ಭೋಪಾಲ್: ಸಾವಿರ ಸುಳ್ಳು ಹೇಳಿ ಒಂದು ಮದುವೆ (Marriage) ಮಾಡು ಎಂಬ ಹಿರಿಯರ ಮಾತು ಶತಮಾನಗಳಿಂದಲೂ ಜನಮಾನಸದಲ್ಲಿದೆ. ಹಾಗೆಯೇ, ದೇಶದಲ್ಲಿ ಯಾವುದೇ ಮದುವೆಯಾಗುವಾಗ ಒಂದಷ್ಟು ಸುಳ್ಳುಗಳು ತೇಲಿಬರುತ್ತವೆ. ಆದರೆ, ಮಧ್ಯಪ್ರದೇಶದಲ್ಲಿ (Madhya Pradesh) ಯುವಕನೊಬ್ಬನ ಪೋಷಕರು ಹೇಳಿದೆ ಒಂದೇ ಒಂದು ಸುಳ್ಳು, ಹುಡುಗಿ ಕಡೆಯವರಿಗೆ ತೋರಿಸಿದ ಒಂದೇ ಒಂದು ಫೋಟೊ ಈಗ ಆತನ ಮದುವೆಗೇ ಕುತ್ತು ತಂದಿದೆ. ಹೌದು, ಹುಡುಗನು ಫೋಟೊದಲ್ಲಿ ಇದ್ದಷ್ಟು ಸುಂದರವಾಗಿಲ್ಲ ಎಂದು ಯುವತಿಯು ಹಸೆಮಣೆ (Viral News) ಏರುವ ದಿನವೇ ಮದುವೆ ಕ್ಯಾನ್ಸಲ್ ಮಾಡಿದ್ದಾಳೆ.
ಮಧ್ಯಪ್ರದೇದ ಗ್ವಾಲಿಯರ್ ಜಿಲ್ಲೆಯ ಉತಿಲಿಯಾ ಗ್ರಾಮದಲ್ಲಿ ಶುಕ್ರವಾರ (ಏಪ್ರಿಲ್ 19) ಮದುವೆ ನಿಶ್ಚಯವಾಗಿತ್ತು. ಗಂಡು-ಹೆಣ್ಣಿನ ಕಡೆಯವರು ಒಗ್ಗೂಡಿ, ಮದುವೆ ಸಂಭ್ರಮದಲ್ಲಿದ್ದರು. ವರನೂ ಸೂಟು-ಬೂಟು ಹಾಕಿಕೊಂಡು ತಾಳಿ ಕಟ್ಟಲು ತುದಿಗಾಲ ಮೇಲೆ ನಿಂತಿದ್ದ. ಆದರೆ, ವರನು ಕಣ್ಣೆದುರು ಬರುತ್ತಲೇ ವಧು ಕಂಗಾಲಾಗಿದ್ದಾಳೆ. ನನಗೆ ಫೋಟೊದಲ್ಲಿ ತೋರಿಸಿದಷ್ಟು ಈತ ಸುಂದರವಾಗಿಲ್ಲ. ನನಗೆ ಸುಳ್ಳು ಹೇಳಿ ಮದುವೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಮದುವೆಯನ್ನೇ ರದ್ದುಪಡಿಸಿದ್ದಾಳೆ. ಇದು ಈಗ ವರನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಅಷ್ಟಕ್ಕೂ ಆಗಿದ್ದೇನು?
ಅನಿಲ್ ಚೌಹಾಣ್ ಎಂಬ ಯುವಕ ಹಾಗೂ ಮಮತಾ ಎಂಬ ಯುವಕನ ಕುಟುಂಬಸ್ಥರು ಕೆಲ ತಿಂಗಳ ಹಿಂದೆ ಭೇಟಿಯಾಗಿದ್ದಾರೆ. ಆಗ ಹುಡುಗನ ಕಡೆಯವರಿಗೆ ಹುಡುಗಿಯ ಫೋಟೊ, ಹುಡುಗಿಯ ಕಡೆಯವರಿಗೆ ಹುಡುಗನ ಫೋಟೊ ತೋರಿಸಲಾಗಿದೆ. ಆಗ, ಹುಡುಗನು ಯುವತಿಯನ್ನು ಮದುವೆಯಾಗಲು ಒಪ್ಪಿದ್ದಾನೆ. ಮನೆಗೆ ಬಂದು ಅನಿಲ್ ಚೌಹಾಣ್ ಫೋಟೊ ತೋರಿಸಿದಾಗ ಮಮತಾ ಕೂಡ ಮದುವೆಗೆ ಒಪ್ಪಿದ್ದಾಳೆ. ಆದರೆ, ಮದುವೆ ಫಿಕ್ಸ್ ಆಗುವ ಮೊದಲು ಒಬ್ಬರನ್ನೊಬ್ಬರು ಭೇಟಿಯಾಗದಿರುವುದು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ. ಮದುವೆ ದಿನ ಹುಡುಗ ನೋಡಲು ಚೆನ್ನಾಗಿಲ್ಲ ಎಂದು ಆಕೆಯು ಮದುವೆಯನ್ನು ಮೊಟಕುಗೊಳಿಸಿದ್ದಾಳೆ.
ಶುಕ್ರವಾರ ಇಬ್ಬರೂ ಭೇಟಿಯಾಗಿದ್ದಾರೆ. ಇನ್ನೇನು ಹಾರ ಬದಲಾಯಿಸಬೇಕು ಎನ್ನುವಷ್ಟರಲ್ಲಿಯೇ ಮಮತಾ ಕೆರಳಿ ಕೆಂಡವಾಗಿದ್ದಾಳೆ. ನನಗೆ ಎಡಿಟ್ ಮಾಡಲಾದ ಫೋಟೊ ತೋರಿಸಿ ಮೋಸ ಮಾಡಿದ್ದಾರೆ. ಯುವಕನು ಫೋಟೊದಲ್ಲಿ ಇರುವಷ್ಟು ಸ್ಮಾರ್ಟ್ ಆಗಿ, ಎದುರು ಇಲ್ಲ. ನಾನು ಸತ್ತರೂ ಪರವಾಗಿಲ್ಲ. ಈತನನ್ನು ಮದುವೆಯಾಗುವುದಿಲ್ಲ ಎಂಬುದಾಗಿ ಹೇಳಿದ್ದಾಳೆ. ಕೊನೆಗೆ ಮದುವೆ ರದ್ದಾಗಿದೆ. ಮದುವೆ, ಮಧುಚಂದ್ರದ ಕನಸು ಕಾಣುತ್ತಿದ್ದ ಯುವಕನು ಈಗ ಬೇಸರದ ಮಡುವಿನಲ್ಲಿ ಸಿಲುಕಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Video Viral: ಜಲ ತರಂಗ್‌ನಲ್ಲಿ ಮಹಿಳೆ ನುಡಿಸಿದ ಐಗಿರಿ ನಂದಿನಿ ವಿಡಿಯೋ ವೈರಲ್