ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ (Lok sabha Election 2024) ಹಿನ್ನೆಲೆಯಲ್ಲಿ ವಿತ್ತ ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Seetharaman) ಇಂದು ಮಧ್ಯಂತರ ಬಜೆಟ್ 2024 (Budget 2024) ಅನ್ನು ಮಂಡಿಸಿದ್ದಾರೆ. ಇದು ನಿರ್ಮಲಾ ಸೀತಾರಾಮನ್ ಅವರ ಸತತ ಆರನೇ ಬಜೆಟ್ ಮಂಡನೆ. ಅವರು ಮಾಜಿ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಬಜೆಟ್‌ನಲ್ಲಿ ಹಣಕಾಸು ಸಚಿವರು ಯಾವುದೇ ಜನಪ್ರಿಯ ಘೋಷಣೆಗಳನ್ನು ಮಾಡಿಲ್ಲ. ನೇರ ಮತ್ತು ಪರೋಕ್ಷ ತೆರಿಗೆಗಳ ತೆರಿಗೆ ದರಗಳನ್ನು ಬದಲಾಯಿಸಿಲ್ಲ.
ಮುಂದಿನ ಹಣಕಾಸು ವರ್ಷದಲ್ಲಿ ಸರ್ಕಾರವು 11.1 ಲಕ್ಷ ಕೋಟಿ ರೂಪಾಯಿಗಳನ್ನು ಬಂಡವಾಳ ವೆಚ್ಚವಾಗಿ ಖರ್ಚು ಮಾಡಲಿದೆ ಎಂದು ನಿರ್ಮಲಾ ಬಜೆಟ್‌ನಲ್ಲಿ (budget 2024) ಘೋಷಿಸಿದ್ದಾರೆ. ಇದು ಪ್ರಸಕ್ತ ಹಣಕಾಸು ವರ್ಷದ ಹಂಚಿಕೆಗಳಿಗೆ ಹೋಲಿಸಿದರೆ ಸುಮಾರು 11% ಹೆಚ್ಚು. ಸರ್ಕಾರವು ಮುಂದಿನ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಗುರಿಯನ್ನು GDPಯ 5.1 ಪ್ರತಿಶತಕ್ಕೆ ಇಳಿಸಿದೆ. ಮತ್ತು 2026ರಲ್ಲಿ ಅದನ್ನು 4.5 ಪ್ರತಿಶತಕ್ಕೆ ಇಳಿಸಲು ಯೋಜಿಸಿದೆ.
ನೇರ ಮತ್ತು ಪರೋಕ್ಷ ತೆರಿಗೆ
- ನೇರ ಮತ್ತು ಪರೋಕ್ಷ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಹಳೆಯ ದರಗಳನ್ನೇ ಉಳಿಸಿಕೊಳ್ಳಲಾಗಿದೆ.
- ತೆರಿಗೆ ವಿರಾಮವನ್ನು ಮಾರ್ಚ್ 31, 2025ರವರೆಗೆ ವಿಸ್ತರಿಸಲಾಗಿದೆ.
- ತೆರಿಗೆ ಪಾವತಿದಾರರ ಸೇವೆಯನ್ನು ಸುಧಾರಿಸುವತ್ತ ಗಮನಹರಿಸಲಾಗಿದೆ.
- ತೆರಿಗೆ ಸುಧಾರಣೆಗಳು ತೆರಿಗೆ ಮೂಲವನ್ನು ವಿಸ್ತರಿಸಿವೆ ಮತ್ತು ತೆರಿಗೆ ಸಂಗ್ರಹವನ್ನು ಹೆಚ್ಚಿಸಿವೆ.
- ಹಳೆಯ ವಿವಾದಿತ ನೇರ ತೆರಿಗೆ ಬಾಕಿಗಳ ನೋಟೀಸ್ ಹಿಂಪಡೆಯಲು ನಿರ್ಧಾರ. FY2009ರವರೆಗೆ 25,000 ರೂ.ವರೆಗಿನ ಮತ್ತು 2010-11ರಿಂದ 2014-15ರವರೆಗೆ 10,000 ರೂ.ವರೆಗೆ. ಇದು 1 ಕೋಟಿ ತೆರಿಗೆದಾರರಿಗೆ ಪ್ರಯೋಜನವಾಗಲಿದೆ.
