ಜೊಹಾನ್ಸ್‌ಬರ್ಗ್: ಬ್ರಿಕ್ಸ್ ಒಕ್ಕೂಟವನ್ನು (BRICS) ಸೇರಲು ಇನ್ನೂ ಆರು ದೇಶಗಳನ್ನು ಶೃಂಗಸಭೆಯಲ್ಲಿ (BRICS Summit 2023) ಆಹ್ವಾನಿಸಲಾಗಿದೆ. ಸೌದಿ ಅರೇಬಿಯಾ, ಯುಎಇ, ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ ಹಾಗೂ ಇರಾನ್‌ಗಳು ಈ ಒಕ್ಕೂಟವನ್ನು ಸೇರಲಿವೆ.
ದಕ್ಷಿಣ ಆಫ್ರಿಕದ (South Africa) ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಮೂರು ದಿನಗಳ ಬ್ರಿಕ್ಸ್ ಶೃಂಗಸಭೆಯಲ್ಲಿ (BRICS Summit 2023) ಒಕ್ಕೂಟದ ವಿಸ್ತರಣೆಯ ಮೇಲಿನ ಚರ್ಚೆಯು ಕಾರ್ಯಸೂಚಿಯಲ್ಲಿ ಅಗ್ರಸ್ಥಾನದಲ್ಲಿದೆ. ಬ್ರಿಕ್ಸ್ ಸಂಘಟನೆಯ ಎಲ್ಲ ಸದಸ್ಯರು ಈಗಿರುವ ಐದು ಸದಸ್ಯ ಶಕ್ತಿಯನ್ನು ಇನ್ನಷ್ಟು ವಿಸ್ತರಿಸಲು ಒಮ್ಮತದ ಬೆಂಬಲ ವ್ಯಕ್ತಪಡಿಸಿದ್ದಾರೆ. ಸದ್ಯ ಬ್ರಿಕ್ಸ್‌ನಲ್ಲಿರುವ ದೇಶಗಳೆಂದರೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ.
ಸಂಘಟನೆಯ ಮೊದಲ ಹಂತದ ವಿಸ್ತರಣೆಯ ಭಾಗವಾಗಿ ಬ್ರಿಕ್ಸ್‌ಗೆ ಸೇರಲು ಅರ್ಜೆಂಟೀನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇಗೆ ಆಹ್ವಾನ ನೀಡಲಾಗಿದೆ ಎಂದು ಬ್ರಿಕ್ಸ್ ಗುಂಪಿನ ಪ್ರಸ್ತುತ ಅಧ್ಯಕ್ಷ, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಹೇಳಿದ್ದಾರೆ. ಹೊಸ ಸದಸ್ಯತ್ವವು ಜನವರಿ 1, 2023ರಿಂದ ಜಾರಿಗೆ ಬರಲಿದೆ.
