Site icon Vistara News

Borewell Tragedy: ಫಲ ನೀಡದ 40 ಗಂಟೆಗಳ ರಕ್ಷಣಾ ಕಾರ್ಯಾಚರಣೆ; ಮಧ್ಯಪ್ರದೇಶದಲ್ಲಿ ಕೊಳವೆಬಾವಿಗೆ ಬಿದ್ದ ಬಾಲಕ ಬದುಕುಳಿಯಲಿಲ್ಲ

Borewell Tragedy

Borewell Tragedy

ಭೋಪಾಲ್‌: ಕೊನೆಗೂ ದೇಶದ ಲಕ್ಷಾಂತರ ಮಂದಿಯ ಪ್ರಾರ್ಥನೆ, ರಕ್ಷಣಾ ಕಾರ್ಯಾಚರಣೆ ಫಲ ನೀಡಲಿಲ್ಲ. 2 ದಿನಗಳ ಹಿಂದೆ ಮಧ್ಯಪ್ರದೇಶದ ರೇವಾ ಜಿಲ್ಲೆಯ ಗ್ರಾಮವೊಂದರ ತೆರೆದ ಕೊಳವೆ ಬಾವಿಗೆ ಬಿದ್ದ ಆರು ವರ್ಷದ ಬಾಲಕ ಮಯಾಂಕ್‌ (Mayank) ಇಂದು (ಏಪ್ರಿಲ್‌ 14) ಮೃತಪಟ್ಟಿದ್ದಾನೆ. ಸತತ ಪ್ರಯತ್ನದ ಹೊರತಾಗಿಯೂ ಆತನ ಜಿವ ಉಳಿಸಲು ಸಾಧ್ಯವಾಗಲಿಲ್ಲ. ಉತ್ತರ ಪ್ರದೇಶದ ಗಡಿ ಸಮೀಪದ ಮಾಣಿಕಾ ಗ್ರಾಮದ ಕೊಳವೆ ಬಾವಿಗೆ ಬಾಲಕ ಆಕಸ್ಮಿಕವಾಗಿ ಬಿದ್ದು ಬಿಟ್ಟಿದ್ದ (Borewell Tragedy).

ಏಪ್ರಿಲ್‌ 12ರ ಅಪರಾಹ್ನ 3 ಗಂಟೆ ಸುಮಾರಿಗೆ ಆಟವಾಡುತ್ತಿದ್ದ ಬಾಲಕ ತೆರೆದ ಕೊಳಗೆಬಾವಿಗೆ ಬಿದ್ದು ಸುಮಾರು 40 ಅಡಿಯಲ್ಲಿ ಸಿಲುಕಿಕೊಂಡಿದ್ದ. ಕೂಡಲೇ ರಾಜ್ಯ ವಿಪತ್ತು ತುರ್ತು ಪ್ರತಿಕ್ರಿಯೆ ಪಡೆ (State Disaster Emergency Response Force), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (National Disaster Response) ಮತ್ತು ಸ್ಥಳೀಯ ಆಡಳಿತವು ಬಾಲಕನನ್ನು ಕೊಳವೆ ಬಾವಿಯಿಂದ ಹೊರತೆಗೆಯಲು ಪ್ರಯತ್ನ ಆರಂಭಿಸಿತ್ತು. ಮೊದಲಿಗೆ ಕೊಳವೆಬಾವಿಗೆ ಆಮ್ಲಜನಕವನ್ನು ಸರಬರಾಜು ಮಾಡಲಾಯಿತು. ಬಾಲಕನ ಬಳಿಗೆ ತಲುಪಲು ಕೊಳವೆ ಬಾವಿಯ ಸಮೀಪದಲ್ಲಿ ಸಮಾನಾಂತರ ಗುಂಡಿಗಳನ್ನು ಅಗೆಯಲಾಯಿತು.

