ಲಕ್ನೋ: ದೆಹಲಿ, ಬೆಂಗಳೂರು, ಚೆನ್ನೈ, ಅಹಮದಾಬಾದ್ ಶಾಲೆಗಳ ನಂತರ ಇದೀಗ ಕಾನ್ಪುರ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ (Bomb Threat). ಕಾನ್ಪುರದ ಸುಮಾರು 10 ಶಾಲೆಗಳು ಬುಧವಾರ ಬೆದರಿಕೆ ಕರೆಗಳನ್ನು ಸ್ವೀಕರಿಸಿವೆ ಎಂದು ಮೂಲಗಳು ತಿಳಿಸಿವೆ. ಇಮೇಲ್ ಮೂಲಕ ಈ ಬೆದರಿಕೆ ಬಂದಿದೆ.
ಕೆಲವು ದಿನಗಳ ಹಿಂದೆ ದೆಹಲಿ-ಎನ್‌ಸಿಆರ್, ಅಹಮದಾಬಾದ್ ಶಾಲೆಗಳಿಗೆ ಬಂದ ರಷ್ಯಾದ ಅದೇ ಸರ್ವರ್‌ಗೆ ಲಿಂಕ್ ಮಾಡಲಾದ ಇಮೇಲ್ ಮೂಲಕ ಕಾನ್ಪುರ ಶಾಲೆಗಳಿಗೆ ಬೆದರಿಕೆ ಒಡ್ಡಲಾಗಿದೆ ಎಂದು ವರದಿ ತಿಳಿಸಿದೆ. ಸದ್ಯಕ್ಕೆ ಶಾಲೆಗಳಿಂದ ಎಲ್ಲರನ್ನೂ ತೆರವು ಮಾಡಲಾಗಿದ್ದು, ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆಗೆ ನಡೆಸುತ್ತಿದ್ದಾರೆ. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎನ್ನಲಾಗಿದೆ. ಅದಾಗ್ಯೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಸುಮಾರು ಎರಡು ವಾರಗಳ ಅಂತರದಲ್ಲಿ ದೇಶದ ವಿವಿಧ ನಗರಗಳಿಗೆ ಈ ರೀತಿಯ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ದೆಹಲಿ, ನೋಯ್ಡಾ, ಲಕ್ನೋ, ಅಹಮದಾಬಾದ್ ಬಳಿಕ ಈ ಪಟ್ಟಿಗೆ ಇದೀಗ ಕಾನ್ಪುರ ಕೂಡ ಸೇರಿಕೊಂಡಿದೆ. ಇದು ಆರಂಭವಾಗಿದ್ದು ಮೇ 1ರಿಂದ. ಅಂದು ದೆಹಲಿ, ನೋಯ್ಡಾ ಮತ್ತು ಲಕ್ನೋದ ಸುಮಾರು 100 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಭೀಕರ ಸ್ಫೋಟ ನಡೆಸುವುದಾಗಿ ಎಚ್ಚರಿಸಲಾಗಿತ್ತು. ಕೂಡಲೇ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿತ್ತು. ಬಳಿಕ ಇದು ಹುಸಿ ಕರೆ ಎನ್ನುವುದು ಸಾಬೀತಾಗಿತ್ತು.
ಬಳಿಕ ಮೇ 6ರಂದು ಗುಜರಾತ್‌ನ ಅಹಮದಾಬಾದ್‌ನ ಹಲವು ಶಾಲೆಗಳಿಗೆ ಇಮೇಲ್ ಮೂಲಕವೇ ಬೆದರಿಕೆ ಬಂದಿತ್ತು. ರಾಜ್ಯ ಪೊಲೀಸ್ ಮತ್ತು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ (Bomb Detection and Disposal Squad) ತಂಡಗಳು ಶಾಲೆಗಳಲ್ಲಿ ವ್ಯಾಪಕ ಶೋಧ ನಡೆಸಿದ್ದವು. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡು ಬಂದಿರಲಿಲ್ಲ. ರಷ್ಯಾದ ಡೊಮೇನ್ mail.ruನಿಂದಲೇ ಈ ಬೆದರಿಕೆಯನ್ನೂ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ದಿಲ್ಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ
ದಿಲ್ಲಿಯ ನಾಲ್ಕು ಆಸ್ಪತ್ರೆಗಳಿಗೂ ಇಮೇಲ್ ಮೂಲಕ ಮಂಗಳವಾರ (ಮೇ 14) ಹುಸಿ ಬಾಂಬ್ ಕರೆ ಬಂದಿತ್ತು. ದೀಪ್ ಚಂದ್ ಬಂಧು ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ದಾದಾ ದೇವ್ ಆಸ್ಪತ್ರೆ ಮತ್ತು ಹೆಡ್ಗೇವಾರ್ ಆಸ್ಪತ್ರೆಗಳಿಗೆ ಅನಾಮಧೇಯ ಇ ಮೇಲ್ ಬಂದಿದ್ದು, ಬಾಂಬ್ ಸ್ಫೋಟಿಸುವುದಾಗಿ ಸಂದೇಶದಲ್ಲಿ ತಿಳಿಸಲಾಗಿತ್ತು. ದಿಲ್ಲಿ ಪೊಲೀಸರು ಈ ಬೆದರಿಕೆ ಇಮೇಲ್ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದು, ನಾಲ್ಕು ಆಸ್ಪತ್ರೆಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: Bomb Threat: ದಿಲ್ಲಿಯ ನಾಲ್ಕು ಆಸ್ಪತ್ರೆಗಳಿಗೆ ಬಾಂಬ್ ಬೆದರಿಕೆ; ಇ-ಮೇಲ್ ಮೂಲಕ ಸಂದೇಶ ರವಾನೆ
ದೆಹಲಿ, ಅಹಮದಾಬಾದ್ ಸೇರಿ ಹಲವೆಡೆ ಶಾಲೆಗಳಿಗೆ ಬಾಂಬ್ ಬೆದರಿಕೆ ಒಡ್ಡಿದ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಗೃಹ ಸಚಿವಾಲಯವು, ಕಳೆದ ವಾರ ಈ ಕುರಿತು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು (SOP) ರಚಿಸಬೇಕು ಹಾಗೂ ವಿಸ್ತೃತ ಶಿಷ್ಟಾಚಾರಗಳನ್ನು ಸಿದ್ಧಪಡಿಸಬೇಕು ಎಂಬುದಾಗಿ ಆದೇಶ ಹೊರಡಿಸಿತ್ತು. ಅದರಲ್ಲೂ, ಈ ಕುರಿತು ದೆಹಲಿ ಪೊಲೀಸರು ತಪ್ಪು ಮಾಹಿತಿ ತಡೆದು, ಅನಗತ್ಯ ಆತಂಕವನ್ನು ನಿವಾರಿಸಲು ದೆಹಲಿ ಪೊಲೀಸರು ಹಾಗೂ ಶಾಲೆಗಳ ಆಡಳಿತ ಮಂಡಳಿಗಳು ಸಹಕಾರ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿತ್ತು.