ನವದೆಹಲಿ: ಶಾಲೆ, ಆಸ್ಪತ್ರೆಗಳಿಗೆ ಹುಸಿ ಬಾಂಬ್(Bomb threat) ಕರೆ ಬಂದಿರುವ ಬೆನ್ನಲ್ಲೇ ಏರ್ ಇಂಡಿಯಾ ವಿಮಾನ(Air India)ಕ್ಕೂ ಬಾಂಬ್ ಬೆದರಿಕೆ ಬಂದಿದೆ. ದಿಲ್ಲಿ(Delhi)ಯಿಂದ ವಡೋದರಾಕ್ಕೆ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನದಲ್ಲಿ ಬಾಂಬ್ ಎಂದು ಬರೆದಿರುವ ಟಿಶ್ಯೂ ಪೇಪರ್ ಪತ್ತೆಯಾಗಿತ್ತು. ಶೌಚಾಲಯದಲ್ಲಿ ಈ ಟಿಶ್ಯೂ ಪೇಪರ್ ಪತ್ತೆಯಾಗಿದ್ದು, ಪ್ರಯಾಣಿಕರಲ್ಲಿ ಭಾರೀ ಆತಂಕ ಸೃಷ್ಟಿಸಿದೆ. ಅಧಿಕೃತ ಮಾಹಿತಿ ಪ್ರಕಾರ ಬೆಳಗ್ಗೆ 7.30ರ ವೇಳೆಗೆ ವಿಮಾನ ಇನ್ನೇನು ಟೇಕ್ ಆಫ್ ಆಗಬೇಕಿತ್ತು. ಈ ವೇಳೆ ವಿಮಾನ ಸಿಬ್ಬಂದಿಗೆ ಈ ಟಿಶ್ಯೂ ಸಿಕ್ಕಿದೆ ಎನ್ನಲಾಗಿದೆ.
ಘಟನೆ ವರದಿಯಾಗುತ್ತಿದ್ದಂತೆ ಎಲ್ಲಾ ಪ್ರಯಾಣಿಕರನ್ನು ತಕ್ಷಣ ಇಳಿಸಲಾಗಿದ್ದು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(CISF)ಗೆ ಮಾಹಿತಿ ನೀಡಲಾಗಿದೆ. CISF ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಂತರ ಪ್ರಯಾಣಿಕರನ್ನು ವಡೋದರಾಕ್ಕೆ ಮತ್ತೊಂದು ವಿಮಾನದಲ್ಲಿ ಕಳುಹಿಸಲಾಗಿದೆ. ವಿಮಾನದಲ್ಲಿ ಇದುವರೆಗೂ ಯಾವುದೇ ಬಾಂಬ್ ಅಥವಾ ಸ್ಫೋಟಕ ಪತ್ತೆಯಾಗಿಲ್ಲ. ಹೀಗಾಗಿ ಇದು ಕೂಡ ಒಂದು ಹುಸಿ ಬಾಂಬ್ ಕರೆ ಎನ್ನಲಾಗಿದೆ.
ನಿನ್ನೆಯಷ್ಟೇ ದೆಹಲಿ, ಬೆಂಗಳೂರು, ಚೆನ್ನೈ, ಅಹಮದಾಬಾದ್ ಶಾಲೆಗಳ ನಂತರ ಇದೀಗ ಕಾನ್ಪುರ ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಕಾನ್ಪುರದ ಸುಮಾರು 10 ಶಾಲೆಗಳು ಬುಧವಾರ ಬೆದರಿಕೆ ಕರೆಗಳನ್ನು ಸ್ವೀಕರಿಸಿವೆ ಎಂದು ಮೂಲಗಳು ತಿಳಿಸಿವೆ. ಇಮೇಲ್ ಮೂಲಕ ಈ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಕೆಲವು ದಿನಗಳ ಹಿಂದೆ ದೆಹಲಿ-ಎನ್‌ಸಿಆರ್, ಅಹಮದಾಬಾದ್ ಶಾಲೆಗಳಿಗೆ ಬಂದ ರಷ್ಯಾದ ಅದೇ ಸರ್ವರ್‌ಗೆ ಲಿಂಕ್ ಮಾಡಲಾದ ಇಮೇಲ್ ಮೂಲಕ ಕಾನ್ಪುರ ಶಾಲೆಗಳಿಗೆ ಬೆದರಿಕೆ ಒಡ್ಡಲಾಗಿದೆ ಎಂದು ವರದಿ ತಿಳಿಸಿದೆ. ಸದ್ಯಕ್ಕೆ ಶಾಲೆಗಳಿಂದ ಎಲ್ಲರನ್ನೂ ತೆರವು ಮಾಡಲಾಗಿದ್ದು, ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆಗೆ ನಡೆಸುತ್ತಿದ್ದಾರೆ. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎನ್ನಲಾಗಿದೆ. ಅದಾಗ್ಯೂ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಸುಮಾರು ಎರಡು ವಾರಗಳ ಅಂತರದಲ್ಲಿ ದೇಶದ ವಿವಿಧ ನಗರಗಳಿಗೆ ಈ ರೀತಿಯ ಹುಸಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ದೆಹಲಿ, ನೋಯ್ಡಾ, ಲಕ್ನೋ, ಅಹಮದಾಬಾದ್ ಬಳಿಕ ಈ ಪಟ್ಟಿಗೆ ಇದೀಗ ಕಾನ್ಪುರ ಕೂಡ ಸೇರಿಕೊಂಡಿದೆ. ಇದು ಆರಂಭವಾಗಿದ್ದು ಮೇ 1ರಿಂದ. ಅಂದು ದೆಹಲಿ, ನೋಯ್ಡಾ ಮತ್ತು ಲಕ್ನೋದ ಸುಮಾರು 100 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ಭೀಕರ ಸ್ಫೋಟ ನಡೆಸುವುದಾಗಿ ಎಚ್ಚರಿಸಲಾಗಿತ್ತು. ಕೂಡಲೇ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿತ್ತು. ಬಳಿಕ ಇದು ಹುಸಿ ಕರೆ ಎನ್ನುವುದು ಸಾಬೀತಾಗಿತ್ತು.
ಇದನ್ನೂ ಓದಿ:Swati Maliwal: ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಆರೋಪಿ ಕೇಜ್ರಿವಾಲ್ ಜೊತೆ ಏರ್‌ಪೋರ್ಟ್‌ನಲ್ಲಿ ಪ್ರತ್ಯಕ್ಷ
ಮೇ 6ರಂದು ಗುಜರಾತ್‌ನ ಅಹಮದಾಬಾದ್‌ನ ಹಲವು ಶಾಲೆಗಳಿಗೆ ಇಮೇಲ್ ಮೂಲಕವೇ ಬೆದರಿಕೆ ಬಂದಿತ್ತು. ರಾಜ್ಯ ಪೊಲೀಸ್ ಮತ್ತು ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ತಂಡಗಳು ಶಾಲೆಗಳಲ್ಲಿ ವ್ಯಾಪಕ ಶೋಧ ನಡೆಸಿದ್ದವು. ಶಾಲೆಗಳ ಆವರಣದಲ್ಲಿ ಅನುಮಾನಾಸ್ಪದವಾಗಿ ಏನೂ ಕಂಡು ಬಂದಿರಲಿಲ್ಲ. ರಷ್ಯಾದ ಡೊಮೇನ್ mail.ruನಿಂದಲೇ ಈ ಬೆದರಿಕೆಯನ್ನೂ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