Site icon Vistara News

BSF DG Row: ಬಿಎಸ್‌ಎಫ್‌ ಮುಖ್ಯಸ್ಥ ನಿತಿನ್‌ ಅಗರ್ವಾಲ್‌ ತಲೆದಂಡಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ

BSF DG Row

ನವದೆಹಲಿ: ಗಡಿ ಭದ್ರತಾ ಪಡೆ (Border Security Force) ಮಹಾ ನಿರ್ದೇಶಕ (BSF DG Row)​ ನಿತಿನ್ ಅಗರ್ವಾಲ್ ಮತ್ತು ಸ್ಪೆಷಲ್ ಡೆಪ್ಯುಟಿ ಡೈರೆಕ್ಟರ್​ (ಪಶ್ಚಿಮ) ವೈ.ಬಿ. ಖುರಾನಿಯಾ ಅವರನ್ನು ಆ ಹುದ್ದೆಯಿಂದ ಬಿಡುಗಡೆ ಮಾಡಿದೆ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮ ರಾಜ್ಯ ಕೇಡರ್​ಗಳಿಗೆ ವಾಪಸ್ ಕಳುಹಿಸಲಾಗಿದೆ. ಇದರ ಬೆನ್ನಲ್ಲೇ ಐಪಿಎಸ್‌ (IPS) ಅಧಿಕಾರಿ ದಲ್ಜಿತ್‌ ಸಿಂಗ್‌ ಚೌಧರಿ (Daljit Singh Chawdhary) ಅವರನ್ನು ಬಿಎಸ್‌ಎಫ್‌ ಡಿಜಿಯನ್ನಾಗಿ ನೇಮಿಸಲಾಗಿದೆ. ಇದರ ಬೆನ್ನಲ್ಲೇ, ನಿತಿನ್‌ ಅಗರ್ವಾಲ್‌ ಅವರನ್ನು ಹುದ್ದೆಯಿಂದ ತೆರವುಗೊಳಿಸಲು ಅವರು ಮಾಡಿಕೊಂಡ ಎಡವಟ್ಟುಗಳೇ ಕಾರಣ ಎಂದು ಮೂಲಗಳು ತಿಳಿಸಿವೆ.

“ಬಿಎಸ್‌ಎಫ್‌ ಡಿಜಿ ಅವರನ್ನು ಕಾರ್ಯಾಚರಣೆ ಅಥವಾ ವೃತ್ತಿಪರತೆಯಲ್ಲಿ ಲೋಪದೋಷದಿಂದಾಗಿ ಹುದ್ದೆಯಿಂದ ತೆರವುಗೊಳಿಸಿಲ್ಲ. ಆದರೆ, ಡಿಜಿ ಹಾಗೂ ಅವರ ಅಧೀನದಲ್ಲಿರುವ ಅಧಿಕಾರಿಗಳ ಜತೆಗಿನ ಮುಸುಕಿನ ಗುದ್ದಾಟ, ಒಳಜಗಳಗಳಿಂದಾಗಿ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ನಿತಿನ್‌ ಅಗರ್ವಾಲ್‌ ಹಾಗೂ ಕಿರಿಯ ಅಧಿಕಾರಿಗಳ ನಡುವಿನ ಬಿಕ್ಕಟ್ಟು ಶಮನವಾಗಬೇಕು, ಗಡಿಯಲ್ಲಿ ದಕ್ಷತೆ ಹೆಚ್ಚಾಗಬೇಕು ಎಂಬ ಕಾರಣಕ್ಕಾಗಿ ನಿತಿನ್‌ ಅಗರ್ವಾಲ್‌ ಹಾಗೂ ವೈ.ಬಿ.ಖುನರಿಯಾ ಅವರನ್ನು ಹುದ್ದೆಯಿಂದ ಕೇಂದ್ರ ಗೃಹ ಸಚಿವಾಲಯವು ಕೆಳಗಿಳಿಸಿದೆ” ಎಂದು ಸರ್ಕಾರದ ಮೂಲಗಳು ತಿಳಿಸಿವೆ.

