Site icon Vistara News

ಮಧುರ ಕಂಠದ ಗಾಯಕ ಭೂಪಿಂದರ್‌ ಸಿಂಗ್‌ ಇನ್ನಿಲ್ಲ

bhupinder singh

ಮುಂಬಯಿ: ಖ್ಯಾತ ಗಾಯಕ ಭೂಪಿಂದರ್ ಸಿಂಗ್ ಸೋಮವಾರ ಸಂಜೆ 7:45ಕ್ಕೆ ಮುಂಬಯಿಯ ಅಂಧೇರಿಯಲ್ಲಿರುವ ಕ್ರಿಟಿಕೇರ್ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.

ಭೂಪಿಂದರ್‌ ಸಿಂಗ್‌ ಅವರನ್ನು ಹತ್ತು ದಿನಗಳ ಹಿಂದೆ ಕ್ರಿಟಿಕೇರ್ ಏಷ್ಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರಿಗೆ ಕೋವಿಡ್‌ ಸೋಂಕು ತಗುಲಿತ್ತು. ಇದರ ಜೊತೆಗೆ ಕರುಳಿನ ಕಾಯಿಲೆಯೂ ಇತ್ತು. ಆದರೆ ಕೋವಿಡ್‌ ಚಿಕಿತ್ಸೆಗಾಗಿ ಬಂದಾಗ ಕರುಳಿನ ಸಮಸ್ಯೆ ಇರುವುದು ಗೊತ್ತಾಗಿತ್ತು. ಸೋಮವಾರ ಬೆಳಿಗ್ಗೆ ಅವರ ಸ್ಥಿತಿ ಹದಗೆಟ್ಟಿದ್ದು, ಅವರನ್ನು ವೆಂಟಿಲೇಟರ್‌ನಲ್ಲಿ ಇಡಲಾಗಿತ್ತು. ನಂತರ ಅವರು ಹೃದಯಸ್ತಂಭನಕ್ಕೆ ಒಳಗಾದರು.

ಭೂಪಿಂದರ್ ಸಿಂಗ್ ಅವರು ದಿಲ್ ಢೂಂಡ್ತಾ ಹೈ, ದೋ ದಿವಾನಾ ಶೆಹರ್‌ ಮೇ, ನಾಮ್ ಗಮ್ ಜಾಯೇಗಾ, ಏಕ್ ಅಕೇಲಾ ಈಸ್ ಶಾಹೆರ್ ಮೇ, ಬೀಟಿ ನಾ ಬೀಟೈ ರೈನಾ, ಹುಜೂರ್ ಈಸ್ ಕದರ್ ಭೀ ನಾ ಇತ್ರಾ ಕೆ ಚಲಿಯೇ, ಕಿಸಿ ನಜರ್ ಕೋ ತೇರಾ ಇಂತೇಜಾರ್ ಆಜ್ ಭಿ ಹೈ, ಬದಲೋನ್ ಸೇ ಕಾತ್ ಕಾಟ್ ಕೇ ಮುಂತಾದ ಹಾಡುಗಳಿಗೆ ಹೆಸರುವಾಸಿಯಾಗಿದ್ದಾರೆ.

ಅಮೃತಸರದಲ್ಲಿ ಜನಿಸಿದ ಭೂಪಿಂದರ್ ತಮ್ಮ ತಂದೆಯಿಂದ ಸಂಗೀತ ಕಲಿತರು. ಆಲ್ ಇಂಡಿಯಾ ರೇಡಿಯೊ ಮೂಲಕ ವೃತ್ತಿಜೀವನ ಆರಂಭಿಸಿದರು. ದೆಹಲಿ ದೂರದರ್ಶನ ಕೇಂದ್ರದಲ್ಲೂ ದುಡಿದರು. 1962ರಲ್ಲಿ ಸಂಗೀತ ಸಂಯೋಜಕ ಮದನ್ ಮೋಹನ್ ಅವರು ಪಾರ್ಟಿಯಲ್ಲಿ ಇವರ ಗಿಟಾರ್ ವಾದನ ಕೇಳಿದರು ಮುಂಬಯಿಗೆ ಕರೆದರು. ʻಹಕೀಕತ್‌ʼನಲ್ಲಿ ಮೊಹಮ್ಮದ್ ರಫಿ, ತಲತ್ ಮಹಮೂದ್ ಮತ್ತು ಮನ್ನಾ ಡೇ ಅವರೊಂದಿಗೆ ಹಾಡಲು ಅವಕಾಶ ನೀಡಿದರು. ಅವರ ಭಾರವಾದ ಧ್ವನಿ ಅವರಿಗೆ ಅಸ್ಮಿತೆಯನ್ನು ಒದಗಿಸಿತ್ತು. ಸಿಂಗ್ ಹಲವಾರು ಸ್ವತಂತ್ರ ಸಂಗೀತ ಆಲ್ಬಂಗಳನ್ನು ಸಹ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: ಸಂತೂರ್‌ ದಂತಕತೆ ಪಂಡಿತ್‌ ಶಿವಕುಮಾರ್‌ ಶರ್ಮಾ ಇನ್ನಿಲ್ಲ

Exit mobile version