ಮುಂಬೈ: ತಾಯಿಯನ್ನು (Mother) ಆರೈಕೆ ಮಾಡದ ಪುತ್ರನಿಗೆ, ತಾಯಿಯ ಫ್ಲ್ಯಾಟ್ ಖಾಲಿ (Flat Vacate) ಮಾಡುವಂತೆ ಬಾಂಬೆ ಹೈಕೋರ್ಟ್ (Bombay High Court) ಆದೇಶ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಾಗರಿಕ ನ್ಯಾಯಮಂಡಳಿಯ (senior citizen tribunal) ಆದೇಶವನ್ನು ಎತ್ತಿ ಹಿಡಿದಿರುವ ಬಾಂಬೆ ಹೈಕೋರ್ಟ್, ಪರೇಲ್‌ನಲ್ಲಿನ (Mumbai Parel) ಬಹುಮಹಡಿಯಲ್ಲಿರುವ ತನ್ನ ತಾಯಿಯ ಫ್ಲ್ಯಾಟ್ ಅನ್ನು ತೆರವು ಮಾಡುವಂತೆ ಮಗನಿಗೆ (Son) ಸ್ಪಷ್ಟವಾಗಿ ಸೂಚಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಾಗರಿಕ ನ್ಯಾಯಮಂಡಳಿ ತೀರ್ಪು ನೀಡಿ, ಭೋಯಿವಾಡದ ಸಂಪದಾ ಹೈಟ್ಸ್‌ನಲ್ಲಿರುವ ತನ್ನ ತಾಯಿಯ ಫ್ಲಾಟ್ ಅನ್ನು ಖಾಲಿ ಮಾಡುವಂತೆ ಸೂಚಿಸಿತ್ತು. ನ್ಯಾಯಮಂಡಳಿಯ ತೀರ್ಪನ್ನು ಬಾಂಬ್ ಹೈಕೋರ್ಟ್‌ನಲ್ಲಿ ಪುತ್ರ ಪ್ರಶ್ನಿಸಿದ್ದರು. ಅಂತಿಮವಾಗಿ ನವೆಂಬರ್ 9ರಂದು ತೀರ್ಪು ನೀಡಿದ ಬಾಂಬೆ ಹೈಕೋರ್ಟ್‌ನ ಜಸ್ಟೀಸ್ ಸಂದೀಪ್ ಮಾರ್ನೆ ಅವರು, ನ್ಯಾಯಮಂಡಳಿ ಆದೇಶವನ್ನು ಎತ್ತಿ ಹಿಡಿದರು.
ನಿಸ್ಸಂದೇಹವಾಗಿ, ಅನಾರೋಗ್ಯ ಪೀಡಿತ ತಾಯಿಯು ಫ್ಲಾಟ್ ನಂ.1301ರ ಮಾಲೀಕರಾಗಿದ್ದಾರೆ. ಅವರಿಗೆ ಬೇರೆ ಯಾವುದೇ ವಾಸಸ್ಥಳ ಇಲ್ಲ. ಫ್ಲಾಟ್‌ನಲ್ಲಿ ತನ್ನೊಂದಿಗೆ ಯಾರು ಇರಬೇಕು ಎಂಬುದನ್ನು ನಿರ್ಧರಿಸುವ ಹಕ್ಕು ಮತ್ತು ಅರ್ಹತೆ ತಾಯಿಗೆ ಇದೆ ಎಂದು ನ್ಯಾಯಮೂರ್ತಿ ಮಾರ್ನೆ ಅವರು ತಮ್ಮ ತೀರ್ಪಿನಲ್ಲಿ ತಿಳಿಸಿದ್ದಾರೆ.
