ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಮತ್ತು ಭಾರತ್ ರಾಷ್ಟ್ರ ಸಮಿತಿ (BRS) ಮುಖ್ಯಸ್ಥ ಕೆ.ಚಂದ್ರಶೇಖರ್ ರಾವ್ (K Chandrashekhar Rao) ಅವರು ಮುಂಬರುವ ರಾಜ್ಯ ವಿಧಾನಸಭಾ (Telangana Polls) ಚುನಾವಣೆಗೆ ಅಭ್ಯರ್ಥಿಗಳ ಸಂಪೂರ್ಣ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಕೆಸಿಆರ್ ಅವರು ಕಾಮರೆಡ್ಡಿ ಮತ್ತು ಗಜ್ವೆಲ್ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ.
ಅಕ್ಟೋಬರ್ 16 ರಂದು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಚಂದ್ರಶೇಖರ ರಾವ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ನಾವು ಅಕ್ಟೋಬರ್ 16 ರಂದು ವಾರಂಗಲ್ನಲ್ಲಿ ನಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡುತ್ತೇವೆ. ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವುದು ಕಂಡುಬಂದರೆ ಅವರನ್ನು ಪಕ್ಷದಿಂದ ಹೊರಹಾಕಲಾಗುವುದು ಎಂದು ಹೇಳಿದ್ದಾರೆ. ಹಣಕಾಸು ಸಚಿವ ತಣ್ಣೀರು ಹರೀಶ್ ರಾವ್ ಅವರು ಸಿದ್ದಿಪೇಟೆ ಕ್ಷೇತ್ರದಿಂದ ಮತ್ತು ಶಿಕ್ಷಣ ಸಚಿವ ಪಟ್ಲೋಲ್ಲಾ ಸಬಿತಾ ಇಂದ್ರ ರೆಡ್ಡಿ ಅವರು ಮಹೇಶ್ವರಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನರಸಾಪುರ, ಜನಗಾಂವ್, ಗೋಶಾಮಹಲ್, ನಾಂಪಲ್ಲಿ ಕ್ಷೇತ್ರಗಳಲ್ಲಿ ಇನ್ನೂ ಅಭ್ಯರ್ಥಿಗಳನ್ನು ಘೋಷಿಸಲಾಗಿಲ್ಲ.
ತಮ್ಮ ಎರಡು ಕ್ಷೇತ್ರದ ಉಮೇದುವಾರಿಕೆಯನ್ನು ಪಕ್ಷದ ನಿರ್ಧಾರ ಎಂದು ಕರೆದ ಕೆಸಿಆರ್, ಚುನಾವಣೆಯಲ್ಲಿ 95ರಿಂದ 105 ಸ್ಥಾನಗಳನ್ನು ಪಡೆಯುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕಾಮರೆಡ್ಡಿ ಕ್ಷೇತ್ರದ ಶಾಸಕ ವೈಯಕ್ತಿಕವಾಗಿ ತಮ್ಮ ಸ್ಥಾನದಿಂದ ಸ್ಪರ್ಧಿಸಲು ವಿನಂತಿಸಿದ್ದಾರೆ ಮತ್ತು ನಿಜಾಮಾಬಾದ್ ಮತ್ತು ಇತರ ಕೆಲವು ಜಿಲ್ಲೆಗಳಿಂದ ಇದೇ ರೀತಿಯ ವಿನಂತಿಗಳು ಬಂದದ್ದವರು. ಅಂತಿಮವಾಗಿ ಕಾಮರೆಡ್ಡಿ ಹಾಗೂ ಗಜ್ವೆಲ್ನಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದರು.
ಸೆಪ್ಟೆಂಬರ್ 2018ರಲ್ಲಿ, ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಅವಧಿ ಮುಗಿಯುವ ಸುಮಾರು 8 ತಿಂಗಳ ಮೊದಲು, ಕೆಸಿಆರ್ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿದ್ದರು. ಅದೇ ದಿನ 105 ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ್ದರು. ಚುನಾವಣಾ ಅಧಿಸೂಚನೆಯನ್ನು ನಂತರ ಘೋಷಿಸಲಾಯಿತು ಮತ್ತು ಮೂರು ತಿಂಗಳ ನಂತರ ಡಿಸೆಂಬರ್ 7 ರಂದು ರಾಜ್ಯವು ಚುನಾವಣೆಗೆ ಹೋಯಿತು. ಅವರ ಪಕ್ಷ ಮತ್ತೆ ಅಧಿಕಾರ ಹಿಡಿದಿತ್ತು.
