Site icon Vistara News

Budget 2024: ಇದು ಮೋದಿ ಸರ್ಕಾರದ ಕೊನೆಯ ಬಜೆಟ್! ಪ್ರತಿಪಕ್ಷ ನಾಯಕರ ಪ್ರತಿಕ್ರಿಯೆ ಹೀಗಿದೆ…

Budget 2024 is the Modi governments last budget! How Opposition reacted?

ಮುಂಬೈ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಅವರು ಮಂಡಿಸಿರುವ ಮಧ್ಯಂತರ ಬಜೆಟ್‌ಗೆ (Budget 2024) ಆಡಳಿತ ಪಕ್ಷಗಳಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾದರೆ, ಪ್ರತಿಪಕ್ಷಗಳು ಎಂದಿನಂತೆ ಟೀಕಿಸಿವೆ. ಶಿವಸೇನಾ(ಯುಬಿಟಿ) ನಾಯಕ ಉದ್ಧವ್ ಠಾಕ್ರೆ (Uddhav Thackeray) ಅವರಂತೂ, ಮೋದಿ ಸರ್ಕಾರದ ಕೊನೆಯ ಬಜೆಟ್ ಎಂದು ಹೇಳುವ ಮೂಲಕ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಸರ್ಕಾರವು ತನ್ನ ಕೊನೆಯ ಬಜೆಟ್ ಅನ್ನು ಮಂಡಿಸಿದೆ. ವಿತ್ತ ಸಚಿವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಏಕೆಂದರೆ ಅವರು ಅದನ್ನು ತುಂಬಾ ಭಾರವಾದ ಹೃದಯದಿಂದ ಮಾಡಿದರು ಮತ್ತು ಕೊನೆಯ ಬಜೆಟ್ ಅನ್ನು ಮಂಡಿಸಿದರು ಎಂದು ಉದ್ಧವ್ ಠಾಕ್ರೆ ಅವರು ಕಿಚಾಯಿಸಿದ್ದಾರೆ.

18 ಲಕ್ಷ ಕೋಟಿ ರೂ. ವಿತ್ತೀಯ ಕೊರತೆ

ಇದು ಲೇಖಾನುದಾನವಾಗಿದ್ದು, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕಕ್ಕೆ ಮಾತ್ರ ಸೀಮಿತವಾಗಾಗಿದೆ. ಆದರೆ, ಹೆಚ್ಚು ಆತಂಕಕಾರಿ ಸಂಗತಿ ಎಂದರೆ, ಪ್ರಸಕ್ತ ವಿತ್ತೀಯ ಕೊರತೆ 18 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿರುವುದು. ಅಂದರೆ, ಸರ್ಕಾರವು ತನ್ನ ವೆಚ್ಚಗಳಿಗೆ ಸಾಲವನ್ನು ಮಾಡುತ್ತಿದೆ ಎಂದಾಯಿತು. ಈ ವಿತ್ತೀಯ ಕೊರತೆ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಹೆಚ್ಚಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.

ಶಶಿ ತರೂರ್ ಹೇಳಿದ್ದೇನು?

ಬಜೆಟ್‌ನಲ್ಲಿ ದಾಖಲಾದ ಅತ್ಯಂತ ಚಿಕ್ಕ ಭಾಷಣಗಳಲ್ಲಿ ಇದು ಒಂದಾಗಿದೆ. ಅದರಿಂದ ಹೆಚ್ಚು ಏನೂ ನಿರೀಕ್ಷೆ ಮಾಡುವಂತಿಲ್ಲ. ಎಂದಿನಂತೆ ಸಾಕಷ್ಟು ವಾಕ್ಚಾತುರ್ಯದ ಭಾಷೆ, ಅನುಷ್ಠಾನದ ಬಗ್ಗೆ ಬಹಳ ಕಡಿಮೆ ಗಮನ…. ಅವರು ವಿದೇಶಿ ಹೂಡಿಕೆಯ ಬಗ್ಗೆ ಮಾತನಾಡಲಿಲ್ಲ. ಆ ಹೂಡಿಕೆಯು ಗಣನೀಯವಾಗಿ ಕುಸಿದಿದೆ ಎಂದು ಒಪ್ಪಿಕೊಳ್ಳುತ್ತಾ, ‘ಆತ್ಮವಿಶ್ವಾಸ’ ಮತ್ತು ‘ಭರವಸೆ’ ಮುಂತಾದ ಅಸ್ಪಷ್ಟ ಭಾಷೆಯಲ್ಲಿ ವಿಷಯಗಳ ಬಗ್ಗೆ ಅವರು ಮಾತನಾಡಿದರು. ಸಂಪೂರ್ಣವಾಗಿ ಸಾಮಾನ್ಯತೆಗಳಲ್ಲಿ ಮತ್ತು ಸಾಕಷ್ಟು ವಸ್ತು ಅಥವಾ ಆರ್ಥಿಕತೆಯ ನಿರ್ದಿಷ್ಟ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಇಚ್ಛೆಯಿಲ್ಲದೆ ಇರುವ ವಿಷಯದಲ್ಲಿ ಇದು ಅತ್ಯಂತ ನಿರಾಶಾದಾಯಕ ಭಾಷಣವಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಟೀಕಿಸಿದ್ದಾರೆ.

