Site icon Vistara News

Real Shiv Sena | ನಿಜವಾದ ಶಿವಸೇನೆ ಯಾರದ್ದು? ಉದ್ಧವ್‌ ಅರ್ಜಿ ವಜಾಗೊಳಿಸಿದ ಸುಪ್ರೀಂ, ಶಿಂಧೆಗೆ ಮುನ್ನಡೆ

Shiv

ನವದೆಹಲಿ: ನಿಜವಾದ ಶಿವಸೇನೆ ಯಾರದ್ದು ಹಾಗೂ ಶಿವಸೇನೆಯ ಚಿಹ್ನೆ (ಬಿಲ್ಲು ಮತ್ತು ಬಾಣ) (Real Shiv Sena) ಯಾರಿಗೆ ಸೇರಬೇಕು ಎಂಬುದರ ಕುರಿತು ಚುನಾವಣೆ ಆಯೋಗವು ತೀರ್ಮಾನ ತೆಗೆದುಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಇದರಿಂದ ಉದ್ಧವ್‌ ಠಾಕ್ರೆ (Uddhav Thackeray) ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಮುಖ್ಯಮಂತ್ರಿ ಏಕನಾಥ್‌ ಶಿಂಧೆ (Eknath Shinde) ಅವರು ಮೇಲುಗೈ ಸಾಧಿಸಿದಂತಾಗಿದೆ. ಹಾಗೆಯೇ, ಶಿವಸೇನೆ ಶಾಸಕರ ವಿರುದ್ಧ ಹೊರಡಿಸಿದ ಅನರ್ಹತೆ ನೋಟಿಸ್‌ ಕುರಿತು ಯಾವುದೇ ತೀರ್ಮಾನ ತೆಗೆದುಕೊಳ್ಳದಂತೆಯೂ ಸ್ಪೀಕರ್‌ ಅವರಿಗೆ ಸೂಚಿಸಿದೆ.

“ನಮ್ಮ ಬಣವನ್ನೇ ನಿಜವಾದ ಶಿವಸೇನೆ ಎಂದು ಗುರುತಿಸಿ, ಪಕ್ಷದ ಚಿಹ್ನೆ ನೀಡಬೇಕು” ಎಂದು ಚುನಾವಣೆ ಆಯೋಗಕ್ಕೆ ಏಕನಾಥ್‌ ಶಿಂಧೆ ಅವರು ಮನವಿ ಮಾಡಿದ್ದರು. ಆದರೆ, ಪ್ರಕರಣವು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ನ್ಯಾಯಾಲಯವು, “ನಿಜವಾದ ಶಿವಸೇನೆ ಹಾಗೂ ಚಿಹ್ನೆ ಕುರಿತು ಸದ್ಯಕ್ಕೆ ಚುನಾವಣೆ ಆಯೋಗವು ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು” ಎಂದು ಸೂಚಿಸಿತ್ತು. ಈಗ ಏಕನಾಥ್‌ ಶಿಂಧೆ ಮನವಿ ಆಧರಿಸಿ ತೀರ್ಮಾನ ತೆಗೆದುಕೊಳ್ಳಬಹುದು ಎಂದು ಅನುಮತಿ ನೀಡಿದೆ.

ಹಾಗೊಂದು ವೇಳೆ ಚುನಾವಣೆ ಆಯೋಗವು ಏಕನಾಥ್‌ ಶಿಂಧೆ ಅವರ ಮನವಿಯನ್ನು ಪರಿಗಣಿಸಿ, ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿ, ಚಿಹ್ನೆ ನೀಡಿದರೆ ಉದ್ಧವ್‌ ಠಾಕ್ರೆ ಅವರಿಗೆ ಹಿನ್ನಡೆಯಾಗಲಿದೆ. ಶಿವಸೇನೆಯ 55 ಶಾಸಕರ ಪೈಕಿ ಶಿಂಧೆ ಪರ 40 ಶಾಸಕರು ಶಿಂಧೆ ಪರವಾಗಿದ್ದಾರೆ ಎಂದು ತಿಳಿದುಬಂದಿದೆ. ನಿಯಮದ ಪ್ರಕಾರ, ಯಾವುದೇ ಒಂದು ಪಕ್ಷದ ಬಣದ ಪರ ಮೂರನೇ ಎರಡರಷ್ಟು ಶಾಸಕರ ಬೆಂಬಲ ಇದ್ದರೆ, ಅವರ ಬಣಕ್ಕೇ ಹೊಸ ಚಿಹ್ನೆ ನೀಡಬಹುದಾಗಿದೆ. ಕೆಲ ತಿಂಗಳ ಹಿಂದೆ ಶಿವಸೇನೆ ವಿರುದ್ಧ ಬಂಡಾಯವೆದ್ದ ಶಿಂಧೆ, ಬಿಜೆಪಿ ಜತೆಗೂಡಿ ಮುಖ್ಯಮಂತ್ರಿಯಾಗಿದ್ದಾರೆ.

ಇದನ್ನೂ ಓದಿ | ಶಿಂಧೆ ಬಣ ಸೇರಿದ 12 ರಾಜ್ಯಗಳ ಶಿವಸೇನೆ ಮುಖ್ಯಸ್ಥರು; ಉದ್ಧವ್​ ಠಾಕ್ರೆಗೆ ಮತ್ತಷ್ಟು ಹಿನ್ನಡೆ

Exit mobile version