Site icon Vistara News

Brain Eating Amoeba: ಕೇರಳದಲ್ಲಿ ಮತ್ತೆ ಮೆದುಳು ತಿನ್ನುವ ಅಮೀಬಾ ಹಾವಳಿ; ಮೂವರಲ್ಲಿ ಸೋಂಕು ಪತ್ತೆ

Brain Eating Amoeba

ತಿರುವನಂತಪುರಂ: ಕೇರಳದಲ್ಲಿ ಅಪರೂಪದ ಮೆದುಳು ತಿನ್ನುವ ಅಮೀಬಾ (Brain Eating Amoeba) ಸೋಂಕಿನ ಪ್ರಕರಣ ಹೆಚ್ಚಾಗುತ್ತಿದ್ದು ಆತಂಕ ಮೂಡಿಸಿದೆ. ಇದೀಗ ಮತ್ತೆ 3 ಪ್ರಕರಣ ತಿರುವನಂತಪುರಂನಲ್ಲಿ ಪತ್ತೆಯಾಗಿದೆ. ಕೊಳದಲ್ಲಿ ಸ್ನಾನ ಮಾಡಿದ ಮೂವರರಲ್ಲಿ ಈ ಸೋಂಕು ಕಂಡು ಬಂದಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ (Veena George) ತಿಳಿಸಿದ್ದಾರೆ. ಅಲ್ಲದೆ ಇತ್ತೀಚೆಗೆ ತಿರುವನಂತರಪುರಂನಲ್ಲಿ ಮೃತಮಟ್ಟ ವ್ಯಕ್ತಿಗೂ ಈ ಸೋಂಕು ತಗುಲಿತ್ತು ಎಂದು ಅವರು ತಿಳಿಸಿದ್ದಾರೆ.

ಸೋಂಕಿಗೆ ಒಳಗಾದ ಮೂವರು ರೋಗಿಗಳು ಪ್ರಸ್ತುತ ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲ ರೋಗಿಗಳಿಗೆ ಅವರು ಸ್ನಾನ ಮಾಡಿದ ಕೊಳದಿಂದಲೇ ಸೋಂಕು ತಗುಲಿದೆ ಎಂದು ಸಚಿವೆ ತಿಳಿಸಿದ್ದಾರೆ.

ಅಮೀಬಿಕ್ ಮೆನಿಂಗೊ ಎನ್ಸೆಫಾಲಿಟಿಸ್ ಎಂದೂ ಕರೆಯಲ್ಪಡುವ ಈ ಪ್ರಕರಣಗಳು ತಿರುವನಂತಪುರಂನಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ಜತೆಗೆ ಸಾರ್ವಜನಿಕರಿಗೆ ಕೆಲವೊಂದು ಸಲಹೆ ನೀಡಿದೆ. ಪ್ರಾಣಿಗಳು ಸ್ನಾನ ಮಾಡುವ ಕೊಳ, ನೀರಿನ ಹೊಂಡಗಳಲ್ಲಿ ಈಜಾಡದಂತೆ ಸೂಚಿಸಿದೆ. ಜತೆಗೆ ಕಲುಷಿತ ನೀರಿನಲ್ಲಿ ಸ್ನಾನ ಮಾಡದಿರಲು ಮತ್ತು ಮುಖ ತೊಳೆಯದಿರಲು ತಿಳಿಸಿದೆ.

ಜುಲೈಯಲ್ಲಿ ಸೋಂಕು ಭಾದಿತ 14 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದ. ಆ ಮೂಲಕ ಮೇ ತಿಂಗಳಿಂದ ಈ ಅಪರೂಪದ ಸೋಂಕಿಗೆ ಬಲಿಯಾಗುವವರ ಸಂಖ್ಯೆ ನಾಲ್ಕಕ್ಕೇರಿದೆ. ಈ ಹಿಂದೆ ಜೂನ್ 25ರಂದು ಕಣ್ಣೂರು ಜಿಲ್ಲೆಯ 13 ವರ್ಷದ ಬಾಲಕಿ, ಮೇ 21ರಂದು ಮಲಪ್ಪುರಂನ 5 ವರ್ಷದ ಬಾಲಕಿ ಮತ್ತು ಜೂನ್‌ ಮೊದಲ ವಾರದಲ್ಲಿ ಕೋಝಿಕ್ಕೋಡ್‌ ಜಿಲ್ಲೆಯ 12ವರ್ಷದ ಬಾಲಕ ಈ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದ್ದರು. ಇತ್ತೀಚೆಗೆ ತಿರುವನಂತಪುರಂನಲ್ಲಿ ಸೋಂಕು ಬಾಧಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಈ ಸೋಂಕು ಮಾರಣಾಂತಿಕವಾಗಿರುವುದರಿಂದಲೇ ಆತಂಕ ಸೃಷ್ಟಿಸಿದೆ.