ಈ ಬಜೆಟ್‌ನಿಂದಲೇ ಬಿಜೆಪಿಗೆ ಸೋಲು

ಈ ಬಜೆಟ್‌ನಲ್ಲಿ ತಮಗೆ ಏನಾದರೂ ಸಿಗಬಹುದು ಎಂದು ಯುವಕರು, ದಲಿತರು, ಹಿಂದುಳಿದ ವರ್ಗದ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅವರಿಗೆಲ್ಲ ನಿರಾಸೆಯಾಗಿದೆ. ಈ ಬಜೆಟ್‌ನಿಂದಾಗಿಯೇ 2024ರ ಎಲೆಕ್ಷನ್‌ನಲ್ಲಿ ಭಾರತೀಯ ಜನತಾ ಪಾರ್ಟಿಯು ಸೋಲು ಅನುಭವಿಸಲಿದೆ ಎಂದು ಆಮ್ ಆದ್ಮಿ ಪಾರ್ಟಿ ಸಂಸದ ಸಶೀಲ್ ಕುಮಾರ್ ರಿಂಕು ಅವರು ಹೇಳಿದ್ದಾರೆ.

ಇಂಡಿಯಾ ಕೂಟದಿಂದ ನೆಕ್ಸ್ಟ್ ಬಜೆಟ್

ಈ ಬಜೆಟ್‌ನಲ್ಲಿ ಏನೂ ಇಲ್ಲ. ಬಹುಶಃ ಅವರು ಪೂರ್ಣ ಪ್ರಮಾಣದಲ್ಲಿ ಬಜೆಟ್‌ ಮಂಡಿಸಲು ಕಾಯುತ್ತಿದ್ದಾರೆ ಅನ್ನಿಸುತ್ತೆ. ಆದರೆ, ಇಂಡಿಯಾ ಕೂಟವು ಮುಂದಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ. ಚುನಾವಣೆಯ ಬಳಿಕ ಅತ್ಯುತ್ತಮ ಬಜೆಟ್ ಮಂಡಿಸಲಿದೆ ಎಂದು ಡಿಎಂಕೆ ಸಂಸದ ಟಿ ಶಿವಾ ಹೇಳಿದ್ದಾರೆ.

ಚುನಾವಣಾ ಭಾಷಣ- ಸಚಿನ್ ಪೈಲಟ್

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣವು ಚುನಾವಣಾ ಭಾಷಣದಂತಿತ್ತು. ಅಧ್ಯಕ್ಷರ ಭಾಷಣವನ್ನೂ ರಾಜಕೀಯಕ್ಕೆ ಬಳಸಿಕೊಳ್ಳಲಾಯಿತು ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಆರೋಪಿಸಿದ್ದಾರೆ.

ಇದು ಟೊಳ್ಳು ಬಜೆಟ್- ಅಕಾಲಿ ದಳ

ಇದು ಟೊಳ್ಳು ಬಜೆಟ್. ಯುವಕರು, ಮಹಿಳೆಯರು, ರೈತರಿಗೆ ಏನೂ ಇಲ್ಲ… ಜುಲೈನಲ್ಲಿ ಬಜೆಟ್ ಮಂಡಿಸುತ್ತೇವೆ ಎಂದು ಹೇಳುವಾಗ ಅವರ ಸೊಕ್ಕು ಗೊತ್ತಾಯಿತು. ನೀವು ಯಾವುದೇ ಚುನಾವಣೆಯನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಶಿರೋಮಣಿ ಅಕಾಲಿದಳದ ಸಂಸದೆ ಹರ್‌ಸಿಮ್ರತ್ ಕೌರ್ ಬಾದಲ್ ಹೇಳಿದ್ದಾರೆ.

ಹೊಸ ನಿರೀಕ್ಷೆಗಳಿಲ್ಲ- ಕಾರ್ತಿ ಚಿದಂಬರಂ

ಹೊಸ ಸರ್ಕಾರ ರಚನೆಯಾಗುವವರೆಗೂ ಭಾರತ ಸರ್ಕಾರವು ದಿನನಿತ್ಯದ ವ್ಯವಹಾರಗಳನ್ನು ನಡೆಸಲು ಸಾಕಷ್ಟು ಹಣವನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಲು ಇದು ವಾಡಿಕೆಯ ಆಡಳಿತಾತ್ಮಕ ನಡೆಯಾಗಿದೆ. ಆದ್ದರಿಂದ, ನಾನು ಯಾವುದೇ ಪ್ರಮುಖ ರಚನಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಹೇಳಿದ್ದಾರೆ.

ಇದು ಜುಮ್ಲೇಬಾಜಿ ಬಜೆಟ್- ಪ್ರಿಯಾಂಕ್

ಈ ಬಜೆಟ್‌ನಿಂದ ನನಗೆ ಯಾವುದೇ ನಿರೀಕ್ಷೆಗಲಿಲ್ಲ. ನಾನು ಇದನ್ನು ಆಧಾರರಹಿತವಾಗಿ ಹೇಳುತ್ತಿಲ್ಲ. ಕಳೆದ 10 ವರ್ಷದಿಂದ ಕೇವಲ ಜುಮ್ಲೇಬಾಜಿ ಇದೆ. ಅದ್ಭುತ ಘೋಷಣೆಗಳಿವೆ, ಆಕರ್ಷಕ ನುಡಿಗಟ್ಟುಗಳು, ಆಕರ್ಷಕ ಜಾಹೀರಾತುಗಳನ್ನು ಮಾತ್ರ ನೋಡಬಹುದು ಎಂದು ಕರ್ನಾಟಕ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Budget 2024: ವಿನಾಶಕಾರಿ ಭಾರತ ಬಜೆಟ್‌; 190 ಲಕ್ಷ ಕೋಟಿ ರೂ. ಸಾಲ ಮಾಡಿದ ಮೋದಿ: ಸಿಎಂ ಸಿದ್ದರಾಮಯ್ಯ

Exit mobile version