ನವದೆಹಲಿ: ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಮಂಗಳವಾರದಿಂದ (ಆಗಸ್ಟ್ 22) ಬ್ರಿಕ್ಸ್ ಶೃಂಗಸಭೆ (BRICS Summit) ಆರಂಭವಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದಕ್ಷಿಣ ಆಫ್ರಿಕಾಗೆ ತೆರಳಿದ್ದಾರೆ. ಆಗಸ್ಟ್ 24ರವರೆಗೆ ಬ್ರಿಕ್ಸ್ ಸಭೆ ನಡೆಯಲಿದ್ದು, ನರೇಂದ್ರ ಮೋದಿ ಅವರು ಸಭೆಯಲ್ಲಿ ಪಾಲ್ಗೊಳ್ಳುವ ಜತೆಗೆ ಹಲವು ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
“ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ದಕ್ಷಿಣ ಆಫ್ರಿಕಾಗೆ ತೆರಳುತ್ತಿದ್ದೇನೆ. ಜಾಗತಿಕ ವಿಷಯಗಳ ಕುರಿತು ಚರ್ಚಿಸಲು ಬ್ರಿಕ್ಸ್ ಸಭೆಯು ವೇದಿಕೆಯಾಗಲಿದೆ. ಹಲವು ಕ್ಷೇತ್ರಗಳ ಅಭಿವೃದ್ಧಿ ಕುರಿತು ಕೂಡ ಸಭೆಯಲ್ಲಿ ಚರ್ಚಿಸಲಾಗುತ್ತದೆ” ಎಂದು ಪ್ರಯಾಣ ಬೆಳೆಸುವ ಮೊದಲು ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ (ಟ್ವಿಟರ್) ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರವಾಸದ ಮಾಹಿತಿ ನೀಡಿದ ಮೋದಿ
ಕ್ಸಿ ಜಿನ್ ಪಿಂಗ್ ಜತೆ ಸಭೆ
ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ ಶೃಂಗಸಭೆಯ ಮಧ್ಯೆಯೇ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಹಾಗೆಯೇ, 2020ರಿಂದಲೂ ಲಡಾಕ್ ಗಡಿಯಲ್ಲಿ ಚೀನಾ ಸೃಷ್ಟಿಸಿರುವ ಗಡಿ ಬಿಕ್ಕಟ್ಟು, ಶಾಂತಿ ಸ್ಥಾಪನೆ, ಯಥಾಸ್ಥಿತಿ ಮುಂದುವರಿಕೆ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ. ಬ್ರಿಕ್ಸ್ ಸಭೆಯ ಬಳಿಕ ನರೇಂದ್ರ ಮೋದಿ ಅವರು ಆಗಸ್ಟ್ 25ರಂದು ಗ್ರೀಸ್‌ಗೆ ಭೇಟಿ ನೀಡಲಿದ್ದಾರೆ. ಗ್ರೀಸ್ ಪ್ರಧಾನಿ ಮಿಟ್ಸೊಟಾಕಿಸ್ (Mitsotakis) ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: PM Modi Greece Visit: ಆಗಸ್ಟ್ 25ರಂದು ಮೋದಿ ಗ್ರೀಸ್‌ಗೆ ಭೇಟಿ; ವಿಶೇಷ ಹೆಗ್ಗಳಿಕೆಗೂ ಭಾಜನ
ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ರಾಷ್ಟ್ರಗಳು ಸೇರಿ 2010ರಲ್ಲಿ ಬ್ರಿಕ್ಸ್ ಒಕ್ಕೂಟ ರಚಿಸಿವೆ. ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯುವ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಆಗಮಿಸದೆ, ವರ್ಚ್ಯುವಲ್ ವೇದಿಕೆ ಮೂಲಕವೇ ಭಾಗವಹಿಸುವುದಾಗಿ ತಿಳಿಸಿದ್ದಾರೆ. 2019ರ ಬಳಿಕ ಇದೇ ಮೊದಲ ಬಾರಿಗೆ ಮುಖಾಮುಖಿಯಾಗಿ ಸಭೆ ನಡೆಯುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಿಂದ ವರ್ಚ್ಯುವಲ್ ಆಗಿ ಬ್ರಿಕ್ಸ್ ಸಭೆ ನಡೆದಿದ್ದವು.