- ಪಿಂಚಣಿ ನಿಧಿಗಳಿಗೆ ಕೆಲವು ತೆರಿಗೆ ಪ್ರಯೋಜನಗಳಿವೆ.
- ತೆರಿಗೆ ರಿಟರ್ನ್ಸ್ ಪ್ರಕ್ರಿಯೆಯ ಸಮಯ FY14ರಲ್ಲಿ 93 ದಿನ ಇದ್ದದ್ದು ಈಗ 10 ದಿನಗಳಿಗೆ ಕಡಿಮೆ ಮಾಡಲಾಗಿದೆ.
- ಜಿಎಸ್ಟಿಯ ತೆರಿಗೆ ಮೂಲವು ದುಪ್ಪಟ್ಟಾಗಿದೆ.
- 2014ರಿಂದ ತೆರಿಗೆ ಸಲ್ಲಿಸುವವರ ಸಂಖ್ಯೆ 2.4 ಪಟ್ಟು ಹೆಚ್ಚಾಗಿದೆ. ನೇರ ತೆರಿಗೆ ಸಂಗ್ರಹವು ಮೂರು ಪಟ್ಟು ಹೆಚ್ಚಾಗಿದೆ.
- 2024-25ರ ತೆರಿಗೆ ಸ್ವೀಕೃತಿಗಳು 26.02 ಲಕ್ಷ ಕೋಟಿ ರೂ.
ಪ್ರವಾಸೋದ್ಯಮ
- ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯಗಳಿಗೆ ಬಡ್ಡಿ ರಹಿತ ಸಾಲ
- ಲಕ್ಷದ್ವೀಪದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಣಕಾಸು
- ಉಡಾನ್ ಯೋಜನೆಯಡಿಯಲ್ಲಿ 517 ಹೊಸ ಮಾರ್ಗಗಳನ್ನು ಪ್ರಾರಂಭಿಸಲಾಗುವುದು.
- ಹಣಕಾಸಿನ ಪ್ರಕಟಣೆಗಳು
ಹೂಡಿಕೆ ವೆಚ್ಚ 11.11 ಲಕ್ಷ ಕೋಟಿ ರೂ
- GDPಯ 3.4 ಪ್ರತಿಶತ ಹೂಡಿಕೆ ವೆಚ್ಚ
- FY24 ವಿತ್ತೀಯ ಕೊರತೆ ಗುರಿಯನ್ನು GDPಯ 5.9 ಶೇಕಡಾದಿಂದ 5.8 ಶೇಕಡಾಕ್ಕೆ ಪರಿಷ್ಕರಿಸಲಾಗಿದೆ.
- FY25ಕ್ಕೆ 5.1% ವಿತ್ತೀಯ ಕೊರತೆ ಗುರಿ
- 2025-26ರಲ್ಲಿ ವಿತ್ತೀಯ ಕೊರತೆಯನ್ನು ಶೇಕಡಾ 4.5ಕ್ಕೆ ತಗ್ಗಿಸಲು ಚಿಂತನೆ.
- FY25ರ ಒಟ್ಟು ಮಾರುಕಟ್ಟೆ ಸಾಲದ ಗುರಿ ರೂ 14.13 ಲಕ್ಷ ಕೋಟಿ
- ನಿವ್ವಳ ಮಾರುಕಟ್ಟೆ ಸಾಲ 11.75 ಲಕ್ಷ ಕೋಟಿ ರೂ.
- FY24ರ ಪರಿಷ್ಕೃತ ವೆಚ್ಚ 44.90 ಲಕ್ಷ ಕೋಟಿ
- 2024/25ರಲ್ಲಿ ಒಟ್ಟು ಆದಾಯ ಸ್ವೀಕೃತಿಗಳು 30 ಲಕ್ಷ ಕೋಟಿ ರೂ.
- GDP ಬೆಳವಣಿಗೆ 10.5%ದಲ್ಲಿ ಕಂಡುಬಂದಿದೆ
- ಆಹಾರ ಸಬ್ಸಿಡಿ 2.12 ಲಕ್ಷ ಕೋಟಿ
- FY24 ಬಂಡವಾಳ ಹಿಂತೆಗೆತ ಗುರಿ 30,000 ಕೋಟಿಗೆ ಕಡಿತಗೊಳಿಸಲಾಗಿದೆ.
