Site icon Vistara News

Buddhadeb Bhattacharjee: ಸರಳತೆಯಿಂದಲೇ ರಾಜಕಾರಣಿಗಳಿಗೆ ಮಾದರಿಯಾಗಿದ್ದ ಬುದ್ಧದೇವ್ ಭಟ್ಟಾಚಾರ್ಯ

Buddhadeb Bhattacharjee

ಕೋಲ್ಕತ್ತಾ: ಎಡಪಂಥೀಯ ನಾಯಕ, ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ (Buddhadeb Bhattacharjee) ಇಂದು (ಆಗಸ್ಟ್‌ 8) ಬೆಳಿಗ್ಗೆ ತಮ್ಮ 80ನೇ ವಯಸ್ಸಿನಲ್ಲಿ ಕೋಲ್ಕತ್ತಾದ ಸ್ವಗೃಹದಲ್ಲಿ ನಿಧನರಾದರು. ಭಾರತೀಯ ರಾಜಕೀಯದಲ್ಲಿ ಪ್ರಮುಖ ನಾಯಕರಾಗಿದ್ದ ಅವರು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ ವಾದಿ) (Communist Party of India (Marxist)ದ ಪೊಲಿಟ್ ಬ್ಯೂರೋದ ಸದಸ್ಯರಾಗಿಯೂ ಗುರುತಿಸಿಕೊಂಡಿದ್ದರು. 2000ರಿಂದ 2011ರವರೆಗೆ ಅಂದರೆ 11 ವರ್ಷಗಳ ದೀರ್ಘ ಕಾಲ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರು.

1944ರ ಮಾರ್ಚ್ 1ರಂದು ಬುದ್ಧದೇವ್ ಭಟ್ಟಾಚಾರ್ಯ ಅವರು ಉತ್ತರ ಕೋಲ್ಕತ್ತಾದಲ್ಲಿ ಜನಿಸಿದರು. ಪಶ್ಚಿಮ ಬಂಗಾಳದ ಶೈಲೇಂದ್ರ ಸರ್ಕಾರ್ ವಿದ್ಯಾಲಯದಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ ಪ್ರೆಸಿಡೆನ್ಸಿಯಿಂದ ಬಂಗಾಳಿಯಲ್ಲಿ ಬಿಎ ಆನರ್ಸ್ ಪಡೆದರು. ಅವರಲ್ಲಿನ ಕ್ರಾಂತಿಕಾರಿ ಚಿಂತನೆಯು 1966ರಲ್ಲಿ ಸಿಪಿಎಂಗೆ ಸೇರುವಂತೆ ಮಾಡಿತು. ಅಲ್ಲಿಂದ ಬಳಿಕ ಅವರು ಪ್ರಬಲ ಎಡ ಪಂಥೀಯ ನಾಯಕರಾಗಿ ಬೆಳೆದರು.

ರಾಜಕೀಯ ಹಾದಿ

22ನೇ ವಯಸ್ಸಿನಲ್ಲಿ ಸಕ್ರಿಯ ರಾಜಕೀಯಕ್ಕೆ ಧುಮಿಕಿದ ಬುದ್ಧದೇವ್ ಭಟ್ಟಾಚಾರ್ಯ ಅವರು 1977ರಲ್ಲಿ ಜ್ಯೋತಿ ಬಸು ಅವರ ನಾಯಕತ್ವದಲ್ಲಿ ಸಿಪಿಎಂ ಅಧಿಕಾರಕ್ಕೆ ಬಂದಾಗ ಉತ್ತರ ಕೋಲ್ಕತ್ತಾದ ಕಾಸಿಪೋರ್‌ನಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1982ರಲ್ಲಿ ಮತ್ತೆ ಸ್ಪರ್ಧಿಸಿದ್ದ ಅವರು ಕಾಂಗ್ರೆಸ್‌ನ ಪ್ರಫುಲ್ಲ ಕಾಂತಿ ಘೋಷ್ ವಿರುದ್ಧ ಸೋತರೂ 1987ರಲ್ಲಿ ಜಾದವ್‌ಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದರು.