ಅಕ್ಟೋಬರ್ 16ರಂದು ಪ್ರಣಾಳಿಕೆ ಬಿಡುಗಡೆ
ಸೋಮವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾವ್, ಘೋಷಿಸಿದ ಪಟ್ಟಿಯಲ್ಲಿ ಕೇವಲ ಏಳು ಬದಲಾವಣೆಗಳಿವೆ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಅಕ್ಟೋಬರ್ 16 ರಂದು ವಾರಂಗಲ್ನಲ್ಲಿ ನಡೆಯಲಿರುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ನಾಂಪಲ್ಲಿ, ನರಸಾಪುರ, ಗೋಶಾಮಹಲ್ ಮತ್ತು ಜನಗಾಂವ್ ಎಂಬ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿಲ್ಲ ಎಂಬುದಾಗಿ ಹೇಳಿದರು.
ಬೋಥ್, ಖಾನಾಪುರ, ವೈರಾ, ಕೊರುಟ್ಲಾ, ಉಪ್ಪಲ್, ಆಸಿಫಾಬಾದ್ ಮತ್ತು ಮೆಟಪಲ್ಲಿಗೆ ಹೊಸ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಅನೇಕ ಆಕಾಂಕ್ಷಿಗಳಿದ್ದಾರೆ ಎಂದು ಒಪ್ಪಿಕೊಂಡ ಕೆಸಿಆರ್, ಟಿಕೆಟ್ ಪಡೆಯಲು ವಿಫಲರಾದವರು ಪಕ್ಷಕ್ಕಾಗಿ ಕೆಲಸ ಮಾಡುವುದನ್ನು ಮುಂದುವರಿಸಬೇಕು ಮತ್ತು ಅವಕಾಶಗಳು ಅವರಿಗೆ ಬರಲಿವೆ ಎಂದು ಹೇಳಿದರು. ಎಲ್ಲಾ ಅಭ್ಯರ್ಥಿಗಳಿಗೆ ಯಶಸ್ಸನ್ನು ಹಾರೈಸಿದ ಕೆಸಿಆರ್, ಶುಭ ಸಮಯ ಮತ್ತು ದಿನವನ್ನು ಪರಿಗಣಿಸಿ ಮಧ್ಯಾಹ್ನ 2.38 ರ ನಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ : BJP Election In charge: ರಾಜಸ್ಥಾನಕ್ಕೆ ಕನ್ನಡಿಗನ ಸಾರಥ್ಯ! ಎಂಪಿ, ಛತ್ತೀಸ್‌ಗಢ, ತೆಲಂಗಾಣಕ್ಕೆ ಬಿಜೆಪಿ ಉಸ್ತುವಾರಿಗಳ ನೇಮಕ
ಕರ್ನಾಟಕದಲ್ಲಿ ಜಯಗಳಿಸಿದ ನಂತರ ತೆಲಂಗಾಣದಲ್ಲಿ ಕಾಂಗ್ರೆಸ್ನ ಪುನರುಜ್ಜೀವನದ ಬಗ್ಗೆ ಮಾತನಾಡಿದ ಕೆಸಿಆರ್, ಇದು ತೆಲಂಗಾಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪುನರುಚ್ಚರಿಸಿದರು. “ಕರ್ನಾಟಕದಲ್ಲಿ ಏನಾಗುತ್ತಿದೆ, ಈಗ ಜನರು ಅರಿತುಕೊಳ್ಳುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ವಿದ್ಯುತ್ ಕಡಿತ (ಮತ್ತೆ ಬಂದಿದೆ) ಸಮಸ್ಯೆಯಿದೆ. ಕಾಂಗ್ರೆಸ್ ಈಗಾಗಲೇ ತಮ್ಮ ಅನೇಕ ಭರವಸೆಗಳನ್ನು ಮರೆತಿದೆ ಎಂದು ಹೇಳಿದ್ದಾರೆ.
ಬಿಆರ್ಎಸ್ ಪಕ್ಷ ಮುಖ್ಯ ಪ್ರತಿಸ್ಪರ್ಧಿ ಯಾರು ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷವು 95 ರಿಂದ 105 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿರುವಾಗ, ಯಾರೂ ಪ್ರತಿಸ್ಪರ್ಧಿಯಾಗುವುದಿಲ್ಲ. ಪಕ್ಷವು ಅಭಿವೃದ್ಧಿ ಕಾರ್ಯಸೂಚಿ ಮತ್ತು ನಡೆಯುತ್ತಿರುವ ಅಭಿವೃದ್ಧಿ ಪ್ರಕ್ರಿಯೆ ಮುಂದುವರಿಸಲಿದೆ ಎಂದು ಹೇಳಿದರು.