- FY25ರಲ್ಲಿ 50,000 ಕೋಟಿ ರೂ.ಗೆ ಬಂಡವಾಳ ಹಿಂತೆಗೆತದ ಗುರಿ.
ಕೃಷಿ ಕ್ಷೇತ್ರ
- ಸುಗ್ಗಿಯ ನಂತರದ ಚಟುವಟಿಕೆಯಲ್ಲಿ ಖಾಸಗಿ ಮತ್ತು ಸರ್ಕಾರಿ ಹೂಡಿಕೆಗೆ ಉತ್ತೇಜನ
- ಹೈನುಗಾರರಿಗೆ ಹೆಚ್ಚಿನ ಉತ್ತೇಜನ
- ಕಾಲು ಬಾಯಿ ರೋಗವನ್ನು ನಿಯಂತ್ರಿಸಲು ಹೆಚ್ಚಿನ ಪ್ರಯತ್ನ
- ಪಿಎಂ ಫಸಲ್ ಬಿಮಾ ಅಡಿಯಲ್ಲಿ 4 ಕೋಟಿ ರೈತರಿಗೆ ಬೆಳೆ ವಿಮೆ ನೀಡಲಾಗಿದೆ
- ಐದು ಇಂಟಿಗ್ರೇಟೆಡ್ ಆಕ್ವಾ ಪಾರ್ಕ್ ಸ್ಥಾಪಿಸಲಾಗುವುದು
- ಜಲಕೃಷಿಯನ್ನು ಉತ್ತೇಜಿಸಲು ಬ್ಲೂ ಎಕಾನಮಿ 2.0 ಅನ್ನು ಪ್ರಾರಂಭಿಸಲು ನಿರ್ಧಾರ
ಆರೋಗ್ಯ ರಕ್ಷಣೆ
- ಆಯುಷ್ಮಾನ್ ಭಾರತ್ ಅಡಿಯಲ್ಲಿ ಆರೋಗ್ಯ ಸೌಲಭ್ಯಗಳನ್ನು ಎಲ್ಲಾ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರಿಗೆ ವಿಸ್ತರಣೆ
- ಎಲ್ಲಾ ಜಿಲ್ಲೆಗಳಲ್ಲಿ ಆಸ್ಪತ್ರೆಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ
- 9-14 ವರ್ಷ ವಯಸ್ಸಿನ ಹುಡುಗಿಯರಿಗೆ ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ.
- ಸಕ್ಷಮ್ ಅಂಗನವಾಡಿ ಮತ್ತು ಪೋಶನ್ 2.0 ಕಾರ್ಯಕ್ರಮ ಸುಧಾರಣೆ ಮೂಲಕ ಪೌಷ್ಟಿಕಾಂಶ, ಬಾಲ್ಯದ ಆರೈಕೆ ವೃದ್ಧಿ
ವಸತಿ ವಲಯ
- ಮಧ್ಯಮ ವರ್ಗದವರಿಗೆ ಹೊಸ ವಸತಿ ಯೋಜನೆಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2 ಕೋಟಿ ಮನೆಗಳನ್ನು ನಿರ್ಮಿಸಲಾಗುವುದು
- ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) 3 ಕೋಟಿ ಗುರಿ ಸಾಧಿಸುವ ಸಮೀಪದಲ್ಲಿದೆ
- ಮುಂದಿನ 5 ವರ್ಷಗಳಲ್ಲಿ ಹೆಚ್ಚುವರಿ 2 ಕೋಟಿ ಮನೆ ಸ್ಥಾಪನೆ ಗುರಿ
- ನವೀಕರಿಸಬಹುದಾದ ಇಂಧನ
ಪವನ ಶಕ್ತಿಗಾಗಿ ಕಾರ್ಯಸಾಧ್ಯತೆಯ ಅಂತರ ನಿಧಿ
