Site icon Vistara News

Boycott Maldives: ಬೋರಾ ಬೋರಾ ಫೋಟೋ ಷೇರ್ ಮಾಡಿದ ಮಾಲ್ಡೀವ್ಸ್‌ ರಾಜಕಾರಣಿ!

Boycott Maldives, Bora Bora photo shared as maldives by Maldivian politician

ನವದೆಹಲಿ: ಲಕ್ಷದ್ವೀಪಕ್ಕೆ (Lakshdweep) ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಭೇಟಿ ನೀಡಿದ ಬೆನ್ನಲ್ಲೇ ಮಾಲ್ಡೀವ್ಸ್ ಸಚಿವರು (Maldives Ministers) ನೀಡಿದ ಹೇಳಿಕೆಗಳು ಭಾರೀ ವಿವಾದ ಸೃಷ್ಟಿಸಿದ್ದವು. ಈ ಮಧ್ಯೆ, ಮಾಲ್ಡೀವ್ಸ್‌ನ ರಾಜಕಾರಣಿ ಮಾಯಿಜ್ ಮಹ್ಮೂದ್ ಅವರು ಷೇರ್ ಮಾಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫ್ರಾನ್ಸ್‌ನ ‘ಬೋರಾ ಬೋರಾ’ (Bora Bora) ದ್ವೀಪದ ಫೋಟೋವನ್ನು ಮಾಲ್ಡೀವ್ಸ್ ದ್ವೀಪ ಫೋಟೋ ಎಂದು ಎಕ್ಸ್ ವೇದಿಕೆಯಲ್ಲಿ ಷೇರ್ ಮಾಡಿದ್ದಾರೆ. ಇದರಿಂದ ಅವರು ಸಾಕಷ್ಟು ಲೇವಡಿಗೆ ಒಳಗಾಗಿದ್ದಾರೆ.

ಮಾಯಿಜ್ ಅವರು ಮಾಡಿರುವ ಪೋಸ್ಟ್‌ನಲ್ಲಿ ತಮ್ಮ ದ್ವೀಪ ರಾಷ್ಟ್ರದ ರಮಣೀಯ ಸೌಂದರ್ಯವನ್ನು ವರ್ಣಿಸಿದ್ದಾರೆ. ತಮ್ಮ ದೇಶದ ಸೌಂದರ್ಯವನ್ನು ಹೊಗಳುವ ಭರದಲ್ಲಿ ಲಕ್ಷದ್ವೀಪವನ್ನು ಕೆಟ್ಟದಾಗಿ ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ. ಸೂರ್ಯ ಮಾಲ್ಡೀವ್ಸ್‌ನಲ್ಲಿ ಅಸ್ತಮಿಸುತ್ತಿದ್ದಾನೆ. ಇಂಥ ಸೌಂದರ್ಯವನ್ನು ನೀವು ಲಕ್ಷದ್ವೀಪದಲ್ಲಿ ನೋಡಲು ಸಾಧ್ಯವಿಲ್ಲ ಎಂದು ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ. ಆದರೆ, ಅವರು ಬಳಸಿರುವ ಫೋಟೋವನ್ನು ಗುರುತಿಸಿರುವ ಅನೇಕರು ಮಾಯಿಜ್ ಅವರು ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಫೋಟೋ ಮಾಲ್ಡೀವ್ಸ್‌ ದ್ವೀಪದ ಬದಲಿಗೆ ಫ್ರಾನ್ಸ್‌ನ ಬೋರಾ ಬೋರಾ ದ್ವೀಪದ ಫೋಟೋ ಎಂದು ತಿಳಿಸಿ ಹೇಳಿದ್ದಾರೆ.

ಫ್ರೆಂಚ್ ಪಾಲಿನೇಷ್ಯಾದ ಬೋರಾ ಬೋರಾ ಜಾಗದ ಫೋಟೋವನ್ನು ಮಾಲ್ಡೀವ್ಸ್ ಎಂದು ಹೇಳುತ್ತಿರುವ ಪೋಸ್ಟ್‌ ಕುರಿತು ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಫೋಟೋವನ್ನು ಪೋಸ್ಟ್ ಮಾಡುವ ಮೊದಲು ನೀವು ಗೂಗಲ್ ಮಾಡಿ ತಿಳಿದುಕೊಳ್ಳಬೇಕಿತ್ತು ಎಂದು ಒಬ್ಬರು ಬರೆದುಕೊಂಡಿದ್ದಾರೆ. ಹಾಗೆಯೇ, ಅವರ ಈ ತಪ್ಪಾದ ಪೋಸ್ಟ್ ಕುರಿತು ಮೀಮ್ಸ್ ಕೂಡ ಸಾಕಷ್ಟು ಹರಿದಾಡುತ್ತಿವೆ.

ಮಾಯಿಜ್ ಅವರು ತಮ್ಮನ್ನು ತಾವು ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್‌ನ ಸದಸ್ಯ ಎಂದು ಗುರುತಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ. ಎಕ್ಸ್ ವೇದಿಕೆಯಲ್ಲಿ ಸುಮಾರು 2,300 ಅನುಯಾಯಿಗಳನ್ನು ಹೊಂದಿದ್ದಾರೆ, ಆದಾಗ್ಯೂ, ಇತ್ತೀಚಿನ ಲಕ್ಷದ್ವೀಪ್ ವಿರುದ್ಧ ಮಾಲ್ಡೀವ್ಸ್ ಕುರಿತು ಅವರ ಪೋಸ್ಟ್ ಎರಡು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ.

ಈ ಸುದ್ದಿಯನ್ನೂ ಓದಿ: Lakshadweep: ಮಾಲ್ಡೀವ್ಸ್‌ ಬಿಡಿ, ಲಕ್ಷದ್ವೀಪದಲ್ಲಿ ನೋಡಲೇಬೇಕಾದ ತಾಣಗಳ ಪರಿಚಯ ಇಲ್ಲಿದೆ

Exit mobile version