ತನಗೆ ವಾಸಿಸಲು ಬೇರೆ ಮನೆ ಇಲ್ಲ. ಪತ್ನಿ ಮತ್ತು ಇಬ್ಬರು ಅಪ್ರಾಪ್ತ ಮಕ್ಕಳಿದ್ದಾರೆ. ಹಾಗಾಗಿ, ಫ್ಲ್ಯಾಟ್‌ನಲ್ಲಿ ವಾಸಿಸಲು ಅವಕಾಶ ನೀಡಬೇಕು ಎಂದು ಪುತ್ರನ ಪರ ವಕೀಲರು ವಾದಿಸಿದರು. ಅಲ್ಲದೇ, ಅನಾರೋಗ್ಯ ಪೀಡಿತ ತಾಯಿಯನ್ನು ಆರೈಕೆ ಮಾಡುತ್ತಿದ್ದೇನೆ. ಮುಂದೆಯೇ ಕೂಡ ಮಾಡುತ್ತೇನೆ ಎಂದು ಪುತ್ರ ಮನವಿ ಮಾಡಿಕೊಂಡರು.
ಆದರೆ, ಪುತ್ರನ ಈ ವಾದವನ್ನು ತಿರಸ್ಕರಿಸಿದ ತಾಯಿಯ ಪರ ವಕೀಲರು, ಶಹಾಪುರದಲ್ಲಿ ಒಂದು ಬೆಡ್‌ರೂಮ್-ಹಾಲ್-ಕಿಚನ್ ಫ್ಲ್ಯಾಟ್ ಖರೀದಿಸಿದ್ದಾಗಿ ನ್ಯಾಯಾಧಿಕರಣದ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಇದಲ್ಲದೆ, ನ್ಯಾಯಮಂಡಳಿ ತನ್ನ ಆದೇಶವನ್ನು ನೀಡುವಾಗ, ಮಗ ಮದ್ಯವ್ಯಸನಿಯಾಗಿದ್ದು, ಆತ ತಾಯಿಯೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದ ಎಂಬುದನ್ನು ಗಣನೆಗೆ ತೆಗೆದುಕೊಂಡಿತ್ತು. ಈ ಸಂಗತಿಯನ್ನು ಗಮನಿಸಿದ ಹೈಕೋರ್ಟ್, ತನಗೆ ಉಳಿದುಕೊಳ್ಳಲು ಬೇರೆ ಸ್ಥಳವಿಲ್ಲ ಎಂದು ಹೇಳುವ ಮೂಲಕ ಮಗ ವಾಸ್ತವಿಕವಾಗಿ ತಪ್ಪು ಹೇಳಿಕೆ ನೀಡಿದ್ದಾನೆ ಎಂದು ಆರೋಪಿಸಿತು.
ಮದ್ಯವ್ಯಸನಿಯಾಗಿರುವ ಪುತ್ರ, ತನ್ನ ತಾಯಿಯ ಖಾತೆಗಳಿಂದ ಹಣವನ್ನು ಡ್ರಾ ಮಾಡುತ್ತಿದ್ದಾನೆ. ಅಲ್ಲದೇ, ಅನಾರೋಗ್ಯಪೀಡಿತ ತಾಯಿಯನ್ನು ಕೆಟ್ಟದಾಗಿ ನಡೆಸಿಕೊಂಡಿದ್ದಾನೆ. ಹಾಗಾಗಿ, ಮನೆ ಖಾಲಿ ಮಾಡುವಂತೆ ಸೂಚಿಸಬೇಕು ಎಂದು ವಕೀಲರು ವಾದ ಮಂಡಿಸಿದರು. ಅಂತಿಮವಾಗಿ, ಕೋರ್ಟ್ ವಾದ ಮತ್ತು ಪ್ರತಿವಾದವನ್ನು ಆಲಿಸಿ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಎತ್ತಿ ಹಿಡಿಯುವ ಮೂಲಕ, ಪ್ರಮುಖ ತೀರ್ಪು ನೀಡಿತು.
ಈ ಸುದ್ದಿಯನ್ನೂ ಓದಿ: ಶಾರ್ಟ್ ಸ್ಕರ್ಟ್ ಧರಿಸಿ ಡ್ಯಾನ್ಸ್ ಮಾಡುವುದು ಅಶ್ಲೀಲವಲ್ಲ ಎಂದ ಬಾಂಬೆ ಹೈಕೋರ್ಟ್