- ಕಲ್ಲಿದ್ದಲು ಅನಿಲೀಕರಣ ಮತ್ತು ದ್ರವೀಕರಣ ಸಾಮರ್ಥ್ಯವನ್ನು ಹೆಚ್ಚಿಸುವುದು
- CNG, PNG ಮತ್ತು ಜೈವಿಕ ಅನಿಲದ ಹಂತಹಂತದ ಕಡ್ಡಾಯ ಮಿಶ್ರಣ
- ಬಯೋಮಾಸ್ ಒಗ್ಗೂಡಿಸುವ ಯಂತ್ರೋಪಕರಣಗಳ ಖರೀದಿಗೆ ಹಣಕಾಸಿನ ನೆರವು
- ತಿಂಗಳಿಗೆ 1 ಕೋಟಿ ಕುಟುಂಬಗಳು 300 ಯೂನಿಟ್ಗಳವರೆಗೆ ಉಚಿತವಾಗಿ ವಿದ್ಯುತ್ ಪಡೆಯುವಂತೆ ಕ್ರಮ
ಭಾರತದ ಬೆಳವಣಿಗೆ
- ಮುಂದಿನ ಪೀಳಿಗೆಯ ಸುಧಾರಣೆಗಳನ್ನು ರಾಜ್ಯಗಳೊಂದಿಗೆ ಸಮಾಲೋಚಿಸಿ ತೆಗೆದುಕೊಳ್ಳಲಾಗುವುದು
- ಪೂರ್ವ ಪ್ರದೇಶಗಳನ್ನು ಭಾರತದ ಬೆಳವಣಿಗೆಯ ಚಾಲಕರನ್ನಾಗಿ ಮಾಡಲು ಚಿಂತನೆ
- ಹೊಸ ಸೌರಶಕ್ತಿ ನೀತಿಯ ಅಡಿಯಲ್ಲಿ 1 ಕೋಟಿಗೂ ಹೆಚ್ಚು ಮನೆಗಳಿಗೆ 300 ಯೂನಿಟ್ಗಳ ಉಚಿತ ವಿದ್ಯುತ್
- ಉನ್ನತ ಶಿಕ್ಷಣದಲ್ಲಿ ಕಳೆದ 10 ವರ್ಷಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಶೇ.28ಕ್ಕೆ ಏರಿಕೆಯಾಗಿದೆ
- ʼಲಖ್ಪತಿ ದೀದಿʼಯ ಗುರಿಯನ್ನು 2 ಕೋಟಿಯಿಂದ 3 ಕೋಟಿಗೆ ಹೆಚ್ಚಿಸುವುದು
- PM-SVANidhi ಅಡಿಯಲ್ಲಿ 78 ಲಕ್ಷ ಬೀದಿ ವ್ಯಾಪಾರಿಗಳಿಗೆ ಸಾಲದ ನೆರವು
- ಕಳೆದ 10 ವರ್ಷಗಳಲ್ಲಿ 22 ಕೋಟಿಗೂ ಹೆಚ್ಚು ಮುದ್ರಾ ಸಾಲಗಳನ್ನು ವಿತರಿಸಲಾಗಿದೆ
- ಜನ್ ಧನ್ ಖಾತೆಗಳು ಸರ್ಕಾರಕ್ಕೆ 2 ಲಕ್ಷ ಕೋಟಿ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡಿದೆ
- ತ್ರಿವಳಿ ತಲಾಖ್ ರದ್ದತಿ, ಸಂಸತ್ತಿನಲ್ಲಿ ಮೂರನೇ ಒಂದು ಭಾಗ ಮೀಸಲು ಇತ್ಯಾದಿಗಳು ಭಾರತದಲ್ಲಿ ಮಹಿಳೆಯರ ಘನತೆಯನ್ನು ಹೆಚ್ಚಿಸಿವೆ
- ಮಹಿಳಾ ಉದ್ಯಮಿಗಳಿಗೆ ರೂ 30 ಕೋಟಿ ಮುದ್ರಾ ಯೋಜನೆ ನೆರವು ನೀಡಲಾಗಿದೆ.
- ಸ್ಕಿಲ್ ಇಂಡಿಯಾ ಮಿಷನ್ 1.4 ಕೋಟಿ ಯುವಕರಿಗೆ ಉದ್ಯೋಗವನ್ನು ಪಡೆಯಲು ತರಬೇತಿ ನೀಡಿದೆ.