ಮುಖ್ಯಮಂತ್ರಿಯಾಗಿ…

ಬುದ್ಧದೇವ್ ಭಟ್ಟಾಚಾರ್ಯ ಅವರು 1987 ಮತ್ತು 1996ರ ನಡುವೆ ಮಾಹಿತಿ ಮತ್ತು ಸಂಸ್ಕೃತಿ ಸಚಿವರಾದರು. 1996ರಿಂದ 1999ರವರೆಗೆ ಗೃಹ ವ್ಯವಹಾರಗಳ ಸಚಿವರಾಗಿ ಗಮನ ಸೆಳೆದರು. ಆರೋಗ್ಯ ಕಾರಣಗಳಿಂದಾಗಿ 2000ರ ನವೆಂಬರ್ 6ರಂದು ಜ್ಯೋತಿಬಸು ಮುಖ್ಯಮಂತ್ರಿ ಪಟ್ಟದಿಂದ ಕೆಳಗೆ ಕೆಳಗೆ ಇಳಿದ ನಂತರ ಬುದ್ಧದೇವ್ ಭಟ್ಟಾಚಾರ್ಯ ಅಧಿಕಾರ ವಹಿಸಿಕೊಂಡರು. ಪಶ್ಚಿಮ ಬಂಗಾಳದಲ್ಲಿ ಎಡಪಕ್ಷದ 34 ವರ್ಷಗಳ ಆಡಳಿತದಲ್ಲಿ ಭಟ್ಟಾಚಾರ್ಯ ಅವರು ಅಧಿಕಾರದಲ್ಲಿದ್ದ ಎರಡನೇ ಮತ್ತು ಕೊನೆಯ ಸಿಪಿಎಂ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ.

ಸವಾಲುಗಳು

ಮುಖ್ಯಮಂತ್ರಿ ಪಟ್ಟಕ್ಕೇರಿದ ಭಟ್ಟಾಚಾರ್ಯ ಅವರ ಹಾದಿ ಸವಾಲುಗಳಿಂದ ಕೂಡಿತ್ತು. ಮುಖ್ಯಮಂತ್ರಿಯಾಗಿದ್ದ ಮೊದಲ ಅಧಿಕಾರಾವಧಿಯಲ್ಲಿ ಅವರು ಪಶ್ಚಿಮ ಬಂಗಾಳದಾದ್ಯಂತ ಕೈಗಾರಿಕಾ ಬೆಳವಣಿಗೆ ಮತ್ತು ಐಟಿ ಸೇವೆಗಳನ್ನು ಉತ್ತೇಜಿಸುವ ಹಲವು ಕ್ರಮಗಳನ್ನು ಪರಿಚಯಿಸಿದರು. ಅವರ ನಾಯಕತ್ವದಲ್ಲಿ ಪಶ್ಚಿಮ ಬಂಗಾಳದ ಐಟಿ ಉದ್ಯಮವು 2001 ಮತ್ತು 2005ರ ನಡುವೆ ಶೇ. 70ರಷ್ಟು ಬೆಳೆವಣಿಕೆ ಕಂಡಿದೆ ಎಂದು ಅಂದು ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ ಭಾರತದ ಅತ್ಯುತ್ತಮ ಮುಖ್ಯಮಂತ್ರಿ ಎಂದು ಶ್ಲಾಘಿಸಿದ್ದರು.

ಆದಾಗ್ಯೂ ಭಟ್ಟಾಚಾರ್ಯ ಅವರು ತಮ್ಮ ಎರಡನೇ ಅವಧಿಯಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಕೈಗಾರಿಕೀಕರಣಕ್ಕೆ ನೀಡಿದ ಒತ್ತು ಒತ್ತಡವನ್ನು ತಂದೊಡ್ಡಿತು. ನಂದಿಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಸಾಯನಿಕ ಕೇಂದ್ರದ ವಿರುದ್ಧ 2007ರಲ್ಲಿ ಸ್ಥಳೀಯ ನಿವಾಸಿಗಳು ತೀವ್ರ ಪ್ರತಿಭಟನೆ ನಡೆಸಿದರು. 2007ರ ಮಾರ್ಚ್ 14ರಂದು ಪೊಲೀಸ್ ಗುಂಡಿನ ದಾಳಿಯಲ್ಲಿ 14 ಮಂದಿ ಪ್ರತಿಭಟನಾಕಾರರು ಮೃತಪಟ್ಟಾಗ ಪರಿಸ್ಥಿತಿ ಇನ್ನಷ್ಟು ಉಲ್ಬಣಗೊಂಡಿತು.

