Site icon Vistara News

Priyanka Vadra: ಇವಿಎಂ ತಿರುಚದಿದ್ದರೆ ಬಿಜೆಪಿಗೆ 180 ಸೀಟೂ ಬರಲ್ಲ ಎಂದ ಪ್ರಿಯಾಂಕಾ ವಾದ್ರಾ!

Priyanka Vadra

BJP will not go beyond 180 seats if there is no tampering with EVMs in polls, says Priyanka Vadra

ನವದೆಹಲಿ: ಲೋಕಸಭೆ ಇರಲಿ, ಯಾವುದೇ ರಾಜ್ಯಗಳ ವಿಧಾನಸಭೆ ಚುನಾವಣೆ ಇರಲಿ. ಪ್ರತಿ ಬಾರಿ ಚುನಾವಣೆ ಘೋಷಣೆಯಾದಾಗಲೂ ವಿದ್ಯುನ್ಮಾನ ಮತಯಂತ್ರಗಳನ್ನು (EVM) ತಿರುಚಲಾಗುತ್ತದೆ ಎಂಬುದಾಗಿ ಕಾಂಗ್ರೆಸ್‌ ಸೇರಿ ಹಲವು ಪಕ್ಷಗಳು ಆರೋಪಿಸುತ್ತವೆ. ಈ ಬಾರಿಯ ಲೋಕಸಭೆ ಚುನಾವಣೆಯ (Lok Sabha Election 2024) ಹೊತ್ತಿನಲ್ಲೂ ಇವಿಎಂಗಳ ಕುರಿತು ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ, ಕಳೆದ ತಿಂಗಳಷ್ಟೇ ಕಾಂಗ್ರೆಸ್‌ ನಾಯಕರು ರಾಹುಲ್‌ ಗಾಂಧಿ (Rahul Gandhi) ಅವರು ಇವಿಎಂಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದರು. ಈಗ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ (Priyanka Vadra) ಅವರು ಕೂಡ ಇವಿಎಂಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. “ಇವಿಎಂಗಳನ್ನು ತಿರುಚದಿದ್ದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 180 ಸೀಟುಗಳು ಕೂಡ ಬರುವುದಿಲ್ಲ” ಎಂದು ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ.

ಯಾವ ಆಧಾರದ ಮೇಲೆ ಬಿಜೆಪಿ ನಾಯಕರು 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎನ್ನುತ್ತಾರೆ ಎಂಬ ಎಎನ್‌ಐ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರಿಯಾಂಕಾ ವಾದ್ರಾ ಉತ್ತರಿಸಿದರು. “ಯಾವ ಆಧಾರದ ಬಿಜೆಪಿ ನಾಯಕರು 400 ಸೀಟುಗಳನ್ನು ಗೆಲ್ಲುತ್ತೇವೆ ಎನ್ನುತ್ತಾರೆ? ಅವರೇನು ಜ್ಯೋತಿಷಿಗಳೇ? ಇದಕ್ಕೂ ಮೊದಲು ಬಿಜೆಪಿಯೇನು 400 ಕ್ಷೇತ್ರ ಗೆದ್ದಿಲ್ಲ. ಈಗ ಹೇಗೆ ಇಷ್ಟೊಂದು ವಿಶ್ವಾಸ ಬರುತ್ತದೆ? ದೇಶದಲ್ಲಿ ಮತಯಂತ್ರಗಳನ್ನು ತಿರುಚದೆ ಚುನಾವಣೆ ನಡೆದರೆ ಬಿಜೆಪಿಗೆ 180 ಸೀಟುಗಳು ಕೂಡ ಬರಲ್ಲ” ಎಂದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ನರೇಂದ್ರ ಮೋದಿ ಸೇರಿ ಬಿಜೆಪಿ ನಾಯಕರ ವಿರುದ್ಧ ಪ್ರಿಯಾಂಕಾ ವಾದ್ರಾ ವಾಗ್ದಾಳಿ ನಡೆಸಿದರು. “ದೇಶದಲ್ಲಿ ಬೆಲೆಯೇರಿಕೆ, ನಿರುದ್ಯೋಗ ಸಮಸ್ಯೆ ಕುರಿತು ಅವರು ಮಾತನಾಡುವುದಿಲ್ಲ. ರೈತರು ಹಾಗೂ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅವರು ಸೊಲ್ಲೆತ್ತುವುದಿಲ್ಲ. ಜನರ ಗಮನವನ್ನು ಬೇರೆಡೆ ಸೆಳೆಯುವುದಷ್ಟೇ ಮೋದಿ ಹಾಗೂ ಬಿಜೆಪಿ ನಾಯಕರ ಕೆಲಸವಾಗಿದೆ” ಎಂದು ಟೀಕಿಸಿದರು.

ರಾಹುಲ್‌ ಗಾಂಧಿ ಏನು ಹೇಳಿದ್ದರು?

ಕಳೆದ ತಿಂಗಳು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ಶಕ್ತಿ ಎಂಬ ಪದದ ಪ್ರಸ್ತಾಪ ಮಾಡಿದ್ದರು. ಅಷ್ಟೇ ಅಲ್ಲ, ಮತಯಂತ್ರಗಳನ್ನು ತಿರುಚಲಾಗುತ್ತದೆ ಎಂದು ಪರೋಕ್ಷವಾಗಿ ಹೇಳಿದ್ದರು. ಎನ್‌ಡಿಎ ಸರ್ಕಾರವನ್ನು ಶಕ್ತಿಗೆ ಹೋಲಿಸಿದ್ದ ಅವರು, ಆ ಶಕ್ತಿ ವಿರುದ್ಧ ಹೋರಾಡುತ್ತೇವೆ ಎಂದಿದ್ದರು. “ಹಿಂದಿಯಲ್ಲಿ ಶಕ್ತಿ ಎಂಬ ಪದ ಇದೆ. ನಾವು ಆ ಶಕ್ತಿಯ ವಿರುದ್ಧ ಹೋರಾಡುತ್ತೇವೆ. ಅಷ್ಟಕ್ಕೂ, ಈ ಶಕ್ತಿ ಎಂದರೇನು? ಇದು ನಮಗೆ ಏನು ಮಾಡುತ್ತದೆ? ವಿದ್ಯುನ್ಮಾನ ಮತಯಂತ್ರಗಳ ಆತ್ಮ ಹಾಗೂ ಸಮಗ್ರತೆಯನ್ನು ರಾಜನಿಗೆ (ಮೋದಿ) ವರ್ಗಾಯಿಸಲಾಗಿದೆ. ಇ.ಡಿ, ಸಿಬಿಐಗಳು ಕೂಡ ರಾಜನ ವಶವಾಗಿವೆ” ಎಂದು ರಾಹುಲ್‌ ಗಾಂಧಿ ಟೀಕಿಸಿದ್ದರು.

ಇದನ್ನೂ ಓದಿ: Lok Sabha Election 2024: ಮೋದಿಯವರೇ ಜಾತಿ ಗಣತಿ ಬಗ್ಗೆ ನಿಮ್ಮ ನಿಲುವೇನು? ಮೌನ ಮುರಿಯಿರಿ: ರಾಹುಲ್‌ ಗಾಂಧಿ ಸವಾಲು

Exit mobile version