ನೋಯ್ಡಾ: ಇಲ್ಲಿನ ಗ್ರ್ಯಾಂಡ್ ಒಮಾಕ್ಸ್ ಸೊಸೈಟಿಯಲ್ಲಿ ಮಹಿಳೆಯೊಬ್ಬರನ್ನು ನಿಂದಿಸಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಜೆಪಿ ನಾಯಕ ಶ್ರೀಕಾಂತ್ ತ್ಯಾಗಿ ತಾನು ಪೊಲೀಸರ ಮುಂದೆ ಬಂದು ಶರಣಾಗುವುದಾಗಿ ಹೇಳಿದ್ದಾನೆ.
ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಆತನ ಮೇಲೆ ಕೇಸು ದಾಖಲಿಸಿದ್ದ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ, ಆತ ಉತ್ತರಾಖಂಡಕ್ಕೆ ಪರಾರಿಯಾಗಿದ್ದ ಎನ್ನಲಾಗಿದೆ. ಈ ನಡುವೆ, ಆರೋಪಿ ಇದೇ ಸೊಸೈಟಿಯ ತಮ್ಮ ಮನೆಯ ಎದುರು ಅಕ್ರಮವಾಗಿ ಕಟ್ಟಿಸಿದ್ದ ನಿರ್ಮಾಣವನ್ನು ಬುಲ್ಡೋಜರ್ ತಂದು ಒಡೆದು ಹಾಕಲಾಯಿತು. ಜತೆಗೆ ಉತ್ತರ ಪ್ರದೇಶ ಪೊಲೀಸರು ಆತನ ಬಗ್ಗೆ ಮಾಹಿತಿ ನೀಡಿದವರಿಗೆ ೨೫,೦೦೦ ರೂ. ಬಹುಮಾನ ನೀಡುವುದಾಗಿ ಪ್ರಕಟಿಸಿದ್ದರು.
ಉತ್ತರ ಪ್ರದೇಶದಲ್ಲಿ ಸಮಾಜ ವಿರೋಧಿ ಕೃತ್ಯಗಳಲ್ಲಿ ತೊಡಗುವ ವ್ಯಕ್ತಿಗಳ ಆಸ್ತಿ ಪಾಸ್ತಿ ನಾಶ ಮಾಡುವ ಬುಲ್ಡೋಜರ್ ಕಾರ್ಯಾಚರಣೆಯನ್ನು ಇದೇ ಮೊದಲ ಬಾರಿಗೆ ಬಿಜೆಪಿ ನಾಯಕನ ಮೇಲೂ ಪ್ರಯೋಗ ಮಾಡಲಾಗಿದೆ. ಈ ಮೂಲಕ ಯೋಗಿ ಸರಕಾರ ತಾನು ಪಕ್ಷ ಬೇಧ ನೋಡುವುದಿಲ್ಲ ಎಂಬ ಸಂದೇಶ ರವಾನಿಸಿತ್ತು. ಉತ್ತರ ಪ್ರದೇಶ ಪೊಲೀಸರ ಈ ಕಾರ್ಯಾಚರಣೆ ಸೊಸೈಟಿ ನಿವಾಸಿಗಳು ಮಾತ್ರವಲ್ಲ ಸಾರ್ವಜನಿಕ ವಲಯದಲ್ಲೂ ಭಾರಿ ಪ್ರಶಂಸೆ ಪಡೆದಿತ್ತು. ಇಷ್ಟಕ್ಕೇ ಬಿಡದ ಪೊಲೀಸರು ನೋಯ್ಡಾದಲ್ಲಿರುವ ಆತನಿಗೆ ಸೇರಿದ ಕೆಲವು ಬಾಡಿಗೆ ಕಟ್ಟಡಗಳ ಮೇಲೂ ಕಣ್ಣಿಟ್ಟಿದ್ದು ಅವುಗಳಿಗೂ ನೋಟಿಸ್ ನೀಡಿದ್ದಾರೆ.
ಶ್ರೀಕಾಂತ್ ತ್ಯಾಗಿ ಗ್ರ್ಯಾಂಡ್ ಒಮಾಕ್ಸ್ ಸೊಸೈಟಿಯಲ್ಲಿರುವ ತನ್ನ ಮನೆಯ ಎದುರು ಅಕ್ರಮ ನಿರ್ಮಾಣ ಮಾಡಿದ್ದಲ್ಲದೆ, ಅಲ್ಲಿರುವ ಪಾರ್ಕನ್ನೂ ಅತಿಕ್ರಮಿಸಲು ಮುಂದಾಗಿದ್ದ. ಇದನ್ನು ಪ್ರಶ್ನಿಸಿದ್ದಕ್ಕೇ ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿತ್ತು.
ಈಗ ಉತ್ತರ ಪ್ರದೇಶ ಸರಕಾರದ ಕ್ರಮದಿಂದಾಗಿ ಭಯಗೊಂಡಿರುವ ತ್ಯಾಗಿ ಶರಣಾಗಲು ನಿರ್ಧರಿಸಿದ್ದಾನೆ.
ಇದನ್ನೂ ಓದಿ| Bulldozer attack| ಮಹಿಳೆಯನ್ನು ನಿಂದಿಸಿದ ಬಿಜೆಪಿ ನಾಯಕನ ಮನೆಯನ್ನೇ ಪುಡಿಗಟ್ಟಿದ ಯೋಗಿ ಸರಕಾರ