Site icon Vistara News

ಸ್ವತಃ ನರೇಂದ್ರ ಮೋದಿಯೇ ಬಿ.ಎಸ್‌. ಯಡಿಯೂರಪ್ಪಗೆ ಫೋನ್‌ ಮಾಡಿ ಒಪ್ಪಿಸಿದರು!

BS Yediyurappa appointed as national parliamentary board member

ಬೆಂಗಳೂರು: ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ನಂತರ ಮುಖ್ಯಮಂತ್ರಿಯಾಗಿ, ವಯಸ್ಸಿನ ಕಾರಣಕ್ಕೆ ರಾಜೀನಾಮೆ ನೀಡಿದ್ದ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಸಂಘಟನೆಯ ಅತ್ಯುನ್ನತ ಸಮಿತಿಯಲ್ಲಿ ಸ್ಥಾನ ದೊರಕಿದೆ. ಆದರೆ ಈ ತೀರ್ಮಾನ, ರಾಜ್ಯದ ಜನರಿಗೆ ಅಚ್ಚರಿ ತಂದಿದ್ದರೂ, ಬಿ.ಎಸ್‌. ಯಡಿಯೂರಪ್ಪ ಅವರಿಗೆ ನಿರೀಕ್ಷಿತ. ಏಕೆಂದರೆ ಈ ನೇಮಕದ ಆದೇಶವನ್ನು ಹೊರಡಿಸುವ ಮೊದಲು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ಸಂಪರ್ಕಿಸಿ ಮನವೊಲಿಸಿದ್ದರು.

ಈ ಹಿಂದೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಕೆಜೆಪಿ ಪಕ್ಷವನ್ನು ಕಟ್ಟಿ 2013ರ ಚುನಾವಣೆಯನ್ನು ಯಡಿಯೂರಪ್ಪ ಸೆಣೆಸಿದ್ದರು. ಆದರೆ ಅಲ್ಲಿ ನಿರೀಕ್ಷಿತ ಯಶಸ್ಸು ಸಿಗದೆ ಮತ್ತೆ ಬಿಜೆಪಿ ಸೇರ್ಪಡೆಯಾದರು. ಈ ಸಮಯದಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾದರು. ಈ ಸಮಯದಲ್ಲಿ ಯಡಿಯೂರಪ್ಪ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು.

ಆದರೆ, ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವನ್ನು ನೀಡುವುದರ ಹಿಂದೆ ರಾಜ್ಯ ರಾಜಕಾರಣದಿಂದ ಗೇಟ್‌ಪಾಸ್‌ ನೀಡುವ ಪ್ಲ್ಯಾನ್‌ ಇದೆ ಎಂದು ಯಡಿಯೂರಪ್ಪ ಭಾವಿಸಿದ್ದರು. ನನಗೆ ಯಾವುದೇ ಸ್ಥಾನ ಬೇಡ, ರಾಜ್ಯದಲ್ಲಿ ಸಂಚರಿಸಿಕೊಂಡು ಪಕ್ಷ ಸಂಘಟನೆ ಮಾಡುತ್ತೇನೆ ಎಂದು ತಿಳಿಸಿದ್ದರು. ಆದರೆ ನರೇಂದ್ರ ಮೋದಿಯವರ ಒತ್ತಾಯಕ್ಕೆ ಮಣಿದು ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಂಡರು.

ರಾಷ್ಟ್ರೀಯ ಉಪಾಧ್ಯಕ್ಷರಾದರೂ ರಾಷ್ಟ್ರಮಟ್ಟದಲ್ಲಿ ಸಂಚಾರ ಮಾಡಿದ್ದು ಅಷ್ಟಕ್ಕಷ್ಟೆ. ಈ ಕುರಿತು ಒಮ್ಮೆ ಮಾತನಾಡಿ, ನನಗೆ ರಾಷ್ಟ್ರ ರಾಜಕಾರಣದ ಬಗ್ಗೆ ಆಸಕ್ತಿ ಇಲ್ಲ. ರಾಜ್ಯದಲ್ಲೇ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತರುತ್ತೇನೆ, ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಕೈ ಬಲಪಡಿಸುವುದೇ ನನ್ನ ಗುರಿ ಎಂದಿದ್ದರು. ನಂತರ ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇನ್ನೆಂದೂ ರಾಷ್ಟ್ರರಾಜಕಾರಣಕ್ಕೆ ಮರಳುವುದಿಲ್ಲ ಎಂದಿದ್ದರು.

