ನವದೆಹಲಿ: ಲಾಜಿಸ್ಟಿಕ್ಸ್ ಸೇವೆಯನ್ನು (courier services ) ಒದಗಿಸುವ ಬ್ಲೂ ಡಾರ್ಟ್ ಎಕ್ಸ್‌ಪ್ರೆಸ್ (Blue Dart Express) ಕಂಪನಿಯು ತನ್ನ ‘ಡಾರ್ಟ್ ಪ್ಲಸ್’ (Dart Plus) ಅನ್ನು ಮರು ಬ್ರ್ಯಾಂಡಿಂಗ್ ಮಾಡಿದ್ದು, ‘ಭಾರತ್ ಡಾರ್ಟ್'(Blue Dart) ಎಂದು ಮರುನಾಮಕರಣ ಮಾಡಿದೆ. ಈ ಕುರಿತು ಷೇರು ಪೇಟೆಗೆ ಮಾಹಿತಿ ನೀಡಿರುವ ಬ್ಲೂ ಡಾರ್ಟ್, ಮರು ಬ್ರ್ಯಾಂಡಿಂಗ್ ಹಿಂದೆ ಕಂಪನಿಯು ತೀವ್ರ ಶೋಧನೆ ಮತ್ತು ಸಂಶೋಧನಾ ಪ್ರಕ್ರಿಯೆಗಳನ್ನು ಪೂರೈಸಿದೆ ಎಂದು ತಿಳಿಸಿದೆ. ಬ್ಲೂ ಡಾರ್ಟ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಬಾಲ್ಫೋರ್ ಮ್ಯಾನುಯೆಲ್, “ದೇಶದ ಉದ್ದಗಲಕ್ಕೂ ನಾವು ಸೇವೆ ಸಲ್ಲಿಸುವುದನ್ನು ಮುಂದುವರಿಸುವುದರಿಂದ ಈ ಮರುಬ್ರಾಂಡಿಂಗ್ ನಮಗೆ ರೋಮಾಂಚನಕಾರಿ ರೂಪಾಂತರವನ್ನು ಪ್ರತಿನಿಧಿಸುತ್ತದೆ. ಭಾರತ್ ಡಾರ್ಟ್ ನಮ್ಮ ಕಂಪನಿಗೆ ಹೊಸ ಮತ್ತು ಉತ್ತೇಜಕ ಅಧ್ಯಾಯದ ಮೊದಲ ಹೆಜ್ಜೆಯಾಗಿದೆ,” ಎಂದು ತಿಳಿಸಿದ್ದಾರೆ.
ಭಾರತ್ ಡಾರ್ಟ್, ಭಾರತದಲ್ಲಿ ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್ ಸೇವೆಯನ್ನು ಮರುವ್ಯಾಖ್ಯಾನಿಸಲು ಸಿದ್ಧವಾಗಿದೆ. ಸಾಟಿಯಿಲ್ಲದ ವೇಗ, ಕವರೇಜ್ ಮತ್ತು ಎಲ್ಲಾ ಗಾತ್ರದ ವ್ಯವಹಾರಗಳಿಗೆ ಬೆಂಬಲವನ್ನು ನೀಡುತ್ತದೆ ಎಂದು ಕಂಪನಿಯು ಷೇರು ಪೇಟೆಗೆ ತಿಳಿಸಿದೆ.
ಇಂಡಿಯಾ ಬದಲಿಗೆ ಭಾರತ್ ಹೆಸರು
ಇತ್ತೀಚೆಗೆ ಮುಕ್ತಾಯವಾದ ಜಿ20 ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಿದ್ದ ನೇಮ್‌ಪ್ಲೇಟ್‌ನಲ್ಲಿ ಇಂಡಿಯಾ ಬದಲಿಗೆ ಭಾರತ್ ಎಂದು ಬರೆಯಲಾಗಿತ್ತು. ಇಂಡಿಯಾ ಬದಲಿಗೆ ಭಾರತ್ ಎಂಬ ಹೆಸರನ್ನು ಅಧಿಕೃತಗೊಳಿಸಲಾಗುತ್ತಿದೆ ಎಂದ ಸುದ್ದಿಗೆ, ನೇಮ್‌ಪ್ಲೇಟ್ ಮತ್ತಷ್ಟು ಪುಷ್ಟಿ ನೀಡಿತ್ತು. ಇದಾದ ಬೆನ್ನಲ್ಲೇ ಬ್ಲೂ ಡಾರ್ಟ್ ಕೂಡ ತನ್ನ ಸೇವೆಯನ್ನು ಭಾರತ್ ಡಾರ್ಟ್ ಎಂದು ಮರು ಬ್ರ್ಯಾಂಡಿಂಗ್ ಮಾಡಿಕೊಂಡಿದೆ.