- ಏಷ್ಯನ್ ಗೇಮ್ಸ್ನಲ್ಲಿ ಅತ್ಯಧಿಕ ಪದಕಗಳ ಸಂಖ್ಯೆಯು ಹೆಚ್ಚಿನ ಆತ್ಮವಿಶ್ವಾಸ ತುಂಬಿದೆ.
- ಫಲಾನುಭವಿಗಳಿಗೆ 34 ಲಕ್ಷ ಕೋಟಿ ರೂಪಾಯಿಗಳ ನೇರ ವರ್ಗಾವಣೆ ದೊಡ್ಡ ಉಳಿತಾಯಕ್ಕೆ ಕಾರಣವಾಗಿದೆ.
- ಕಳೆದ 10 ವರ್ಷಗಳಲ್ಲಿ ಸರ್ಕಾರ 25 ಕೋಟಿ ಜನರನ್ನು ಬಡತನದಿಂದ ಮೇಲೆತ್ತಿದೆ
- ಬಡವರು, ಯುವಜನತೆ, ಮಹಿಳೆಯರು ಮತ್ತು ಅನ್ನದಾತರು ಹೆಚ್ಚಿನ ಆದ್ಯತೆ. ಅವರ ಕಲ್ಯಾಣ, ದೇಶದ ಕಲ್ಯಾಣ.
ತೆರಿಗೆ ಬಾಕಿ ಉಳಿಸಿಕೊಂಡವರಿಗೆ ವಿನಾಯಿತಿ
ಹಲವು ವರ್ಷಗಳಿಂದ ಬಾಕಿ ಉಳಿದುಕೊಂಡಿರುವ ವಿವಾದಿತ ನೇರ ತೆರಿಗೆ ಪ್ರಕರಣಗಳಿಗೆ (disputed direct tax demand) ಗಣನೀಯ ವಿನಾಯಿತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Finance Minister Nirmala Seetharaman) ಅವರು ಮಧ್ಯಂತರ ಬಜೆಟ್‌ನಲ್ಲಿ (Budget 2024) ಒದಗಿಸಿದ್ದಾರೆ.
ಸಂಪ್ರದಾಯಕ್ಕೆ ಅನುಗುಣವಾಗಿ ತೆರಿಗೆ ಸ್ಲ್ಯಾಬ್‌ಗಳಲ್ಲಿ ಸಚಿವರು ಯಾವುದೇ ಬದಲಾವಣೆಗಳನ್ನು ಮಾಡದಿದ್ದರೂ, ಬಾಕಿ ಉಳಿದಿರುವ ತೆರಿಗೆ ವಿವಾದಗಳಿಗೆ ಪರಿಹಾರವನ್ನು ನೀಡಿದರು. 2010ರವರೆಗೆ 25,000 ರೂ. ಮತ್ತು 2011- 2015ರ ಅವಧಿಯಲ್ಲಿ 10,000 ರೂ. ವರೆಗೆ ನೇರ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೀಡಲಾದ ನೋಟೀಸ್‌ಗಳನ್ನು ಸರ್ಕಾರ ಹಿಂಪಡೆಯಲಿದೆ ಎಂದು ಹಣಕಾಸು ಸಚಿವರು ತಮ್ಮ ಬಜೆಟ್- 2024 (Budget 2024) ಭಾಷಣದಲ್ಲಿ ಹೇಳಿದರು. ಸುಮಾರು 1 ಕೋಟಿ ತೆರಿಗೆ ಗ್ರಾಹಕರು ಈ ವಿನಾಯಿತಿಯ ಲಾಭ ಪಡೆಯಲಿದ್ದಾರೆ ಎಂದು ನಿರ್ಮಲಾ ತಿಳಿಸಿದರು. ಕಳೆದೆರಡು ವರ್ಷಗಳ ಹಿಂದೆ ಈ ವಿವಾದಿತ ತೆರಿಗೆ ಪ್ರಕರಣಗಳ ಇತ್ಯರ್ಥಕ್ಕಾಗಿ ಕೇಂದ್ರ ಸರ್ಕಾರ ʼವಿವಾದ್ ಸೆ ವಿಶ್ವಾಸ್ʼ ಎಂಬ ಉಪಕ್ರಮವನ್ನು ಜಾರಿಗೆ ತಂದಿತ್ತು. ಇದು ರಾಜಿಸಂಧಾನದ ಮೂಲಕ ತೆರಿಗೆ ವಿವಾದಗಳನ್ನು ಪರಿಹರಿಸುವ ಉಪಕ್ರಮ ಆಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, 2023ರ ಮಾರ್ಚ್ 31ರವರೆಗೆ ಬಾಕಿ ಉಳಿದಿರುವ ತೆರಿಗೆ ಮೇಲ್ಮನವಿಗಳ ಸಂಖ್ಯೆ 5.16 ಲಕ್ಷಕ್ಕೂ ಅಧಿಕವಾಗಿದೆ.