ನರೇಂದ್ರ ಮೋದಿ ಕರೆ

ಈ ಬಾರಿ ಕೇಂದ್ರ ಸಂಸದೀಯ ಮಂಡಳಿ ಪುನರ್‌ರಚನೆ ವೇಳೆ ಬಿ.ಎಸ್‌. ಯಡಿಯೂರಪ್ಪ ಅವರನ್ನು ನೇಮಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 2014ರ ಲೋಕಸಭೆ ಚುನಾವಣೆಗೂ ಮುನ್ನ ಪಕ್ಷದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಚರ್ಚೆ ನಡೆಯುತ್ತಿದ್ದಾಗ, ಮೋದಿ ಕುರಿತು ಇನ್ನೂ ಸಂಪೂರ್ಣ ಒಲವು ವ್ಯಕ್ತವಾಗಿರಲಿಲ್ಲ. ಪಕ್ಷದ ವರಿಷ್ಠ ಎಲ್‌.ಕೆ. ಆಡ್ವಾಣಿ ಅವರನ್ನು ಮೀರಿ ಮಾತನಾಡಲು ಯಾರಿಗೂ ಧೈರ್ಯ ಇರಲಿಲ್ಲ. ಈ ಸಮಯದಲ್ಲಿ, ನರೇಂದ್ರ ಮೋದಿಯವರು ಪ್ರಧಾನಿ ಅಭ್ಯರ್ಥಿಯಾದರೆ ಪಕ್ಷ ಗೆಲ್ಲುತ್ತದೆ ಎಂದು ಸಂಪೂರ್ಣ ಬೆಂಬಲ ನೀಡಿದವರು ಬಿ.ಎಸ್‌. ಯಡಿಯೂರಪ್ಪ. ಅಂದಿನಿಂದಲೂ ಯಡಿಯೂರಪ್ಪ ಹಾಗೂ ಮೋದಿ ನಡುವೆ ಬಾಂಧವ್ಯ ಇದೆ.

ರಾಷ್ಟ್ರ ರಾಜಕಾರಣದ ಕುರಿತು ಆಸಕ್ತಿ ಇಲ್ಲದ ಯಡಿಯೂರಪ್ಪ, ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ನೇಮಕ ಮಾಡುವ ನಿರ್ಧಾರವನ್ನು ಒಪ್ಪಿಕೊಳ್ಳದಿದ್ದರೆ ಎಂಬ ಅಳುಕು ಸಮಿತಿಯಲ್ಲಿತ್ತು. ಹೀಗಾಗಿ ನಿರ್ಧಾರವನ್ನು ಸ್ವತಃ ಮೋದಿಯವರು ದೂರವಾಣಿ ಮಾಡಿ ತಿಳಿಸಿದ್ದಾರೆ.‌ ಕರ್ನಾಟಕದಲ್ಲಷ್ಟೆ ಅಲ್ಲದೆ, ದಕ್ಷಿಣ ಭಾರತದಲ್ಲಿ ಪಕ್ಷವನ್ನು ಸದೃಢಗೊಳಿಸುವ ಮಿಷನ್‌ ದಕ್ಷಿಣ್‌ ಅಭಿಯಾನಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದ್ದಾರೆ. ಈ ಸಮಯದಲ್ಲಿ, ತಮ್ಮ ಹಾಗೂ ಪುತ್ರ ಬಿ.ವೈ. ವಿಜಯೇಂದ್ರ ಭವಿಷ್ಯದ ಕುರಿತು ಯಡಿಯೂರಪ್ಪ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ಎಲ್ಲ ಸಂದೇಹಗಳಿಗೂ ಸ್ಪಷ್ಟ ಭರವಸೆಗಳನ್ನು ನೀಡಿರುವ ಮೋದಿಯವರು, ಹೊಸ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳುವಂತೆ ಮನವೊಲಿಸಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಪಕ್ಷ ಹಾಗೂ ಪುತ್ರನ ಹಿತದೃಷ್ಟಿಯಿಂದ ಹೊಣೆಯನ್ನು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ನೇಮಕದ ನಂತರ ಕಾವೇರಿ ಅತಿಥಿಗೃಹದಲ್ಲಿ ಮೊದಲ ಸುದ್ದಿಗೋಷ್ಠಿ ನಡೆಸಿದ ಬಿ.ಎಸ್‌. ಯಡಿಯೂರಪ್ಪ “ಪ್ರಧಾನಿ ಮೋದಿಯವರ ಜತೆ ಮಾತನಾಡುವಾಗ, ನೀವು ದಕ್ಷಿಣ ಭಾರತದ ಕಡೆ ಕೂಡ ಗಮನ ಕೊಡಬೇಕು ಎಂದರು. ನನ್ನನ್ನು ಸದಸ್ಯರನ್ನಾಗಿ ಮಾಡಿದ್ದಕ್ಕೆ ಸಂತೋಷವಿದೆ. ರಾಜ್ಯದ ಸುತ್ತ ಓಡಾಟ ಮಾಡಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಪಕ್ಷವನ್ನು ತಂದು ದಕ್ಷಿಣ ಭಾರತದಲ್ಲಿ ಪಕ್ಷದ ಸಂಘಟನೆ ಮಾಡಬೇಕೆಂಬ ಆಸೆ ಮೋದಿ, ನಡ್ಡಾಜಿ ಅವರಿಗೆ ಇದೆ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತ ಕ್ರಿಯಾಶೀಲನಾಗಿದ್ದರೆ ಪಕ್ಷ ಕೈಬಿಡುವುದಿಲ್ಲ ಎನ್ನುವುದಕ್ಕೆ ನಾನೇ ಉದಾಹರಣೆ. ರಾಜಕೀಯ ಬದುಕು ಮತ್ತು ಸಾರ್ವಜನಿಕ ಬದುಕಿನಿಂದ ಎಂದೂ ನಿವೃತ್ತಿ ಬಯಸಿಲ್ಲ. ಕರ್ನಾಟಕದಲ್ಲಿ ಬೇರೆ ಪಕ್ಷ ಅಧಿಕಾರಕ್ಕೆ ಬರಲು ಬಿಡುವುದಿಲ್ಲ. 140ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ದಕ್ಷಿಣ ಭಾರತದಲ್ಲೂ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ಪಕ್ಷ ಬಲವರ್ಧನೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಸಾಮೂಹಿಕ ನಾಯಕತ್ವದಲ್ಲೇ ಪ್ರವಾಸ ಮಾಡಿ ಮತ್ತೆ ಅಧಿಕಾರಕ್ಕೆ ಬರುತ್ತೇವೆʼʼ ಎಂದಿದ್ದಾರೆ.

