Site icon Vistara News

Bridge Collapse: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿತ; ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರೀ ಅನಾಹುತ

Bridge Collapse

Bridge Collapse

ಹೈದರಾಬಾದ್‌: ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಸೇತುವೆಯ ಒಂದು ಭಾಗ ಸೋಮವಾರ ರಾತ್ರಿ ಕುಸಿದಿದೆ (Bridge Collapse). ಸುಮಾರು 100 ಅಡಿ ಅಂತರದ ಎರಡು ಕಂಬಗಳ ನಡುವಿನ ಭಾಗ ರಾತ್ರಿ 9.45ರ ಸುಮಾರಿಗೆ ಬೀಸಿದ ಬಲವಾದ ಗಾಳಿಗೆ ಕುಸಿದು ಬಿದ್ದಿದೆ. ಸೇತುವೆಯ ಉಳಿದ ಭಾಗವೂ ಕುಸಿಯುವ ಆತಂಕವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ತಪ್ಪಿದ ಭಾರೀ ದೊಡ್ಡ ದುರಂತ

ಅದೃಷ್ಟವಶಾತ್‌ ಯಾವುದೇ ಸಾವು-ನೋವು ಸಂಭವಿಸಿಲ್ಲ. ʼʼಸೇತುವೆ ಕುಸಿಯುವ ಕೇವಲ ಒಂದು ನಿಮಿಷದ ಮೊದಲು ಸುಮಾರು 65 ಜನರಿದ್ದ ಮದುವೆ ಬಸ್‌ ಈ ಸೇತುವೆಯ ಕೆಳಗಿನಿಂದ ಹಾದು ಹೋಗಿತ್ತುʼʼ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮನೇರ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಸುಮಾರು ಒಂದು ಕಿಲೋ ಮೀಟರ್ ಉದ್ದದ ಸೇತುವೆ ನಿರ್ಮಾಣಕ್ಕೆ 2016ರಲ್ಲಿ ಅಂದಿನ ತೆಲಂಗಾಣ ವಿಧಾನಸಭಾ ಸ್ಪೀಕರ್ ಎಸ್.ಮಧುಸೂದನ ಚಾರಿ ಮತ್ತು ಸ್ಥಳೀಯ ಶಾಸಕ ಪುಟ್ಟ ಮಧು ಚಾಲನೆ ನೀಡಿದ್ದರು. ಆದರೆ ಇನ್ನೂ ಅದು ಪೂರ್ಣಗೊಂಡಿಲ್ಲ. ಈ ಸೇತುವೆ ನಿರ್ಮಾಣಕ್ಕೆ ಸುಮಾರು 49 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಥಣಿ, ಪರಕಲ್ ಮತ್ತು ಜಮ್ಮಿಕುಂಟಾ ಎಂಬ ಮೂರು ಪಟ್ಟಣಗಳ ನಡುವಿನ ಅಂತರವನ್ನು ಸುಮಾರು 50 ಕಿ.ಮೀ.ನಷ್ಟು ಕಡಿಮೆ ಮಾಡಲು ಈ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಒಂದು ವರ್ಷದಲ್ಲಿ ಅಂದರೆ 2017ರಲ್ಲಿಯೇ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿತ್ತು. ಸರ್ಕಾರವು ಬಾಕಿ ಹಣವನ್ನು ಪಾವತಿಸದ ಕಾರಣ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ. ಅಚ್ಚರಿ ಎಂದರೆ ಇದೇ ಗುತ್ತಿಗೆದಾರ ವೇಮುಲವಾಡದಲ್ಲಿ ಸೇತುವೆಯನ್ನು ನಿರ್ಮಿಸಿದ್ದರು. ಅದು 2021ರಲ್ಲಿ ಸುರಿದ ಭಾರೀ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು.

ಐದು ವರ್ಷಗಳಿಂದ ಸ್ಥಳೀಯರು ಸೇತುವೆಯ ಕೆಳಗೆ ಮಣ್ಣಿನ ರಸ್ತೆಯನ್ನು ಬಳಸುತ್ತಿದ್ದಾರೆ. ʼʼಸೇತುವೆ ಕಾಮಗಾರಿ ಶೇ. 60ರಷ್ಟೂ ಪೂರ್ಣಗೊಳ್ಳದ ಕಾರಣ ಕಳೆದ ವರ್ಷ ಹೆಚ್ಚುವರಿಯಾಗಿ 11 ಕೋಟಿ ರೂ. ಸೇರಿಸಲಾಗಿತ್ತು. ಆದರೂ ಕಾಮಗಾರಿ ನಡೆಯಲಿಲ್ಲʼʼ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬಾಲ್ಟಿಮೋರ್‌ ಸೇತುವೆ ಕುಸಿತ ಪ್ರಕರಣ; ಹಡಗಿನಲ್ಲಿದ್ದ ಭಾರತೀಯ ಸಿಬ್ಬಂದಿಯ ಸಮಯಪ್ರಜ್ಞೆಗೆ ಅಮೆರಿಕ ಅಧ್ಯಕ್ಷ ಬೈಡನ್ ಮೆಚ್ಚುಗೆ

ಕ್ರಿಸ್‌ಮಸ್‌ ಆಚರಣೆಗಾಗಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕುಸಿತ

ಕೇರಳದಲ್ಲಿ ಕ್ರಿಸ್‌ಮಸ್‌ ಆಚರಣೆಗೆಂದು ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಕುಸಿದು ಎಂಟು ಮಂದಿ ಗಾಯಗೊಂಡ ಘಟನೆ ಡಿಸೆಂಬರ್‌ನಲ್ಲಿ ನಡೆದಿತ್ತು. ತಿರುವನಂತಪುರಂ ಜಿಲ್ಲೆಯ ಪೂವರ್‌ ಪ್ರದೇಶದಲ್ಲಿ ಡಿಸೆಂಬರ್‌ 25ರ ರಾತ್ರಿ ಕ್ರೈಸ್ತ ಸಮುದಾಯದ ನೂರಾರು ಜನ ಕ್ರಿಸ್‌ಮಸ್‌ ಆಚರಣೆಗೆಂದು ಒಂದೆಡೆ ಸೇರಿದ್ದರು. ಇದೇ ವೇಳೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಕುಸಿದ ಕಾರಣ ಎಂಟು ಮಂದಿ ಗಾಯಗೊಂಡಿದ್ದರು.

ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ಸೇತುವೆ ಮೇಲೆ ಹೆಚ್ಚಿನ ಜನ ನಿಂತಿದ್ದ ಕಾರಣ ಈ ದುರಂತ ಸಂಭವಿಸಿತ್ತು. ಏಕಾಏಕಿ ಸೇತುವೆ ಕುಸಿದ ಕಾರಣ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಆಂಬುಲೆನ್ಸ್‌ ವ್ಯವಸ್ಥೆ ಮಾಡುವ ಜತೆಗೆ ಜನರನ್ನು ರಕ್ಷಿಸಿದರು ಎಂದು ಮೂಲಗಳು ತಿಳಿಸಿವೆ.

Exit mobile version