ನಾವು ಬ್ರಿಕ್ಸ್ ವಿಸ್ತರಣೆ ಪ್ರಕ್ರಿಯೆಯ ಮಾರ್ಗದರ್ಶಿ ತತ್ವಗಳು, ಮಾನದಂಡಗಳು ಮತ್ತು ಕಾರ್ಯವಿಧಾನಗಳ ಕುರಿತು ಒಮ್ಮತದ ಒಪ್ಪಂದವನ್ನು ತಲುಪಿದ್ದೇವೆ. ಇದು ಹಲವು ಕಾಲದಿಂದ ಚರ್ಚೆಯಲ್ಲಿತ್ತು. ಈ ಕುರಿತ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ರಾಮಫೋಸಾ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಈ ಸಂಘಟನೆಯನ್ನು ತಾವು ಸೇರುತ್ತೇವೆ ಎಂದು ಸುಮಾರು ಎರಡು ಡಜನ್ ದೇಶಗಳು ಔಪಚಾರಿಕವಾಗಿ ಅರ್ಜಿ ಸಲ್ಲಿಸಿದ್ದವು. ಬ್ರಿಕ್ಸ್ ಸಂಘಟನೆಯ ರಾಷ್ಟ್ರಗಳು ಪ್ರಸ್ತುತ ಜಾಗತಿಕ ಆರ್ಥಿಕತೆಯ ಕಾಲು ಭಾಗವನ್ನು ಮತ್ತು ಮುನ್ನೂರು ಕೋಟಿಗೂ ಅಧಿಕ ಜನರನ್ನು ಪ್ರತಿನಿಧಿಸುತ್ತಿವೆ. ಹೊಸದಾಗಿ ಸೇರುತ್ತಿರುವ ಆರು ದೇಶಗಳು ಚೀನಾದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI – belt road initiative) ಸೇರುವ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಆದರೆ ಭಾರತ ಆ ಒಪ್ಪಂದದ ಭಾಗವಾಗಿಲ್ಲ. ಬ್ರಿಕ್ಸ್ ವಿಸ್ತರಣೆಗೆ ಹೆಚ್ಚಿನ ಒತ್ತಡ ಚೀನಾದಿಂದ ಬಂದಿದೆ. ದಕ್ಷಿಣ ಆಫ್ರಿಕಾ ಮತ್ತು ರಷ್ಯಾದ ಅದಕ್ಕೆ ಬೆಂಬಲ ನೀಡಿವೆ.
ಯಶಸ್ವಿಯಾಗಿ ಶೃಂಗಸಭೆ ನಡೆಸಿಕೊಟ್ಟ ದಕ್ಷಿಣ ಆಫ್ರಿಕದ ಅಧ್ಯಕ್ಷ ರಾಮಾಫೋಸಾ ಅವರನ್ನು ಪ್ರಧಾನಿ ನರೇಂದ್ರ ಮೋದಿ (PM Narendra modi) ಅಭಿನಂದಿಸಿದ್ದಾರೆ. ಬ್ರಿಕ್ಸ್ ಸದಸ್ಯತ್ವದ ವಿಸ್ತರಣೆಯನ್ನು ಭಾರತ ಸಂಪೂರ್ಣವಾಗಿ ಬೆಂಬಲಿಸುತ್ತದೆ ಎಂದಿದ್ದಾರೆ. “ಹೊಸ ಸದಸ್ಯರ ಸೇರ್ಪಡೆಯು ಸಂಘಟನೆಯಾಗಿ ಬ್ರಿಕ್ಸ್ ಅನ್ನು ಮತ್ತಷ್ಟು ಬಲಪಡಿಸಲಿದೆ. ನಮ್ಮ ಪ್ರಯತ್ನಗಳಿಗೆ ಹೊಸ ಬಲ ನೀಡಲಿದೆ. ಇದು ಬಹುಧ್ರುವೀಯ ಜಾಗತಿಕ ಸ್ವರೂಪವನ್ನು ಬಲಪಡಿಸಲಿದೆ. ಹೊಸ ಸದಸ್ಯರೊಂದಿಗೆ ಬ್ರಿಕ್ಸ್ ಒಕ್ಕೂಟ ಹೊಸ ವೇಗ ಮತ್ತು ಹೊಸ ಶಕ್ತಿಯನ್ನು ತುಂಬಿಕೊಳ್ಳಲಿದೆ. ಭಾರತವು ಹೊಸ ಬ್ರಿಕ್ಸ್ ಸದಸ್ಯರೊಂದಿಗೆ ಅತ್ಯಂತ ಆಳವಾದ ಮತ್ತು ಐತಿಹಾಸಿಕ ಸಂಬಂಧವನ್ನು ಹೊಂದಿದೆʼʼ ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: BRICS Summit 2023: ಶೀಘ್ರವೇ 5 ಲಕ್ಷ ಕೋಟಿ ಡಾಲರ್ ಆರ್ಥಿಕ ರಾಷ್ಟ್ರವಾಗಲಿದೆ ಭಾರತ ಎಂದ ಪ್ರಧಾನಿ ಮೋದಿ