Site icon Vistara News

Lok Sabha Election: ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಈ ಬಾರಿ ಹೊಸ ಮಾನದಂಡ! ಹೊಸ ಮುಖಗಳಿಗೆ ಚಾನ್ಸ್

BJP meeting

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಗೆ (Lok Sabha Election) ಭಾರತೀಯ ಜನತಾ ಪಕ್ಷ (BJP) ತನ್ನ ಅಭ್ಯರ್ಥಿಗಳ ಪಟ್ಟಿಯ ಮೊದಲ ಭಾಗವನ್ನು ಇಂದು (ಮಾರ್ಚ್​ 1ರಂದು) ಪ್ರಕಟಿಸುವ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಮುಂಬರುವ ಚುನಾವಣಾ ಸಮರದಲ್ಲಿ ಪಕ್ಷವನ್ನು ಪ್ರತಿನಿಧಿಸಲು ಸಜ್ಜಾಗಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಹೊಸ ಮಾನದಂಡಗಳನ್ನು ಅನುಸರಿಸಿದೆ. ಅಭ್ಯರ್ಥಿಯ ಸಾರ್ವಜನಿಕ ಚಟುವಟಿಕೆ, ಆಂತರಿಕ ಮೌಲ್ಯಮಾಪನಗಳು ಮತ್ತು ಉನ್ನತ ಮಟ್ಟದ ಕಾರ್ಯತಂತ್ರ ಸೇರಿದಂತೆ ಬಹು ಹಂತದ ಪ್ರಕ್ರಿಯೆ ಪ್ರಕಾರ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಹೊಸ ಮುಖಗಳಿಗೆ ಆದ್ಯತೆ ನೀಡಲಾಗಿದೆ. ಹೀಗಾಗಿ 60ರಿಂದ70 ರಷ್ಟು ಹಾಲಿ ಸಂಸದರಿಗೆ ಟಿಕೆಟ್​ ಸಿಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದ (ಫೆಬ್ರುವರಿ 29ರಂದು) ತಡರಾತ್ರಿ ನಡೆದ ಸಭೆಯಲ್ಲಿ ಅಭ್ಯರ್ಥಿಗಳ ಕುರಿತು ಸಮಗ್ರ ಚರ್ಚೆ ನಡೆಸಲಾಗಿದೆ. ಪ್ರತಿಯೊಂದು ಹಂತದಲ್ಲಿ ಪಕ್ಷದ ವಿಜಯಕ್ಕೆ ಆಗುವ ಅನುಕೂಲತೆಗಳನ್ನು ಚರ್ಚಿಸಲಾಗಿದೆ.

ತಳಮಟ್ಟದಿಂದ ಪ್ರತಿಕ್ರಿಯೆ ಪಡೆಯಲು ಬಿಜೆಪಿ ತಂತ್ರಜ್ಞಾನವನ್ನು ಬಳಸಿಕೊಂಡಿದೆ. ನಮೋ ಆ್ಯಪ್ ಬಳಸಿ, ಹಾಲಿ ಸಂಸದರ ಕಾರ್ಯಕ್ಷಮತೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಾರ್ವಜನಿಕರಿಗೆ ವೇದಿಕೆ ಕಲ್ಪಿಸಲಾಗಿತ್ತು. ಸಾಂಪ್ರದಾಯಿಕ ವಿಧಾನಗಳಿಗಿಂತ ಭಿನ್ನವಾಗಿ ಪ್ರತಿ ಕ್ಷೇತ್ರದ ಮೂವರು ಅತ್ಯಂತ ಜನಪ್ರಿಯ ನಾಯಕರ ಬಗ್ಗೆ ವಿಚಾರಿಸಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಪಕ್ಷದ ಯೋಜನೆ ಪ್ರಕಾರ ಸ್ಥಳೀಯ ಜನರ ಭಾವನೆಗಳು ಮತ್ತು ಆಕಾಂಕ್ಷೆಗಳನ್ನು ಅಭ್ಯರ್ಥಿ ಪ್ರತಿನಿಧಿಸುತ್ತಿದ್ದಾರೆಯೇ ಎಂಬುದನ್ನೂ ಪರಿಶೀಲನೆ ಮಾಡಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ಬಿಜೆಪಿ ತನ್ನ ಸಂಸದರಿಂದ ನಿರಂತರವಾಗಿ ಕಾರ್ಯಕ್ಷಮತೆ ವರದಿ ಪಡೆದುಕೊಂಡಿದೆ. ಅವರ ಕೆಲಸದ ಬಗ್ಗೆ ಮೌಲ್ಯಮಾಪನ ಮಾಡಿದೆ. ಅವರ ಕಾಳಜಿಗಳನ್ನು ಪರಿಹರಿಸಿದೆ. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಬಲಪಡಿಸಲು ಪ್ರತಿ ಕ್ಷೇತ್ರದ ಸಮಗ್ರ ವರದಿಗಳನ್ನು ಸಂಗ್ರಹಿಸಲು ಖಾಸಗಿ ಸಮೀಕ್ಷೆಗಳನ್ನೂ ಆಯೋಜಿಸಿದೆ.

