ನವದೆಹಲಿ: ದಿಲ್ಲಿಯ ನಾಲ್ಕು ಆಸ್ಪತ್ರೆ(Hospitals)ಗಳಿಗೆ ಇ-ಮೇಲ್ ಮೂಲಕ ಮಂಗಳವಾರ ಬಾಂಬ್ ಕರೆ(Bomb Threat) ಬಂದಿವೆ. ದೀಪ್ ಚಂದ್ ಬಂಧು ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ದಾದಾ ದೇವ್ ಆಸ್ಪತ್ರೆ ಮತ್ತು ಹೆಡ್ಗೇವಾರ್ ಆಸ್ಪತ್ರೆಗಳಿಗೆ ಅನಾಮಧೇಯ ಇ-ಮೇಲ್(E-mail)ವೊಂದು ಬಂದಿದ್ದು, ಬಾಂಬ್ ಸ್ಫೋಟಿಸುವುದಾಗಿ ಸಂದೇಶ ಬಂದಿದೆ. ದಿಲ್ಲಿ ಅಗ್ನಿಶಾಮಕ ದಳ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಇನ್ನು ದಿಲ್ಲಿ ಪೊಲೀಸರು ಈ ಬೆದರಿಕೆ ಇ-ಮೇಲ್ ಬಗ್ಗೆ ತನಿಖೆ ಕೈಗೆತ್ತಿಕೊಂಡಿದ್ದು, ನಾಲ್ಕು ಆಸ್ಪತ್ರೆಗಳಲ್ಲಿ ಪೊಲೀಸರು ಬೀಡು ಬಿಟ್ಟಿದ್ದಾರೆ. ಇನ್ನು ಆಸ್ಪತ್ರೆಗಳಲ್ಲಿ ತೀವ್ರ ತಪಾಸಣೆ ಕೈಗೆತ್ತಿಕೊಳ್ಳಲಾಗಿದೆ. ದಿಲ್ಲಿಯ ಎನ್‌ಸಿಆರ್‌ನ 150ಕ್ಕೂ ಅಧಿಕ ಶಾಲೆಗಳಿಗೂ ಕೆಲವು ದಿನಗಳ ಹಿಂದೆ ಹುಸಿಬಾಂಬ್ ಕರರೆಬಂದಿತ್ತು. ರಷ್ಯಾದ ಇ-ಮೇಲ್ ಸೇವೆಯನ್ನು ಬಳಸಿಕೊಂಡು ಶಾಲೆಗಳಿಗೆ ಬೆದರಿಕೆ ಮೇಲ್ ಕಳುಹಿಸಲಾಗಿತ್ತು ಎನ್ನಲಾಗಿದೆ.
ದೆಹಲಿ, ಅಹಮದಾಬಾದ್ ಸೇರಿ ಹಲವೆಡೆ ಶಾಲೆಗಳಿಗೆ ಬಾಂಬ್ ಬೆದರಿಕೆ ಒಡ್ಡಿದ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡಿರುವ ಕೇಂದ್ರ ಗೃಹ ಸಚಿವಾಲಯವು, ಕಳೆದ ವಾರ ಈ ಕುರಿತು ಪ್ರಮಾಣಿತ ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು (SOP) ರಚಿಸಬೇಕು ಹಾಗೂ ವಿಸ್ತೃತ ಶಿಷ್ಟಾಚಾರಗಳನ್ನು ಸಿದ್ಧಪಡಿಸಬೇಕು ಎಂಬುದಾಗಿ ಆದೇಶ ಹೊರಡಿಸಿತ್ತು. ಅದರಲ್ಲೂ, ಈ ಕುರಿತು ದೆಹಲಿ ಪೊಲೀಸರು ತಪ್ಪು ಮಾಹಿತಿ ತಡೆದು, ಅನಗತ್ಯ ಆತಂಕವನ್ನು ನಿವಾರಿಸಲು ದೆಹಲಿ ಪೊಲೀಸರು ಹಾಗೂ ಶಾಲೆಗಳ ಆಡಳಿತ ಮಂಡಳಿಗಳು ಸಹಕಾರ ನೀಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿತ್ತು.