ಇಂಡಿಯಾವನ್ನು ಭಾರತ್, ಭಾರತ ಮತ್ತು ಹಿಂದೂಸ್ತಾನ ಎಂದೂ ಕರೆಯಲಾಗುತ್ತಿದೆ. ಭಾರತಕ್ಕೆ ಇಂಗ್ಲಿಷ್‌ನಲ್ಲಿ ಮಾತ್ರ ಇಂಡಿಯಾ ಎಂದು ಹೇಳಲಾಗುತ್ತಿದೆ. ಭಾರತೀಯ ಪ್ರಾದೇಶಿಕ ಭಾಷೆಗಳಲ್ಲಿ ಭಾರತ ಎಂದೇ ಬಳಸಲಾಗುತ್ತದೆ. ಸರ್ಕಾರಿ ದಾಖಲೆಗಳು ಹಾಗೂ ಜನರು ಕೂಡ ಭಾರತ ಎಂದೇ ಬಳಸುತ್ತಾರೆ.
ಈ ಸುದ್ದಿಯನ್ನೂ ಓದಿ: India vs Bharat: ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಎಂದವರೇ ಈಗ ಇಂಡಿಯಾ ಹೆಸರಿಗೆ ಬೆಚ್ಚಿ ಬಿದ್ದಿದ್ದಾರೆ: ಸಿದ್ದರಾಮಯ್ಯ
ಪ್ರತಿಪಕ್ಷಗಳು ತಮ್ಮ ಕೂಟಕ್ಕೆ ಇಂಡಿಯಾ ಎಂದು ಹೆಸರು ಇಟ್ಟುಕೊಂಡ ಬಳಿಕ ಸರ್ಕಾರವು ಇಂಡಿಯಾ ಪದ ಬದಲಿಗೆ ಭಾರತ್ ಎಂದು ಬಳಸಲು ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ. ಸೆ.18ರಿಂದ ಆರಂಭವಾಗಲಿರುವ ವಿಶೇಷ ಸಂಸತ್ ಅಧಿವೇಶನದ ವೇಳೆ, ಇಂಡಿಯಾ ಪದ ಬದಲಿಗೆ ಭಾರತ್ ಬಳಸುವ ಕುರಿತು ವಿಧೇಯಕವನ್ನು ಕೇಂದ್ರ ಸರ್ಕಾರ ಮಂಡಿಸಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಭಾರತ ಸರ್ಕಾರವು ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ.
ಆದರೆ, ಜಿ20 ಶೃಂಗಕ್ಕೆ ಆಗಮಿಸಿದ ವಿಶ್ವ ನಾಯಕರಿಗೆ ಒದಗಿಸಲಾದ ಆಮಂತ್ರಣ ಪತ್ರಿಕೆಯಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂದು ನಮೂದಿಸಿರುವುದು ಈ ಚರ್ಚೆಗೆ ಹೆಚ್ಚು ವ್ಯಾಪಕತೆಯನ್ನು ನೀಡಿತು. ಆದರೆ, ಈವರೆಗೂ ಈ ಬಗ್ಗೆ ಯಾವುದೇ ಸ್ಪಷ್ಟತೆ ದೊರೆತಿಲ್ಲ. ವಿಶೇಷ ಸಂಸತ್ ಅಧಿವೇಶನ ಆರಂಭವಾದ ಬಳಿಕ ಗೊಂದಲ ಪೂರ್ತಿಯಾಗಿ ಬಗೆಹರಿಯುಬಹುದು. ಆದರೆ, ವಾಸ್ತವದಲ್ಲಿ ಭಾರತ್ ಎಂಬ ಹೆಸರನ್ನು ಅಧಿಕೃತವಾಗಿಯೇ ಬಳಸಲಾಗುತ್ತದೆ.