ಸಚಿವರಿಗೆ ಜವಾಬ್ದಾರಿ

ಲೋಕಸಭೆ ಕ್ಷೇತ್ರಗಳಿಗೆ ಭೇಟಿ ನೀಡಿ ವರದಿಗಳನ್ನು ಸಂಗ್ರಹಿಸುವುದು ಮತ್ತು ಹಾಲಿ ಸಂಸದರ ಕಾರ್ಯಕ್ಷಮತೆಯ ಬಗ್ಗೆ ಒಳನೋಟಗಳನ್ನು ಪಡೆಯುವ ಕೆಲಸವನ್ನು ಹಾಲಿ ಕೇಂದ್ರ ಸಚಿವರಿಗೆ ವಹಿಸಲಾಗಿತ್ತು ಎಂದು ಹೇಳಲಾಗಿದೆ.

ಸಚಿವರು ಮತ್ತು ವಿಭಿನ್ನ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ನಂತರ ರಾಜ್ಯ ಮಟ್ಟದ ಚುನಾವಣಾ ಸಮಿತಿ ಸಭೆಗಳಲ್ಲಿ ಒಟ್ಟುಗೂಡಿಸಿ ಅಂತಿಮ ಆಯ್ಕೆ ಪ್ರಕ್ರಿಯೆಗೆ ಶುರು ಮಾಡಲಾಗಿದೆ. ಈ ಚರ್ಚೆಗಳ ನಂತರ ಪ್ರತಿ ರಾಜ್ಯದ ಪ್ರಮುಖ ಬಿಜೆಪಿ ತಂಡವು ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ, ಗೃಹ ಸಚಿವ ಅಮಿತ್​​ ಶಾ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರಂತಹ ಉನ್ನತ ನಾಯಕರ ಜತೆ ಚರ್ಚೆ ನಡೆಸಿದೆ.

ಕಳಪೆ ಸಾಧನೆ ತೋರಿದ್ದರೆ ಮುಲಾಜಿಲ್ಲ

ಇತರ ಪಕ್ಷಗಳಿಂದಲೂ ಅಭ್ಯರ್ಥಿಗಳನ್ನು ಸೆಳೆಯುವ ಪ್ರಯತ್ನವೂ ನಡೆದಿದೆ. ಈ ಮೂಲಕ ಬಿಜೆಪಿ ವ್ಯಾಪ್ತಿ ವಿಸ್ತರಣೆ ಮಾಡಲು ಯತ್ನಿಸಲಾಗಿದೆ. ಎಲ್ಲದಕ್ಕಿಂತ ಪ್ರಮುಖವಾಗಿ ಕಳಪೆ ಸಾಧನೆ ತೋರಿದ ಸಂಸದರಿಗೆ ಟಿಕೆಟ್ ನೀಡದಿರುವ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೊಸ ಮುಖಗಳಿಗೆ ದಾರಿ ಮಾಡಿಕೊಡಲು ಕನಿಷ್ಠ 60-70 ಹಾಲಿ ಸಂಸದರಿಗೆ ಈ ಬಾರಿ ಟಿಕೆಟ್‌ ನಿರಾಕರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ : Lok Sabha Election : ಬಿಜೆಪಿಯಿಂದ ಮಧ್ಯರಾತ್ರಿ ಸಭೆ; 100 ಅಭ್ಯರ್ಥಿಗಳ ಪಟ್ಟಿ ಫೈನಲ್​

ಇತರ ಹಿಂದುಳಿದ ವರ್ಗಗಳ (ಒಬಿಸಿ) ಸಮುದಾಯಕ್ಕೆ ಸೇರಿದ ಅನೇಕ ಸಂಸದರು ಮತ್ತೆ ಸ್ಪರ್ಧಿಸುವ ನಿರೀಕ್ಷೆಯಿದೆ ಎಂದು ಪಕ್ಷ ಹೇಳಿದೆ. 2019ರ ಚುನಾವಣೆಯಲ್ಲಿ ಬಿಜೆಪಿ 85 ಒಬಿಸಿ ಸಂಸದರನ್ನು ಗೆಲ್ಲಿಸಿತ್ತು.

ಹೊಸ ಅಭ್ಯರ್ಥಿಗಳು, ಹಳೆಯ ಮುಖಗಳು

ಫೆಬ್ರುವರಿ 29ರಿಂದ ರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 3.30ರವರೆಗೆ ನಡೆದ ಸಭೆಯಲ್ಲಿ, ಬಿಜೆಪಿ 2019ರ ಚುನಾವಣೆಯಲ್ಲಿ ಕಳೆದುಕೊಂಡ ಸ್ಥಾನಗಳನ್ನು ಮರು ವಶಪಡಿಸಿಕೊಳ್ಳುವ ಬಗ್ಗೆಯೂ ವಿಶೇಷವಾಗಿ ಚರ್ಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಭೂಪೇಂದರ್ ಯಾದವ್, ಧರ್ಮೇಂದ್ರ ಪ್ರಧಾನ್ ಮತ್ತು ಮನ್ಸುಖ್ ಮಂಡಾವಿಯಾ ಸೇರಿದಂತೆ ಹಲವಾರು ಕೇಂದ್ರ ಸಚಿವರು ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲೇಬೇಕಾಗುತ್ತದೆ. ರಾಜ್ಯಸಭೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಈ ಸಚಿವರನ್ನು ಕಣಕ್ಕಿಳಿಸಿರಲಿಲ್ಲ.

Exit mobile version