“ಬಿಎಸ್‌ಎಫ್‌ ಡಿಜಿ ಅವರ ಅಧೀನದಲ್ಲಿರುವ ಆಪ್ತ ಅಧಿಕಾರಿಗಳು ಹಾಗೂ ಮತ್ತೊಂದಿಷ್ಟು ಕಿರಿಯ ಅಧಿಕಾರಿಗಳ ತಂಡದ ಮಧ್ಯೆ ವೈಮನಸ್ಸು ಉಂಟಾಗಿತ್ತು. ಇವರ ಗುಂಪು, ಅವರ ಗುಂಪು ಎಂಬ ಭೇದ-ಭಾವ ಸೃಷ್ಟಿಯಾಗಿತ್ತು. ಇದು ಹಲವು ಸಂದರ್ಭಗಳಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳುವಾಗ ಪರಿಣಾಮ ಬೀರುತ್ತಿತ್ತು. ಅದರಲ್ಲೂ, ಉಗ್ರರ ಚಟುವಟಿಕೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಗಡಿಯಲ್ಲಿ ಬಿಎಸ್‌ಎಫ್‌ ಸಿಬ್ಬಂದಿಯನ್ನು ನಿಯೋಜಿಸುವ ವಿಷಯದಲ್ಲೂ ಗುಂಪುಗಾರಿಕೆ ನಡೆಯುತ್ತಿತ್ತು, ಯಾವುದೇ ರೀತಿಯ ಅಶಿಸ್ತನ್ನು ಸಹಿಸದ ಸಚಿವಾಲಯವು ಕಠಿಣ ಕ್ರಮ ತೆಗೆದುಕೊಂಡಿದೆ” ಎಂದು ತಿಳಿದುಬಂದಿದೆ.

ಅಗರ್ವಾಲ್ ಅವರು ಕಳೆದ ವರ್ಷ ಜೂನ್​​ನಲ್ಲಿ ಬಿಎಸ್ಎಫ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ಖುರಾನಿಯಾ ಅವರು ವಿಶೇಷ ಡಿಜಿ (ಪಶ್ಚಿಮ) ಆಗಿ ಪಾಕಿಸ್ತಾನ ಗಡಿಯಲ್ಲಿ ಪಡೆ ರಚನೆಯ ನೇತೃತ್ವ ವಹಿಸಿದ್ದರು. ಅಂತಾರಾಷ್ಟ್ರೀಯ ಗಡಿಯಿಂದ ನಿರಂತರ ಒಳನುಸುಳುವಿಕೆ ಹಿನ್ನೆಲೆಯಲ್ಲಿ ಈ ಕ್ರಮ ಎಂದು ಹೇಳಲಾಗಿತ್ತು. ಸಮನ್ವಯದ ಕೊರತೆ ಸೇರಿ ನಿರ್ಣಾಯಕ ವಿಷಯಗಳ ಬಗ್ಗೆ ಬಿಎಸ್ಎಫ್ ಮುಖ್ಯಸ್ಥರ ವಿರುದ್ಧ ದೂರುಗಳು ಬಂದಿದ್ದವು ಎಂದು ಮೂಲಗಳು ತಿಳಿಸಿವೆ. ಬಿಎಸ್ಎಫ್ ಸುಮಾರು 2.65 ಲಕ್ಷ ಸಿಬ್ಬಂದಿಯನ್ನು ಹೊಂದಿದೆ ಮತ್ತು ಪಶ್ಚಿಮದಲ್ಲಿ ಪಾಕಿಸ್ತಾನ ಮತ್ತು ಪೂರ್ವದಲ್ಲಿ ಬಾಂಗ್ಲಾದೇಶದ ಗಡಿಗಳನ್ನು ಕಾಯುತ್ತಿದೆ.

ಇದನ್ನೂ ಓದಿ: BSF Chief: ಬಿಎಸ್‌ಎಫ್‌ ನೂತನ ಮುಖ್ಯಸ್ಥರಾಗಿ ದಲ್ಜಿತ್‌ ಸಿಂಗ್‌ ಚೌಧರಿ ನೇಮಕ

Exit mobile version