Site icon Vistara News

BTS Army: ತಮಿಳುನಾಡಿನ ಬಾಲಕಿಯರಿಗೂ ದಕ್ಷಿಣ ಕೊರಿಯಾ ಬಿಟಿಎಸ್‌ ಗ್ರೂಪ್‌ಗೂ ಎತ್ತಣಿಂದೆತ್ತ ಸಂಬಂಧವಯ್ಯಾ?

bts

bts

ಚೆನ್ನೈ: ದಶಕದ ಹಿಂದೆ ದಕ್ಷಿಣ ಕೊರಿಯಾದಲ್ಲಿ ರೂಪುಗೊಂಡ ಬಿಟಿಎಸ್‌ ಬ್ಯಾಂಡ್‌ ಗ್ರೂಪ್‌ಗೆ (BTS Army) ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ವಯಸ್ಸಾದವರಿಂದ ಹಿಡಿದು ಮಕ್ಕಳವರೆಗೆ ಕೋಟ್ಯಂತರ ಮಂದಿ ಇವರ ತಾಳಕ್ಕೆ ಕುಣಿಯುತ್ತಾರೆ. ಇದಕ್ಕೆ ಭಾರತೀಯರೂ ಹೊರತಲ್ಲ. ಇದೀಗ ಬಿಟಿಎಸ್‌ ಗ್ರೂಪ್‌ ಅನ್ನು ಭೇಟಿಯಾಗಲೇಬೇಕು ಎಂದು ತಮಿಳುನಾಡಿನಿಂದ ದಕ್ಷಿಣ ಕೊರಿಯಾದ ಸಿಯೋಲ್‌ಗೆ ಹೊರಟ 13ರ ಹರೆಯದ ಮೂವರು ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿದೆ. ಕೈಯಲ್ಲಿ 14 ಸಾವಿರ ರೂ. ಇಟ್ಟುಕೊಂಡು ಇವರು ದಕ್ಷಿಣ ಕೊರಿಯಾಕ್ಕೆ ಹೊರಟಿದ್ದರು. ಈ ಕುರಿತಾದ ವಿವರ ಇಲ್ಲಿದೆ.

ಬಿಟಿಎಸ್‌ ಬ್ಯಾಂಡ್‌ನ ಕಟ್ಟಾ ಅಭಿಮಾನಿಗಳು

ತಮಿಳುನಾಡಿನ ಕರೂರ್‌ ಜಿಲ್ಲೆಯ ಈ ಮೂವರು ಬಾಲಕಿಯರು ಬಿಟಿಎಸ್‌ ಬ್ಯಾಂಡ್‌ನ ಕಟ್ಟಾ ಅಭಿಮಾನಿಗಳು. ಮನೆಯಲ್ಲಿ ಯಾರಿಗೂ ತಿಳಿಸದೆ ಹೊರಟಿದ್ದ ಇವರು ವೆಲ್ಲೂರ್‌ನ ಕಟಪಾಡಿ ಜಂಕ್ಷನ್ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. ಜನವರಿ 4ರಂದು ಈ ಬಾಲಕಿಯರು ಮನೆಯಿಂದ ಹೊರಟಿದ್ದರು. ವಿಶಾಖಪಟ್ಟಣಕ್ಕೆ ತೆರಳಿ ಅಲ್ಲಿಂದ ಹಡಗಿನ ಮೂಲಕ ಕೊರಿಯಾಕ್ಕೆ ತೆರಳುವುದು ಈ ಬಾಲಕಿಯರ ಯೋಜನೆಯಾಗಿತ್ತು. ಅದರಂತೆ ಅವರು ಈರೋಡ್‌ನಿಂದ ಚೆನ್ನೈಗೆ ತೆರಳುವ ರೈಲು ಹತ್ತಿದ್ದರು.‌ ಚಹಾ ಕುಡಿಯಲು ಕಟಪಾಡಿ ಸ್ಟೇಷನ್‌ನಲ್ಲಿ ಇಳಿದಾಗ ರೈಲು ಹೊರಟು ಹೋಗಿತ್ತು. ಬಳಿಕ ಇವರ ವರ್ತನೆಯ ಬಗ್ಗೆ ಅನುಮಾನಗೊಂಡ ರೈಲ್ವೆ ಪೊಲೀಸರು ವಿಚಾರಿಸಿದಾಗ ಬಾಲಕಿಯರು ಸತ್ಯ ಬಾಯಿ ಬಿಟ್ಟಿದ್ದಾರೆ. ಸದ್ಯ ಮೂವರನ್ನೂ ಕೌನ್ಸೆಲಿಂಗ್ ನಡೆಸಿ ಪಾಲಕರೊಂದಿಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಿಂಗಳ ಹಿಂದೆ ರೂಪುಗೊಂಡ ಯೋಜನೆ

