Site icon Vistara News

ಪತ್ನಿಯೇ ಪತಿಗೆ ಮಾಸಿಕ 10 ಸಾವಿರ ರೂ. ಜೀವನಾಂಶ ನೀಡಬೇಕು ಎಂದ ಕೋರ್ಟ್;‌ ಏನಿದು ಕೇಸ್?

Court Order

Removing Girl's Underwear And Getting Naked Not Attempt to Rape, Says Rajasthan HC

ಮುಂಬೈ: ವಿಚ್ಛೇದನದ ಬಳಿಕ ಬಹುತೇಕ ಪ್ರಕರಣಗಳಲ್ಲಿ ಮಾಜಿ ಪತಿಯೇ ಮಾಜಿ ಪತ್ನಿಗೆ ಮಾಸಿಕವಾಗಿ ಇಂತಿಷ್ಟು ಜೀವನಾಂಶವನ್ನು (Alimony) ಕೊಡಬೇಕು ಎಂಬುದಾಗಿ ಕೋರ್ಟ್‌ ಆದೇಶಿಸುತ್ತವೆ. ಪತಿಯ ಉದ್ಯೋಗ, ಆಸ್ತಿ ಸೇರಿ ಹಲವು ಮಾನದಂಡಗಳ ಆಧಾರದ ಮೇಲೆ ಜೀವನಾಂಶವನ್ನು ನಿಗದಿಪಡಿಸಲಾಗುತ್ತದೆ. ಆದರೆ, ಮಹಾರಾಷ್ಟ್ರದಲ್ಲಿ (Maharashtra) ವಿಶೇಷ ಪ್ರಕರಣವೊಂದರಲ್ಲಿ, ಮಾಜಿ ಪತ್ನಿಯೇ ಮಾಜಿ ಪತಿಗೆ ಮಾಸಿಕ 10 ಸಾವಿರ ರೂ. ಜೀವನಾಂಶ ನೀಡಬೇಕು ಎಂಬುದಾಗಿ ಬಾಂಬೆ ಹೈಕೋರ್ಟ್‌ (Bombay High Court) ಆದೇಶಿಸಿದೆ.

“ಹಿಂದು ಮದುವೆ ಕಾಯ್ದೆಯ ಸೆಕ್ಷನ್‌ 24ರ ನಿಬಂಧನೆಯು ಸಂಗಾತಿ ಎಂಬ ಪದವನ್ನು ಉಲ್ಲೇಖಿಸುತ್ತದೆ. ಸಂಗಾತಿ ಎಂಬುದು ಗಂಡ ಆಗಿರಬಹುದು, ಹೆಂಡತಿ ಆಗಿರಬಹುದು. ಹಾಗಾಗಿ, ಇಬ್ಬರು ವಿಚ್ಛೇದನ ಪಡೆದ ಬಳಿಕ ಯಾರು ಮಾಸಿಕ ವೆಚ್ಚಗಳನ್ನು ಭರಿಸಲು ಆಗುವುದಿಲ್ಲವೋ, ಅವರಿಗೆ ದುಡಿಯುವವರು ಜೀವನಾಂಶ ನೀಡಬೇಕು. ಹಾಗಾಗಿ, ಈ ಪ್ರಕರಣದಲ್ಲಿ ಮಾಜಿ ಪತ್ನಿಯು ಮಾಜಿ ಪತಿಗೆ ಮಾಸಿಕ 10 ಸಾವಿರ ರೂ. ಜೀವನಾಂಶ ನೀಡಬೇಕು” ಎಂದು ನ್ಯಾಯಮೂರ್ತಿ ಶರ್ಮಿಳಾ ದೇಶಮುಖ್‌ ಅವರಿದ್ದ ಏಕಸದಸ್ಯ ಪೀಠವು ಆದೇಶಿಸಿತು.

“ವಿಚ್ಛೇದನ ಬಳಿಕ ಪತಿಯು ಜೀವನದ ಖರ್ಚು-ವೆಚ್ಚವನ್ನು ಭರಿಸುವ ಸ್ಥಿತಿಯಲ್ಲಿ ಇಲ್ಲದಿದ್ದರೆ, ಪತ್ನಿಯು ಉದ್ಯೋಗದಲ್ಲಿದ್ದರೆ ಅಥವಾ ಹಣ ಗಳಿಸುತ್ತಿದ್ದರೆ, ಆಕೆಯು ಪತಿಗೆ ಜೀವನಾಂಶ ನೀಡಬೇಕು. ಆದಾಗ್ಯೂ. ಈ ಪ್ರಕರಣದಲ್ಲಿ ಮಾಜಿ ಪತ್ನಿಯು ತನ್ನ ಮಾಜಿ ಪತಿಯು ಮಾಸಿಕ ವೆಚ್ಚಗಳನ್ನು ಭರಿಸಲು ಆಗುವುದಿಲ್ಲ ಎಂಬುದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಹಾಗಾಗಿ, ಮಾಸಿಕ ಜೀವನಾಂಶ ನೀಡಬೇಕು” ಎಂಬುದಾಗಿ ನ್ಯಾ. ಶರ್ಮಿಳಾ ದೇಶಮುಖ್‌ ಅವರು ತಿಳಿಸಿದರು.

ಏನಿದು ಪ್ರಕರಣ?

ಮಹಾರಾಷ್ಟ್ರದಲ್ಲಿ ಗಂಡ ಹಾಗೂ ಹೆಂಡತಿ ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನದ ಬಳಿಕ ಪತಿಯು ಅನಾರೋಗ್ಯಕ್ಕೀಡಾಗಿದ್ದು, ಅವರು ಕೆಲಸ ಮಾಡುವ ಸ್ಥಿತಿಯಲ್ಲಿ ಇಲ್ಲ. ಹಾಗಾಗಿ, ಮಾಜಿ ಪತಿಯು ಜೀವನಾಂಶಕ್ಕಾಗಿ ಸಿವಿಲ್‌ ಕೋರ್ಟ್‌ ಮೊರೆ ಹೋಗಿದ್ದರು. ಇವರ ಮಾಜಿ ಪತ್ನಿಯು ಬ್ಯಾಂಕ್‌ ಮ್ಯಾನೇಜರ್‌ ಆದ ಕಾರಣ ಮಾಜಿ ಪತಿಗೆ ಜೀವನಾಂಶ ನೀಡಬೇಕು ಎಂಬುದಾಗಿ ಸಿವಿಲ್‌ ಕೋರ್ಟ್‌ ಮಹಿಳೆಗೆ ಆದೇಶಿಸಿತ್ತು. ಆದರೆ, ಈಗಾಗಲೇ ಮಗುವನ್ನು ಸಾಕುತ್ತಿರುವ ಕಾರಣ ಜೀವನಾಂಶ ನೀಡಲು ಆಗುವುದಿಲ್ಲ ಎಂದು ಮಹಿಳೆಯು ಬಾಂಬೆ ಹೈಕೋರ್ಟ್‌ ಮೊರೆ ಹೋಗಿದ್ದರು. ಈಗ ಹೈಕೋರ್ಟ್‌ ಮಹಿಳೆಯ ಅರ್ಜಿಯನ್ನು ತಿರಸ್ಕರಿಸಿದೆ.

ಇದನ್ನೂ ಓದಿ: Alimony Case : ಗಂಡನ ತಂದೆ-ತಾಯಿ ಸೊಸೆಗೆ ಜೀವನಾಂಶ ನೀಡಬೇಕಾಗಿಲ್ಲ ಎಂದ ಹೈಕೋರ್ಟ್‌

Exit mobile version