ಬಳಿಕ ಭೂಸ್ವಾಧೀನ ಸಮಸ್ಯೆಗಳಿಂದಾಗಿ ಸಿಂಗೂರಿನಲ್ಲಿ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ನ್ಯಾನೋ ಕಾರು ಯೋಜನೆ ವಿಫಲವಾಯಿತು. ಈ ಎಲ್ಲ ಘಟನೆಗಳು ಪಶ್ಚಿಮ ಬಂಗಾಳದಲ್ಲಿ ಸಿಪಿಎಂ ಪ್ರಾಬಲ್ಯದ ಕುಸಿತಕ್ಕೆ ಕಾರಣವಾದವು. 2011ರ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ 184 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬಂದರೆ, ಸಿಪಿಎಂನ ಕೇವಲ 40 ಸ್ಥಾನಗಳಿಗೆ ಸೀಮಿತವಾಯಿತು. ಅಲ್ಲಿಂದ ಬಳಿಕ ಪಶ್ಚಿಮ ಬಂಗಾಳದಲ್ಲಿ ಎಡಪಕ್ಷದ ಜನಪ್ರಿಯತೆ ಪಾತಾಳಕ್ಕೆ ಇಳಿಯಲಾರಂಭಿಸಿತು.

ಸರಳ ಜೀವನ

ಈ ಸವಾಲುಗಳ ಹೊರತಾಗಿಯೂ ಅವರು ಅಭಿವೃದ್ಧಿ ಮತ್ತು ಸುಧಾರಣೆಯ ಪ್ರಯತ್ನಗಳ ಮೂಲಕ ಪಶ್ಚಿಮ ಬಂಗಾಳದ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಅವರ ಸರಳ ಜೀವನ ಶೈಲಿ ಇತರ ರಾಜಕಾರಣಿಗಳಿಗೆ ಮಾದರಿ ಎಂದೇ ಹೇಳಲಾಗುತ್ತಿದೆ. 2011ರಲ್ಲಿ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ಸ್ವಂತ ಮನೆ ಅಥವಾ ಕಾರನ್ನು ಹೊಂದಿಲ್ಲ ಎನ್ನುವ ವಿಚಾರ ಬಹಿರಂಗಗೊಂಡಿತ್ತು. ಅವರು ತಮ್ಮ ಪತ್ನಿ ಮತ್ತು ಮಗಳೊಂದಿಗೆ ಬ್ಯಾಲಿಗಂಜ್‌ನ ಪಾಮ್ ಅವೆನ್ಯೂದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಬ್ಯಾಂಕ್ ಖಾತೆಯಲ್ಲಿ ಇದ್ದುದು ಕೇವಲ 5,000 ರೂ.

ಇದನ್ನೂ ಓದಿ: Buddhadeb Bhattacharjee: ಪಶ್ಚಿಮ ಬಂಗಾಳದ ಮಾಜಿ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ವಿಧಿವಶ

ರಾಜಕೀಯದಲ್ಲಿ ಐದು ದಶಕಗಳ ಸಕ್ರಿಯ ಪಾಲ್ಗೊಳ್ಳುವಿಕೆ ಬಳಿಕ, ಭಟ್ಟಾಚಾರ್ಯ ಅವರು 2015ರಲ್ಲಿ ಪಕ್ಷದೊಳಗಿನ ಎಲ್ಲ ಪ್ರಮುಖ ಜವಾಬ್ದಾರಿಗಳಿಂದ ಕೆಳಗಿಳಿದರು. ಕೆಲವು ತಿಂಗಳಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಪತ್ನಿ ಮೀರಾ ಭಟ್ಟಾಚಾರ್ಯ ಮತ್ತು ಪುತ್ರಿ ಸುಚೇತನಾ ಭಟ್ಟಾಚಾರ್ಯ ಅವರನ್ನು ಅಗಲಿದ್ದಾರೆ.

Exit mobile version