ಕರೂರ್‌ ಜಿಲ್ಲೆಯ ಗ್ರಾಮೀಣ ಪ್ರದೇಶವೊಂದರ ಇಂಗ್ಲಿಷ್‌ ಮೀಡಿಯಂ ಶಾಲೆಯ ವಿದ್ಯಾರ್ಥಿನಿಗಳಾದ ಇವರು ಒಂದು ತಿಂಗಳ ಹಿಂದೆಯೇ ದಕ್ಷಿಣ ಕೊರಿಯಾಕ್ಕೆ ತೆರಳುವ ಪ್ಲ್ಯಾನ್‌ ರೂಪಿಸಿದ್ದರು. ʼʼಬಾಲಕಿಯರ ಪೈಕಿ ಓರ್ವಳ ತಂದೆ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನೋರ್ವಳ ತಂದೆ-ತಾಯಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಇವರಿಬ್ಬರ ತಾಯಂದಿರು ಕೃಷಿ ಕೆಲಸ ಮಾಡಿ ಮಕ್ಕಳನ್ನು ಸಾಕುತ್ತಿದ್ದಾರೆ. ಆದರೂ ಈ ಮಕ್ಕಳು ಸ್ಮಾರ್ಟ್‌ ಫೋನ್‌ ಬಳಸುತ್ತಿದ್ದರು. ಬಿಟಿಎಸ್‌ ಮೇಲಿನ ಅತಿಯಾದ ಅಭಿಮಾನದ ಜತೆಗೆ ಕೌಟಂಬಿಕ ಸಮಸ್ಯೆಗಳು ಅವರನ್ನು ಮನೆ ಬಿಡುವಂತೆ ಮಾಡಿತ್ತುʼʼ ಎಂದು ತಜ್ಞರು ತಿಳಿಸಿದ್ದಾರೆ.

ಅಚ್ಚರಿಯ ಸಂಗತಿ

ತಜ್ಞರು ಇನ್ನೊಂದು ಮುಖ್ಯ ಅಂಶವನ್ನು ಕಂಡುಕೊಂಡಿದ್ದಾರೆ. ಈ ಬಾಲಕಿಯರು ಮತ್ತು ಬ್ಯಾಂಡ್‌ ನಡುವೆ ಇಷ್ಟೊಂದು ಆತ್ಮೀಯ ಬಂಧ ಬೆಳೆಯಲಿರುವ ಕಾರಣವನ್ನೂ ಊಹಿಸಿದ್ದಾರೆ. ʼʼಈ ಬಿಟಿಎಸ್‌ ಬ್ಯಾಂಡ್‌ ಆರಂಭದಲ್ಲಿ ಆರ್ಥಿಕವಾಗಿ ಬಹಳಷ್ಟು ಸಮಸ್ಯೆ ಎದುರಿಸಿತ್ತು. ಅತೀ ಸವಾಲಿನ ಪರಿಸ್ಥಿತಿಗಳನ್ನು ಎದುರಿಸಿ ಬ್ಯಾಂಡ್‌ ಉನ್ನತ ಸ್ಥಾನಕ್ಕೆ ತಲುಪಿತ್ತು. ಈ ಬ್ಯಾಂಡ್‌ನ ಹಾಡುಗಳಲ್ಲಿನ ಸಾಹಿತ್ಯ ಹದಿಹರೆಯದವರ ಮನಸ್ಸಿನ ಭಾವನೆ, ತುಮುಲಗಳನ್ನು ಪ್ರತಿನಿಧಿಸುತ್ತವೆ. ಸಾಮಾಜಿಕ ಒತ್ತಡ, ಕನಸುಗಳನ್ನು ಬೆನ್ನಟ್ಟುವುದು ಮುಂತಾದ ವಿಷಯಗಳೇ ಈ ಬ್ಯಾಂಡ್‌ನ ಸಾಹಿತ್ಯದ ಮುಖ್ಯ ತಿರುಳು. ಇವು ಬಾಲಕಿಯರ ಮೇಲೆ ಗಾಢವಾದ ಪರಿಣಾಮ ಬೀರಿವೆʼʼ ಎಂದು ತಜ್ಞರು ವಿವರಿಸುತ್ತಾರೆ.

ʼʼಈ ಬಾಲಕಿಯರ ನೆರೆಮನೆಯ ಯುವಕನೊಬ್ಬ ಇವರಿಗೆ ಬ್ಯಾಂಡ್‌ ಬಗ್ಗೆ ತಿಳಿಸಿದ್ದ. ಅಲ್ಲದೆ ಈ ಬಾಲಕಿಯರು ಕೊರಿಯನ್‌ ಭಾಷೆಯನ್ನೂ ಕಲಿಯುತ್ತಿದ್ದಾರೆ. ಕೊರಿಯನ್‌ ಭಾಷೆಯ ಸಾಹಿತ್ಯವನ್ನು ಅರ್ಥೈಸಿಕೊಳ್ಳಲು ಅವರು ಗೂಗಲ್‌ ಟ್ರಾನ್ಸ್‌ಲೇಟ್‌ನ ಸಹಾಯ ಪಡೆಯುತ್ತಿದ್ದಾರೆ. ಬಿಟಿಎಸ್‌ ಬ್ಯಾಂಡ್‌ನ ಪ್ರತಿಯೊಬ್ಬ ಸದಸ್ಯನ ಹೆಸರು, ಅವರ ಹವ್ಯಾಸ, ಅವರ ನೆಚ್ಚಿನ ಉಡುಗೆ, ಆಹಾರ ಶೈಲಿ ಈ ವಿದ್ಯಾರ್ಥಿನಿಯರಿಗೆ ತಿಳಿದಿತ್ತು. ನಾಪತ್ತೆ ದೂರು ದಾಖಲಿಸಿದ ಬಳಿಕ ಪೊಲೀಸರು ಈ ಬಾಲಕಿಯರ ಬಗ್ಗೆ ಎಲ್ಲ ಕಡೆ ಮಾಹಿತಿ ನೀಡಿದ್ದರು. ಹೀಗಾಗಿ ಬಾಲಕಿಯರನ್ನು ರಕ್ಷಿಸಲು ಸಾಧ್ಯವಾಯಿತುʼʼ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Gyanvapi Case: ಜ್ಞಾನವಾಪಿ ಮಸೀದಿ ಸಮೀಕ್ಷೆ; ವರದಿ ಬಹಿರಂಗಪಡಿಸದಂತೆ ಕೋರ್ಟ್‌ ಆದೇಶ

Exit mobile version