ʼʼ40 ಗಂಟೆಗಳ ರಕ್ಷಣಾ ಕಾರ್ಯಾಚರಣೆಯ ನಂತರ ಮಗುವನ್ನು ಭಾನುವಾರ ಪತ್ತೆ ಹಚ್ಚಲಾಗಿದೆ. ಆದರೆ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲʼʼ ಎಂದು ಜಿಲ್ಲಾಧಿಕಾರಿ ಪ್ರತಿಭಾ ಪಾಲ್ ಹೇಳಿದ್ದಾರೆ. “ಬೆಳಿಗ್ಗೆ ಸುಮಾರು 8 ಗಂಟೆಗೆ ಬಾಲಕನನ್ನು ಪತ್ತೆ ಹಚ್ಚಲಾಯಿತು. ನಾವು ಆತನ ರಕ್ಷಣೆಗೆ ಎಲ್ಲ ಪ್ರಯತ್ನಗಳನ್ನು ಮಾಡಿದ್ದೆವು. ಆದರೆ ಬೋರ್‌ವೆಲ್‌ ತುಂಬಾ ಕಿರಿದಾಗಿದ್ದರಿಂದ ಮಗುವನ್ನು ಉಳಿಸಲು ಸಾಧ್ಯವಾಗಲಿಲ್ಲ” ಎಂದು ತಿಳಿಸಿದ್ದಾರೆ.

ʼʼಬಾಲಕನ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಿಸಿ ಟಿವಿ ಕ್ಯಾಮೆರಾವನ್ನೂ ಕೆಳಗಿಳಿಸಲಾಗಿತ್ತು. ಆದಾಗ್ಯೂ ಕೆಲವು ಅಡಚಣೆಗಳಿಂದಾಗಿ ಆತನನ್ನು ಜೀವ ಉಳಿಸಲು ಸಾಧ್ಯವಾಗಲಿಲ್ಲʼʼ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿಭಾ ಪಾಲ್ ಅವರು ಸಾಮಾಜಿಕ ಮಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಅಧಿಕಾರಿಗಳು ಸಿಸಿ ಟಿವಿ ಕ್ಯಾಮೆರಾದೊಂದಿಗೆ ಬಾಲಕನನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿರುವುದನ್ನು ಕಂಡು ಬಂದಿದೆ.

ಬಾಲಕನನ್ನು ಬೋರ್‌ವೆಲ್‌ನಿಂದ ಹೊರ ತೆಗೆದ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಆತನ್ನು ಪರೀಕ್ಷಿಸಿದ ವೈದ್ಯರು ಮಗು ಮೃತಪಟ್ಟಿರುವುದಾಗಿ ಘೋಷಿಸಿದರು. ಕೊಳವೆ ಬಾವಿಗೆ ಬಿದ್ದ ಮೂರು-ನಾಲ್ಕು ಗಂಟೆಗಳ ನಂತರ ಬಾಲಕ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಮಕ್ಕಳು ಕೊಳವೆಬಾವಿಗೆ ಬೀಳುವ ಘಟನೆ ಪದೇ ಪದೆ ಸಂಭವಿಸುತ್ತದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Borewell Tragedy: ಕೊಳವೆ ಬಾವಿಗೆ ಬಿದ್ದ 6 ವರ್ಷದ ಬಾಲಕ; ರಕ್ಷಣಾ ಕಾರ್ಯ ಚುರುಕು

ವಿಜಯಪುರದಲ್ಲಿ ಬಾಲಕನ ರಕ್ಷಣೆ

ಕೆಲವು ದಿನಗಳ ಹಿಂದೆಯಷ್ಟೇ ನಮ್ಮ ರಾಜ್ಯದ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಬಾಲಕ ಸಾತ್ವಿಕ್‌ನನ್ನು ರಕ್ಷಿಸಲಾಗಿತ್ತು. ಸತತ 20 ಗಂಟೆಗಳ ಕಾರ್ಯಾಚರಣೆಯ ನಂತರ ಆತನನ್ನು ಸುರಕ್ಷಿತವಾಗಿ ಹೊರ ತೆಗೆಯಲಾಗಿತ್ತು. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇತರಿಸಿಕೊಂಡಿದ್ದಾನೆ.

Exit mobile version