ಹೇಗೆ ಹರಡುತ್ತದೆ?

ಈ ರೋಗಾಣು ಇರುವ ನೀರಿನಲ್ಲಿ ಈಜುವುದು ಅಥವಾ ಇನ್ನಾವುದಾದರೂ ರೀತಿಯಿಂದ ಈ ನೀರು ಮೂಗಿನೊಳಗೆ ಹೋದರೆ, ಆ ವ್ಯಕ್ತಿಗೆ ಈ ಅಮೀಬಾ ಸೋಂಕು ತಗುಲುತ್ತದೆ. ತುಂಬ ದಿನದಿಂದ ಈಜುಕೊಳದ ನೀರು ಬದಲಿಸದೆ ಇದ್ದರೆ ಅಲ್ಲಿಯೂ ಈ ಅಮೀಬಾ ಇರಬಹುದು. ಅದರಲ್ಲೂ ಕಲುಷಿತ ನೀರಿನಲ್ಲಿ ಈ ಅಮೀಬಾ ಉತ್ಪತ್ತಿ ಪ್ರಮಾಣ ಹೆಚ್ಚು. ನೀರೊಳಗೆ ಮುಖ ಒಳಗೆ ಹಾಕಿ ಈಜಿದಾಗ, ಸರೋವರ, ಕೊಳ, ನದಿ ನೀರಿನಲ್ಲಿ ಮುಖ ಮುಳುಗಿಸಿದಾಗ, ಕಲುಷಿತ ನೀರಿನಲ್ಲಿ ತಲೆ ಸ್ನಾನ ಮಾಡಿದಾಗ ಈ ಅಮೀಬಾ ಮೂಗಿನ ಮೂಲಕ ಮೆದುಳು ಸೇರುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: Brain Eating Amoeba: ಮೆದುಳು ತಿನ್ನುವ ಅಮೀಬಾದಿಂದ ನಮಗೂ ಅಪಾಯ ಇದೆಯೆ?

ಲಕ್ಷಣಗಳು

ತೀವ್ರ ಜ್ವರ, ಅತೀವ ತಲೆನೋವು, ವಾಂತಿ ಅಥವಾ ಹೊಟ್ಟೆ ತೊಳೆಸುವುದು, ನಡುಕ, ಕುತ್ತಿಗೆ ಗಡುಸಾಗುವುದು, ಬೆಳಕು ನೋಡಲು ಕಷ್ಟ, ಗೊಂದಲ, ಕೋಮ ಇದು ಈ ಸೋಂಕಿನ ಲಕ್ಷಣ. ಒಮ್ಮೆ ಈ ಅಮೀಬಾ ಮೂಗು ಪ್ರವೇಶಿಸಿದ ಮೇಲೆ, ಲಕ್ಷಣಗಳು ಕಾಣುವುದಕ್ಕೆ 2-15 ದಿನಗಳವರೆಗೆ ತೆಗೆದುಕೊಳ್ಳಬಹುದು. ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿದ ದಾಖಲೆಯೂ ಇಲ್ಲ. ಇದು ಮೂಗಿನ ಮೂಲಕವೇ ಪ್ರವೇಶಿಸಬೇಕು. ಒಮ್ಮೆ ಲಕ್ಷಣಗಳು ಕಾಣಿಸಿದ ಮೇಲೆ 7-10 ದಿನಗಳ ಒಳಗೆ ಸೋಂಕಿತರು ಮರಣಿಸಿದ ಪ್ರಕರಣಗಳೇ ಹೆಚ್ಚು. ಇದರಿಂದ ಚೇತರಿಸಿಕೊಂಡವರು ಅತಿ ವಿರಳ.

Exit mobile version