ಶಾಲೆಗಳಲ್ಲಿ ಸಿಸಿಟಿವಿಗಳ ಅಳವಡಿಕೆ, ಅವುಗಳ ಮೇಲೆ ನಿಗಾ ಇರಿಸುವುದು, ಶಾಲೆಗಳ ಇ-ಮೇಲ್ ವಿಳಾಸಗಳನ್ನು ಪದೇಪದೆ ಪರಿಶೀಲಿಸುವುದು ಸೇರಿ ಹಲವು ಸೂಚನೆಗಳನ್ನು ನೀಡಿದೆ. ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ದೆಹಲಿ ಪೊಲೀಸ್ ಆಯುಕ್ತರು ಸಭೆ ನಡೆಸಿ, ಹುಸಿ ಬಾಂಬ್ ಬೆದರಿಕೆ ಕರೆ, ಇ-ಮೇಲ್‌ಗಳನ್ನು ನಿಯಂತ್ರಿಸುವ ಕ್ರಮಗಳ ಕುರಿತು ಚರ್ಚಿಸಿದ ಬಳಿಕ ಸೂಚನೆ ನೀಡಲಾಗಿದೆ.
ಮೇ 1ರಂದು ದೆಹಲಿ- ಎನ್‌ಸಿಆರ್ ಪ್ರದೇಶದ ಕನಿಷ್ಠ 12 ಪ್ರತಿಷ್ಠಿತ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿತ್ತು. ಕೂಡಲೇ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿತ್ತು. ಬಾಂಬ್ ಬೆದರಿಕೆ ಇ ಮೇಲ್ ಸ್ವೀಕರಿಸಿದ ಶಾಲೆಗಳೆಂದರೆ – ಚಾಣಕ್ಯಪುರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಸ್ಕೃತಿ ಶಾಲೆ, ಪೂರ್ವ ದೆಹಲಿಯ ಮಯೂರ್ ವಿಹಾರ್, ದ್ವಾರಕಾ ಜಿಲ್ಲೆಯ ಡಿಪಿಎಸ್ ಶಾಲೆ, ದಕ್ಷಿಣದ ಬಸಂತ್ ಕುಂಜ್ ಪ್ರದೇಶದಲ್ಲಿರುವ ಡಿಎವಿ ಶಾಲೆ, ಅಮಿಟಿ ಸ್ಕೂಲ್, ಸಾಕೇತ್, ನವದೆಹಲಿಯ ಸಂಸ್ಕೃತಿ ಶಾಲೆ ಮುಂತಾದವು. ಸಂಸ್ಕೃತಿಯು ದೆಹಲಿಯ ಅತ್ಯಂತ ಉನ್ನತ ಮಟ್ಟದ ಶಾಲೆಗಳಲ್ಲಿ ಒಂದು.
ಇದನ್ನೂ ಓದಿ: Karnataka weather: ವ್ಯಾಪಕ ಮಳೆಯೊಂದಿಗೆ 60 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ಗಾಳಿ; 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬಾಂಬ್ ದಾಳಿ ಕುರಿತ ಬೆದರಿಕೆ ಇ ಮೇಲ್‌ಗಳು ರವಾನೆಯಾಗುತ್ತಲೇ ಪೊಲೀಸರು ಎಚ್ಚೆತ್ತುಕೊಂಡರು. ಕೂಲಂಕಷ ತನಿಖೆ, ಪರಿಶೀಲನೆ ನಡೆಸಿದ ಪೊಲೀಸರು, ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದಾಗಿ ಎಕ್ಸ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಪೋಷಕರು, ಶಾಲೆಗಳ ಆಡಳಿತ ಮಂಡಳಿಯು ನಿಟ್ಟುಸಿರು ಬಿಡುವಂತೆ ಮಾಡಿದ್ದರು.