ಬಜೆಟ್‌ನಲ್ಲಿ ಬಾಲಕಿಯರಿಗೆ ಲಸಿಕೆ ಕೊಡುಗೆ
ಗರ್ಭಕಂಠ ಕ್ಯಾನ್ಸರ್ ತಡೆಗಾಗಿ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡಿದೆ. ಗರ್ಭಕಂಠ ಕ್ಯಾನ್ಸರ್ ತಡೆಗಾಗಿ ದೇಶಾದ್ಯಂತ 9-14 ವರ್ಷದೊಳಗಿನ ಬಾಲಕಿಯರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು (Cervical Cancer Vaccine) ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬಜೆಟ್ (Budget 2024) ಮಂಡಿಸುವ ವೇಳೆ ಘೋಷಣೆ ಮಾಡಿದ್ದಾರೆ.
ಈಗ ಗರ್ಭಕಂಠ ಕ್ಯಾನ್ಸರ್ ನಿರೋಧಕ ವ್ಯಾಕ್ಸಿನ್‌ಗೆ 3 ಸಾವಿರ ರೂ. ಇದೆ. ಇನ್ನುಮುಂದೆ ಶಾಲೆಗಳ ಮೂಲಕವೇ ಬಾಲಕಿಯರಿಗೆ ಉಚಿತವಾಗಿ ಕ್ಯಾನ್ಸರ್ ನಿರೋಧಕ ಲಸಿಕೆ ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರ ನೀಡುವ ಲಸಿಕೆಯು ಶೇ.70ರಷ್ಟು ಪರಿಣಾಮಕಾರಿಯಾಗಿದ್ದು, ಹೆಣ್ಣುಮಕ್ಕಳು ಗರ್ಭಕಂಠ ಕ್ಯಾನ್ಸರ್‌ಗೆ ತುತ್ತಾಗುವುದರಿಂದ ತಡೆಗಟ್ಟುತ್ತದೆ.
ಇವಿ ವಾಹನ ಕ್ಷೇತ್ರಕ್ಕೂ ಬಜೆಟ್‌ನಲ್ಲಿ ಒತ್ತು
ನಿರ್ಮಲಾ ಸೀತಾರಾಮನ್ ಅವರು ಘೋಷಿಸಿರುವ ಮಧ್ಯಂತರ ಬಜೆಟ್‌ನಲ್ಲಿ ಇವಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಇವಿ ಪರಿಸರ ವ್ಯವಸ್ಥೆಯನ್ನು ವಿಸ್ತರಣೆ ಮಾಡುವ ಜತೆಗೆ ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಸರ್ಕಾರವು ಎಲೆಕ್ಟ್ರಿಕ್ ವಾಹನ ಪರಿಸರ ವ್ಯವಸ್ಥೆಯನ್ನು ವಿಸ್ತರಿಸಲಿದೆ ಎಂದು ಹಣಕಾಸು ಸಚಿವರು ಗುರುವಾರ ಮಧ್ಯಂತರ ಬಜೆಟ್ ಘೋಷಿಸುವಾಗ ಹೇಳಿದ್ದಾರೆ. ಸಾರ್ವಜನಿಕ ಸಂಪರ್ಕ ಸಾರಿಗೆಯಲ್ಲಿ ಇ- ಬಸ್ಗಳ ಹೆಚ್ಚಳಕ್ಕೆ ಪ್ರೋತ್ಸಾಹಿಸಲಾಗುವುದು ಎಂದು ಸೀತಾರಾಮನ್ ಹೇಳಿದ್ದಾರೆ.
