Site icon Vistara News

BSF Jawan: ಗಡಿಯಲ್ಲಿ ಪಾಕ್‌ ಸೈನಿಕರ ಉದ್ಧಟತನ; ಗುಂಡಿನ ದಾಳಿಗೆ ಭಾರತೀಯ ಯೋಧ ಹುತಾತ್ಮ

Terrorists Killed

Terrorists Killed

ಶ್ರೀನಗರ: ಪಾಕಿಸ್ತಾನಿ ಸೈನಿಕರ ಉದ್ಧಟತನ ಮುಂದುವರಿದಿದೆ. ಸಾಂಭಾ ಜಿಲ್ಲೆಯ ರಾಮಗಢ ವಲಯದ ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಪಾಕ್‌ ರೇಂಜರ್‌ಗಳು (Pak Rangers) ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಬಿಎಸ್‌ಎಫ್‌ ಯೋಧರೊಬ್ಬರು (BSF Jawan) ಹುತಾತ್ಮರಾಗಿದ್ದಾರೆ. ನವೆಂಬರ್‌ 8 ಹಾಗೂ 9ರ ನಡುವಿನ ರಾತ್ರಿ ವೇಳೆ ಪಾಕ್‌ ಸೈನಿಕರು ಭಾರತದ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದೇ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಯೋಧ ಹುತಾತ್ಮರಾಗಿದ್ದಾರೆ ಎಂದು ತಿಳಿದುಬಂದಿದೆ.

ಏಕಾಏಕಿ ನಡೆದ ಗುಂಡಿನ ದಾಳಿಯಲ್ಲ ಗಂಭೀರವಾಗಿ ಗಾಯಗೊಂಡ ಯೋಧನನ್ನು ಜಮ್ಮುವಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ ಎಂದು ತಿಳಿದುಬಂದಿದೆ. ಎರಡು ವಾರಗಳ ಹಿಂದೆಯೂ ಪಾಕಿಸ್ತಾನಿ ಸೈನಿಕರು ಗಡಿಯಲ್ಲಿ ಕದನವಿರಾಮ ಉಲ್ಲಂಘಿಸಿ ದಾಳಿ ನಡೆಸಿದ್ದಾರೆ.

ಒಬ್ಬ ಉಗ್ರನ ಹತ್ಯೆ

ಮತ್ತೊಂದೆಡೆ ಶೋಪಿಯಾನ್‌ ಜಿಲ್ಲೆಯಲ್ಲಿ ನಡೆದ ಕಾರ್ಯಾಚರಣೆ ವೇಳೆ ಭದ್ರತಾ ಸಿಬ್ಬಂದಿಯು ಉಗ್ರನೊಬ್ಬನನ್ನು ಹೊಡೆದುರುಳಿಸಿದ್ದಾರೆ. ಲಷ್ಕರೆ ತಯ್ಬಾ ಉಗ್ರ ಸಂಘಟನೆಯ ಅಂಗ ಸಂಸ್ಥೆಯಾದ ದಿ ರೆಸಿಸ್ಟನ್ಸ್‌ ಫ್ರಂಟ್‌ (The Resistance Front) ಉಗ್ರನನ್ನು ಹತ್ಯೆ ಮಾಡಲಾಗಿದೆ. ಹತ ಉಗ್ರನನ್ನು ಮೈಸರ್‌ ಅಹ್ಮದ್‌ ದರ್‌ ಎಂಬುದಾಗಿ ಗುರುತಿಸಲಾಗಿದೆ.

ಕಥೊಹಾಲನ್‌ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ನಿಖರ ಮಾಹಿತಿ ಪಡೆದ ಸೇನೆ ಹಾಗೂ ಪೊಲೀಸರು ಗುರುವಾರ (ನವೆಂಬರ್‌ 9) ಬೆಳಗಿನ ಜಾವ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದಾರೆ. “ಶೋಪಿಯಾನ್‌ನಲ್ಲಿ ನಡೆದ ಎನ್‌ಕೌಂಟರ್‌ ವೇಳೆ ಟಿಆರ್‌ಎಫ್‌ ಉಗ್ರನನ್ನು ಹತ್ಯೆ ಮಾಡಲಾಗಿದೆ. ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇನ್ನೂ ಹಲವು ಉಗ್ರರು ಅಡಗಿರುವ ಶಂಕೆ ಇರುವ ಕಾರಣ ಕಾರ್ಯಾಚರಣೆ ಮುಂದುವರಿದಿದೆ” ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಸೇನೆಗಳು 2021 ಫೆಬ್ರವರಿ 25ರಂದು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿವೆ. ಪಾಕಿಸ್ತಾನದ ಕಡೆಯಿಂದ ಹಲವಾರು ಕದನ ವಿರಾಮ ಉಲ್ಲಂಘನೆಗಳ ನಂತರ ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಎರಡೂ ರಾಷ್ಟ್ರಗಳು ಕದನ ವಿರಾಮವನ್ನು ಜಾರಿಗೊಳಿಸುವುದಾಗಿ ಘೋಷಿಸಿದವು. ಕದನ ವಿರಾಮವು ಎಲ್‌ಒಸಿ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ವಾಸಿಸುವ ಜನರಿಗೆ ಭಾರೀ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೆ, ಈಗ ಮತ್ತೆ ಪಾಕಿಸ್ತಾನ ತನ್ನ ಹಳೇ ಚಾಳಿಗೆ ಮರಳಿದೆ.

100ಕ್ಕೂ ಅಧಿಕ ಉಗ್ರರು ಸಕ್ರಿಯ

ಜಮ್ಮು-ಕಾಶ್ಮೀರದಲ್ಲಿ ಪ್ರಸಕ್ತ ವರ್ಷದಲ್ಲಿ ಇದುವರೆಗೆ 30ಕ್ಕೂ ಅಧಿಕ ಉಗ್ರರನ್ನು ಹತ್ಯೆಗೈದು, 204 ಉಗ್ರರನ್ನು ಬಂಧಿಸಿದರೂ ಇನ್ನೂ 111 ಉಗ್ರರು ಕಣಿವೆಯಲ್ಲಿ ಸಕ್ರಿಯರಾಗಿದ್ದಾರೆ ಎಂದು ತಿಳಿಸಿದ್ದಾರೆ. ಇವರಲ್ಲಿ 40 ಉಗ್ರರು ಸ್ಥಳೀಯರಾದರೆ, 71 ಉಗ್ರರು ವಿದೇಶದವರಾಗಿದ್ದಾರೆ. ಅಂದ ಹಾಗೆ 2022ರಲ್ಲಿ 137 ಉಗ್ರರು ಸಕ್ರಿಯರಾಗಿದ್ದರು. ಇದನ್ನು ಸೇನೆಯು 111ಕ್ಕೆ ಇಳಿಸಿದೆ. ಇವರೆಲ್ಲರನ್ನೂ ಎನ್‌ಕೌಂಟರ್‌ ಮಾಡುವುದು ಸೇನೆಯ ಗುರಿಯಾಗಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹತ್ಯೆ ಮಾಡಲಾದ ಉಗ್ರರ ಸಂಖ್ಯೆ ಕಡಿಮೆ ಇದೆ. ಕಳೆದ ವರ್ಷ ಕಣಿವೆಯಲ್ಲಿ 187 ಉಗ್ರರನ್ನು ಹತ್ಯೆ ಮಾಡಲಾಗಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version