ಪಾಟ್ನಾ: ಬಿಜೆಪಿಯ ಒಡೆದು ಆಳುವ ನೀತಿ ಇಷ್ಟವಾಗುತ್ತಿಲ್ಲ ಎಂದು ಎನ್ಡಿಎ ಒಕ್ಕೂಟದಿಂದ ಹೊರಬಂದು, ಬಿಹಾರದಲ್ಲಿ ಆರ್ಜೆಡಿ-ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡು ಮಹಾ ಘಟ್ ಬಂಧನ್ ಸರ್ಕಾರ ರಚನೆ ಮಾಡಿ, 8ನೇ ಬಾರಿಗೆ ಮುಖ್ಯಮಂತ್ರಿ ಹುದ್ದೆಗೆ ಏರಿದ ನಿತೀಶ್ ಕುಮಾರ್, ‘2024ರ ಲೋಕಸಭಾ ಚುನಾವಣೆಗೂ ಪೂರ್ವ ಬಿಜೆಪಿ 50 ಸೀಟ್ಗಳನ್ನು ಕಳೆದುಕೊಳ್ಳುತ್ತದೆ’ ಎಂದು ಭವಿಷ್ಯ ನುಡಿದಿದ್ದಾರೆ.
ಪಾಟ್ನಾದಲ್ಲಿ ನಡೆದ ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಇಡೀ ದೇಶದಲ್ಲಿರುವ ಎಲ್ಲ ಪ್ರತಿಪಕ್ಷಗಳ ನಾಯಕರನ್ನೂ ಒಗ್ಗೂಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರೊಂದಿಗೆ ಈಗಾಗಲೇ ಮಾತನಾಡಿದ್ದೇವೆ. ನಾನು ಎಲ್ಲ ಪ್ರತಿಪಕ್ಷಗಳ ನಾಯಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ. ಪ್ರತಿಪಕ್ಷಗಳೆಲ್ಲ ಒಟ್ಟಾಗಿ ಬಿಜೆಪಿ ವಿರುದ್ಧ ಹೋರಾಟ ಮಾಡಿದರೆ, ಖಂಡಿತ 2024ರೊಳಗೆ ಆ ಪಕ್ಷ 50 ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳುತ್ತದೆ’ ಎಂದು ಹೇಳಿದ್ದಾರೆ. ಹಾಗೇ, ಪ್ರತಿಪಕ್ಷಗಳ ನಾಯಕರನ್ನು ಒಗ್ಗೂಡಿಸಲು ನಾನು ಶೀಘ್ರದಲ್ಲೇ ಅಭಿಯಾನ ಪ್ರಾರಂಭಿಸುತ್ತೇನೆ, ದೆಹಲಿಗೂ ಹೋಗುತ್ತೇನೆ’ ಎಂದು ನಿತೀಶ್ ಕುಮಾರ್ ಹೇಳಿದರು.
ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ ಕೊನೇ ವಾರದಲ್ಲಿ ಬಿಹಾರದ ಸೀಮಾಂಚಲಕ್ಕೆ ಭೇಟಿ ಕೊಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ನಿತೀಶ್ ಕುಮಾರ್ ‘ದಸರಾ ಸಮಯದಲ್ಲಿ ಅಮಿತ್ ಶಾ ಸೀಮಾಂಚಲ್ಗೆ ಆಗಮಿಸುತ್ತಿದ್ದಾರೆ. ಸೀಮಾಂಚಲ್ ಮುಸ್ಲಿಂ ಬಾಹುಳ್ಯವಿರುವ ಪ್ರದೇಶ. ಅಲ್ಲಿ ಅವರು ಬರುತ್ತಿರುವುದು ಕೋಮು ಸೌಹಾರ್ದತೆ ಕದಡಲು ಎಂಬುದೇ ಪಕ್ಕಾ ಆಗುತ್ತದೆ. ಮುಂದಿನ ಎರಡು ವರ್ಷ ತುಂಬ ಎಚ್ಚರಿಕೆಯಿಂದ ಇರಬೇಕು ಎಂದು ನಾನು ಜೆಡಿಯುದ ಸದಸ್ಯರಿಗೂ ಹೇಳುತ್ತೇನೆ. ನಮ್ಮ ವಿರುದ್ಧ ಯಾವುದೇ ಸ್ವರೂಪದ ಪಿತೂರಿಯೂ ನಡೆಯಬಹುದು’ ಎಂದೂ ತಿಳಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ ಗೆದ್ದಿದ್ದೇ ಜೆಡಿಯು ಸಹಾಯದಿಂದ. ಆದರೆ 2020ರ ವಿಧಾನಸಭಾ ಚುನಾವಣೆಯಲ್ಲಿ ಯಾವೆಲ್ಲ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿಗಳು ನಿಂತಿದ್ದರೋ, ಅಲ್ಲಿ ಬಿಜೆಪಿಯವರು ಬೇರೆ ಪಕ್ಷಕ್ಕೆ ಮತ ಹಾಕಿದ್ದಾರೆ. ಹಾಗಾಗಿ ನಮ್ಮ ಪಕ್ಷ ಬರೀ 43 ಕ್ಷೇತ್ರಗಳಲ್ಲಿ ಮಾತ್ರ ಗೆದ್ದುಕೊಳ್ಳುವಂತಾಯಿತು. ಬಿಜೆಪಿ ದೇಶದಲ್ಲಿ ದ್ವೇಷ ಮತ್ತು ಕೋಮು ರಾಜಕೀಯ ನಡೆಸುತ್ತಿದೆ. ನಾನೀಗ ಬಿಜೆಪಿ ವಿರುದ್ಧ ಹೋರಾಡಲು ಸಜ್ಜಾಗಿದ್ದೇನೆ. ನಾನು ಒಂದು ಕೆಲಸಕ್ಕೆ ಬದ್ಧನಾದರೆ, ಅದನ್ನು ಕಾರ್ಯರೂಪಕ್ಕೆ ತರದೆ ಬಿಡುವುದಿಲ್ಲ. ಈ ಬಗ್ಗೆ ಜನರಿಗೂ ಗೊತ್ತು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: Nitish Kumar | ಮಣಿಪುರದಲ್ಲಿ ಬಿಜೆಪಿ ಜತೆ ಜೆಡಿಯು ವಿಲೀನ, ನಿತೀಶ್ ಕುಮಾರ್‌ಗೆ ಭಾರಿ ಹಿನ್ನಡೆ