ಇನ್ನೂ ಹತ್ತು ವರ್ಷ ಪಕ್ಷ ಸಂಘಟನೆ ಮಾಡುತ್ತೇನೆ ಎನ್ನುವುದನ್ನು ಪುನರುಚ್ಚರಿಸಿದ ಯಡಿಯೂರಪ್ಪ “ಪಕ್ಷವನ್ನು ಬಲಪಡಿಸಲು ಒಳ್ಳೆಯ ನಾಯಕರು, ಕಾರ್ಯಕರ್ತರಿದ್ದಾರೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಶ್ಚಿತ. ರಾಜ್ಯದಲ್ಲೂ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಮೂಲಕ ಎಲ್ಲರೂ ಒಟ್ಟಾಗಿ ಹೋಗುತ್ತೇವೆʼʼ ಎಂದರು. ಕಾಂಗ್ರೆಸ್‌ನಲ್ಲಿ ಸಿಎಂ ಸ್ಥಾನಕ್ಕೆ ಗುದ್ದಾಟದ ಕುರಿತು ಪ್ರತಿಕ್ರಿಯಿಸಿ, ಕೆಲವರು ಸಿಎಂ ಆಗುವುದಕ್ಕೆ ಫೈಟ್ ಮಾಡುತ್ತಿದ್ದಾರೆ. ಅವರ ಆಸೆ ಯಾವ ರೀತಿ ನಿರಾಸೆ ಆಗುತ್ತದೆ ಎಂದು ನೀವೇ ನೋಡಿ. ಇವತ್ತಿನಿಂದ ಇವೆಲ್ಲ ಗಲಾಟೆಗಳೂ ನಿಂತುಹೋಗುತ್ತವೆ ಎಂದು ತಿಳಿಸಿದರು.

ಬಿಎಸ್‌ವೈಗೆ ಶುಭಾಶಯಗಳ ಮಹಾಪೂರ

ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗೆ ನೇಮಕವಾಗುತ್ತಲೇ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ. ನಂತರ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಸಚಿವರುಗಳೆಲ್ಲರೂ ಮನೆಗೆ ತೆರಳಿ ಸಿಹಿ ತಿನ್ನಿಸಿ ಸಂತಸ ಹಂಚಿಕೊಂಡರು.

Exit mobile version