Site icon Vistara News

BRS MLA: ತೆಲಂಗಾಣದಲ್ಲಿ ಟಿವಿ ಲೈವ್‌ನಲ್ಲೇ ಬಿಜೆಪಿ ನಾಯಕನ ಕತ್ತು ಹಿಸುಕಿದ ಬಿಆರ್‌ಎಸ್‌ ಶಾಸಕ

BRS MLA Assaults BJP MLA

BRS Party MLA Assaults BJP Leader On Live TV Debate In Telangana

ಹೈದರಾಬಾದ್:‌ ತೆಲಂಗಾಣ ವಿಧಾನಸಭೆ ಚುನಾವಣೆಗೆ (Telangana Assembly Election) ದಿನಾಂಕ ಘೋಷಣೆಯಾಗಿದೆ. ಭಾರತ್‌ ರಾಷ್ಟ್ರ ಸಮಿತಿ (BRS), ಕಾಂಗ್ರೆಸ್‌ ಹಾಗೂ ಬಿಜೆಪಿಯು ರಣತಂತ್ರ ರೂಪಿಸುತ್ತಿವೆ. ಶತಾಯ ಗತಾಯ ಚುನಾವಣೆಯಲ್ಲಿ ಗೆಲ್ಲಲು ಯೋಜನೆ, ತಂತ್ರ, ಅಸ್ತ್ರಗಳನ್ನು ಬಳಸುತ್ತಿವೆ. ರಾಜಕೀಯ ನಾಯಕರ ಮಧ್ಯೆ ತೀವ್ರ ವಾದ, ವಾಗ್ವಾದ, ಆರೋಪ, ಪ್ರತ್ಯಾರೋಪಗಳು ಕೂಡ ಆರಂಭವಾಗಿವೆ. ಇದರ ಬೆನ್ನಲ್ಲೇ, ನ್ಯೂಸ್‌ ಚಾನೆಲ್‌ ಲೈವ್‌ನಲ್ಲಿಯೇ ಬಿಆರ್‌ಎಸ್‌ ಶಾಸಕರೊಬ್ಬರು (BRS MLA) ಬಿಜೆಪಿ ಅಭ್ಯರ್ಥಿಯೊಬ್ಬರ ಮೇಲೆ ದಾಳಿ ನಡೆಸಿ, ಅವರ ಕತ್ತು ಹಿಸುಕಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗುವ ಜತೆಗೆ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

ಬಿಆರ್‌ಎಸ್‌ ಶಾಸಕ ಕೆ.ಪಿ ವಿವೇಕಾನಂದ ಹಾಗೂ ಬಿಜೆಪಿ ಅಭ್ಯರ್ಥಿ ಶ್ರೀಶೈಲಂ ಗೌರ್‌ ಅವರು ನ್ಯೂಸ್‌ ಚಾನೆಲ್‌ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಇಬ್ಬರು ನಾಯಕರ ಮಧ್ಯೆ ಚರ್ಚೆಯಾಗುತ್ತಿತ್ತು. ಇದೇ ವೇಳೆ ಕುಪಿತಗೊಂಡ ಕೆ.ಪಿ ವಿವೇಕಾನಂದ ಅವರು ಶ್ರೀಶೈಲಂ ಗೌರ್‌ ಮೇಲೆ ಎರಗಿದ್ದಾರೆ. ಶ್ರೀಶೈಲಂ ಗೌರ್‌ ಅವರ ಮೇಲೆ ಹಲ್ಲೆ ನಡೆಸಿ, ಅವರ ಕತ್ತನ್ನು ಬಿಗಿಯಾಗಿ ಹಿಡಿದ್ದಾರೆ. ಈ ವಿಡಿಯೊ ಈಗ ಸಂಚಲನ ಮೂಡಿಸಿದೆ.

ವೈರಲ್‌ ಆಗಿರುವ ವಿಡಿಯೊ

ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ

ಪಕ್ಷದ ಅಭ್ಯರ್ಥಿ ಮೇಲೆ ಬಿಆರ್‌ಎಸ್‌ ಶಾಸಕ ಹಲ್ಲೆ ನಡೆಸಿರುವುದನ್ನು ಬಿಜೆಪಿ ಖಂಡಿಸಿದೆ. “ಟಿವಿ ಚಾನೆಲ್‌ ಚರ್ಚೆ ವೇಳೆ ಬಿಆರ್‌ಎಸ್‌ ಶಾಸಕ ಹಲ್ಲೆ ನಡೆಸಿರುವುದು ಖಂಡನೀಯವಾಗಿದೆ. ಒಬ್ಬ ಪ್ರತಿಪಕ್ಷದ ಅಭ್ಯರ್ಥಿ ಮೇಲೆಯೇ ಆಡಳಿತ ಪಕ್ಷದ ಶಾಸಕ ಹಲ್ಲೆ ನಡೆಸಿದ್ದಾರೆ ಎಂದರೆ ಇವರು ಮತ್ತೆ ಅಧಿಕಾರಕ್ಕೆ ಬಂದರೆ ಏನಾಗುತ್ತದೆ ಎಂಬುದನ್ನು ಸಾಮಾನ್ಯ ಜನರು ಊಹಿಸಿಕೊಳ್ಳಬೇಕು” ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷರೂ ಕೇಂದ್ರ ಸಚಿವ ಜಿ ಕಿಶನ್‌ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಸಮೇತ ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Attack on Sonu Nigam: ಸೆಲ್ಫಿಗಾಗಿ ಗಾಯಕ ಸೋನು ನಿಗಮ್​ ಮೇಲೆ ಹಲ್ಲೆ ಮಾಡಿದ ಶಾಸಕನ ಪುತ್ರ ಮತ್ತು ಅಳಿಯ

ತೆಲುಗು ನ್ಯೂಸ್‌ ಚಾನೆಲ್‌ ಲೈವ್‌ನಲ್ಲೇ ಬಿಆರ್‌ಎಸ್‌ ಶಾಸಕ ಪ್ರತಿಸ್ಪರ್ಧಿ ಅಭ್ಯರ್ಥಿ ಮೇಲೆ ದಾಳಿ ನಡೆಸುತ್ತಲೇ ಅಲ್ಲಿಂದ ಸಿಬ್ಬಂದಿ ಹಾಗೂ ಪೊಲೀಸರು ಜಗಳ ಬಿಡಿಸಿದ್ದಾರೆ. ತೆಲಂಗಾಣ ವಿಧಾನಸಭೆ ಚುನಾವಣೆ, ರಾಜ್ಯದ ಸಮಸ್ಯೆಗಳು, ಅಧಿಕಾರಕ್ಕೆ ಬಂದರೆ ಮಾಡಬೇಕಾದ ಅಭಿವೃದ್ಧಿ ಕೆಲಸಗಳ ಕುರಿತು ನಡೆದ ಚರ್ಚೆಯ ವೇಳೆಯೇ ಬಿಆರ್‌ಎಸ್‌ ಶಾಸಕ ಹಲ್ಲೆಗೆ ಮುಂದಾಗಿದ್ದು ಜನರ ಆಕ್ರೋಶ ಕೆರಳಿಸಿದೆ. ಜನಪ್ರತಿನಿಧಿಯೊಬ್ಬರು ಹೀಗೆ ಪ್ರತಿಸ್ಪರ್ಧಿ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ. ತೆಲಂಗಾಣದಲ್ಲಿ ನವೆಂಬರ್‌ 30ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಸೆಂಬರ್‌ 30ರಂದು ಫಲಿತಾಂಶ ಪ್ರಕಟವಾಗಲಿದೆ.

Exit mobile version