ಉಪ ಪ್ರಧಾನ ಮಂತ್ರಿಯಾಗಿ, ಅಕ್ಟೋಬರ್ 1999 ರಿಂದ ಮೇ 2004 ರವರೆಗೆ ಕೇಂದ್ರ ಗೃಹ ಸಚಿವರಾಗಿ ಸೇವೆ ಸಲ್ಲಿಸಿದರು. ಅವರು 1986 ರಿಂದ 1990, 1993 ರಿಂದ 1998 ಮತ್ತು 2004 ರಿಂದ 2005ರವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು.

ಇದನ್ನೂ ಓದಿ: Narendra Modi: ಪ್ರಮಾಣವಚನಕ್ಕೂ ಮೊದಲು ಅಡ್ವಾಣಿಯ ಆಶೀರ್ವಾದ ಪಡೆದ ನರೇಂದ್ರ ಮೋದಿ!

Exit mobile version