ಉತ್ಪಾದನೆ ಮತ್ತು ಚಾರ್ಜಿಂಗ್ ಮೂಲಸೌಕರ್ಯವನ್ನು ಬೆಂಬಲಿಸುವ ಮೂಲಕ ನಮ್ಮ ಸರ್ಕಾರ ಇ-ವಾಹನ ಪರಿಸರ ವ್ಯವಸ್ಥೆ ವಿಸ್ತರಿಸುತ್ತದೆ. ಪೇಮೆಂಟ್ ಸೆಕ್ಯುರಿಟಿ ಮೆಕಾನಿಸಮ್ ಮೂಲಕ ಸಾರ್ವಜನಿಕ ಸಾರಿಗೆ ಸಂಸ್ಥೆಗಳಿ ಇ-ಬಸ್ಗಳ ಹೆಚ್ಚಿನ ಅಳವಡಿಕೆಯನ್ನು ಪ್ರೋತ್ಸಾಹಿಸಲಾಗುವುದು” ಎಂದು ಸೀತಾರಾಮನ್ ಬಜೆಟ್ ಮಂಡನೆ ವೇಳೆ ಹೇಳಿದರು.
ರೈಲ್ವೆಗೆ 2.4 ಲಕ್ಷ ಕೋಟಿ ರೂ.!
ಮೆಟ್ರೋ ರೈಲು (Metro Rail) ಮತ್ತು ನಮೋ ಭಾರತ್ ರೈಲು (Namo Bharat Rail) ಸೇವೆಯನ್ನು ಇತರ ಎಲ್ಲ ನಗರಗಳಿಗೂ ವಿಸ್ತರಿಸುವ ಬಗ್ಗೆ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ (Niramla Sitharaman) ಅವರು ಘೋಷಣೆ ಮಾಡಿದ್ದಾರೆ. ಹಾಗೆಯೇ, ವಂದೇ ಭಾರತ್ ಹಂತಕ್ಕೆ 40 ಸಾವಿರ ಬೋಗಿಗಳನ್ನು ಮೇಲ್ದರ್ಜೆಗೇರಿಸುವ ಬಗ್ಗೆಯೂ ವಾಗ್ದಾನ ಮಾಡಲಾಗಿದೆ. ಇದರ ಜೊತೆಗೆ, ಮೂರು ಪ್ರಮುಖ ಆರ್ಥಿಕ ರೈಲ್ವೇ ಕಾರಿಡಾರ್ ಕಾರ್ಯಕ್ರಮಗಳನ್ನು ಘೋಷಣೆ ಮಾಡಲಾಗಿದೆ. ಅನುಷ್ಠಾನ-ಶಕ್ತಿ, ಬಂದರು ಸಂಪರ್ಕ, ಹೆಚ್ಚಿನ ಸಂಚಾರ ಸಾಂದ್ರತೆ ಮತ್ತು ಖನಿಜ ಮತ್ತು ಸಿಮೆಂಟ್ ಕಾರಿಡಾರ್ ಬಗ್ಗೆ ಪ್ರಕಟಿಸಲಾಗಿದೆ(budget 2024).
ದಾಖಲೆಯ ಮಟ್ಟದಲ್ಲಿ ಈ ಬಾರಿ ರೈಲ್ವೆಗೆ ಅನುದಾನವನ್ನು ಒದಗಿಸಲಾಗಿದೆ. 2024-25ನೇ ಸಾಲಿಗೆ ಕೇಂದ್ರ ಸರ್ಕಾರವು ರೈಲ್ವೆ ಇಲಾಖೆಗೆ 2.4 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಈ ವರ್ಷ ರೈಲ್ವೆ ಇಲಾಖೆಯಿಂದ ಸಾಕಷ್ಟು ನಿರೀಕ್ಷೆ ಕೂಡ ಇಟ್ಟುಕೊಳ್ಳಲಾಗಿದೆ.
ಈ ಸುದ್ದಿಯನ್ನೂ ಓದಿ: Budget 2024: ಡಿ.ಕೆ. ಸುರೇಶ್ ‘ಭಾರತ ವಿಭಜನೆ’ ಹೇಳಿಕೆ; ಸಿಎಂ ಸಿದ್ದರಾಮಯ್ಯ ವಿರೋಧ