Site icon Vistara News

Budget Session 2024: ನಾಳೆಯಿಂದ ಬಜೆಟ್‌ ಅಧಿವೇಶನ; ಕೇಂದ್ರದ ಅಜೆಂಡಾ ಏನು? ಪ್ರತಿಪಕ್ಷಗಳ ತಂತ್ರವೇನು?

Budget Session 2024

Budget Session 2024 begins today, how Opposition is preparing to outflank Central Government

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನವು (Budget Session 2024) ಸೋಮವಾರದಿಂದ (ಜುಲೈ 22) ಆರಂಭವಾಗಲಿದ್ದು, ಎನ್‌ಡಿಎ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ ಮಂಡಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಸಜ್ಜಾಗಿದ್ದಾರೆ. ಇನ್ನು, ಪ್ರತಿಪಕ್ಷಗಳೂ ಅಷ್ಟೇ, ದೇಶದ ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ಸಂಸತ್ತಿನಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿವೆ. ಹಾಗಾಗಿ, ಬಜೆಟ್‌ ಅಧಿವೇಶನವು ತೀವ್ರ ಕುತೂಹಲ ಕೆರಳಿಸಿದೆ.

ಜುಲೈ 22ರಿಂದ ಆರಂಭವಾಗುವ ಬಜೆಟ್‌ ಅಧಿವೇಶನವು ಆಗಸ್ಟ್‌ 12ರವರೆಗೆ ನಡೆಯಲಿದೆ. ಜುಲೈ 23ರಂದು ಬಜೆಟ್‌ ಮಂಡಿಸಲಾಗುತ್ತದೆ. ಅಧಿವೇಶನದಲ್ಲಿ 16 ಕಲಾಪಗಳು ನಡೆಯಲಿವೆ. ಸೋಮವಾರವೇ ಆರ್ಥಿಕ ಸಮೀಕ್ಷೆ ಪ್ರಕಟಿಸಲಾಗುತ್ತದೆ. ಅಧಿವೇಶನದ ವೇಳೆ ಕೇಂದ್ರ ಸರ್ಕಾರವು ವಿಪತ್ತು ನಿರ್ವಹಣಾ (ತಿದ್ದುಪಡಿ) ವಿಧೇಯಕ, ಭಾರತೀಯ ವಾಯುಯಾನ ವಿಧೇಯಕ ಸೇರಿ ಒಟ್ಟು ಆರು ವಿಧೇಯಕಗಳನ್ನು ಮಂಡಿಸಲಿದೆ ಎಂದು ತಿಳಿದುಬಂದಿದೆ.

India Bloc Meeting

ಪ್ರತಿಪಕ್ಷಗಳ ಮುಂದಿರುವ ವಿಷಯಗಳು ಯಾವವು?

ಸಾಲು ಸಾಲು ವಿಷಯಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಇಂಡಿಯಾ ಒಕ್ಕೂಟವು ಸಜ್ಜಾಗಿದೆ. ಅದರಲ್ಲೂ, ಮಣಿಪುರ ಹಿಂಸಾಚಾರ, ನೀಟ್‌ ಪ್ರಶ್ನೆಪತ್ರಿಕೆ ಪ್ರಕರಣ, ಬೆಲೆ ಏರಿಕೆ, ಯುಪಿಎಸ್‌ಸಿ ಅಕ್ರಮ ಸೇರಿ ಹಲವು ವಿಷಯಗಳನ್ನು ಪ್ರತಿಪಕ್ಷಗಳು ಚರ್ಚೆಗೆ ತರಲಿವೆ. ಸರ್ಕಾರಕ್ಕೆ ಚಾಟಿ ಬೀಸಲು ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರೂ ಸಜ್ಜಾಗಿದ್ದಾರೆ ಎನ್ನಲಾಗುತ್ತಿದೆ.

India Bloc Meeting

ಹೊಸ ದಾಖಲೆ ಬರೆಯಲಿದ್ದಾರೆ ನಿರ್ಮಲಾ

ನಿರ್ಮಲಾ ಸೀತಾರಾಮನ್‌ ಅವರು ಇದೇ ತಿಂಗಳು ಪೂರ್ಣಪ್ರಮಾಣದ ಬಜೆಟ್‌ ಮಂಡಿಸಿದರೆ ಹೊಸ ದಾಖಲೆ ಬರೆಯಲಿದ್ದಾರೆ. ಇದುವರೆಗೆ ನಿರ್ಮಲಾ ಸೀತಾರಾಮನ್‌ ಅವರು ಹಣಕಾಸು ಸಚಿವೆಯಾಗಿ ಐದು ಪೂರ್ಣ ಪ್ರಮಾಣದ ಹಾಗೂ ಒಂದು ಮಧ್ಯಂತರ ಬಜೆಟ್‌ ಮಂಡಿಸಿದ್ದಾರೆ. ಈಗ ಏಳನೇ ಬಾರಿಗೆ ಬಜೆಟ್‌ ಮಂಡಿಸಿದರೆ, ದೇಶದ ಇತಿಹಾಸದಲ್ಲಿಯೇ ಅತಿ ಹೆಚ್ಚು ಬಾರಿ ಬಜೆಟ್‌ ಮಂಡಿಸಿದ ಖ್ಯಾತಿಗೆ ಭಾಜನರಾಗಲಿದ್ದಾರೆ. ಮೊರಾರ್ಜಿ ದೇಸಾಯಿ ಅವರು ಆರು ಬಾರಿ ಬಜೆಟ್‌ ಮಂಡಿಸಿದ ದಾಖಲೆ ಮಾಡಿದ್ದಾರೆ. ಇದನ್ನು ನಿರ್ಮಲಾ ಸೀತಾರಾಮನ್‌ ಅವರು ಮುರಿಯಲಿದ್ದಾರೆ.

ನಿರ್ಮಲಾ ಸೀತಾರಾಮನ್‌ ಅವರು ಫೆಬ್ರವರಿ 1ರಂದು ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೊನೆಯ ಬಜೆಟ್‌ ಮಂಡಿಸಿದ್ದರು. ಇದು ಮಧ್ಯಂತರ ಬಜೆಟ್‌ ಆದ ಕಾರಣ ಮಹತ್ವದ ಘೋಷಣೆಗಳನ್ನು ಮಾಡಿರಲಿಲ್ಲ. ಆದರೆ, ನೂತನ ಸರ್ಕಾರ ರಚನೆಯಾಗಿದ್ದು, ಪೂರ್ಣ ಪ್ರಮಾಣದ ಬಜೆಟ್‌ ಮಂಡಿಸಲಾಗುತ್ತದೆ. ಉದ್ಯೋಗ ಸೃಷ್ಟಿ, ಬಡವರು ಹಾಗೂ ಮಧ್ಯಮ ವರ್ಗದವರಿಗೆ ಕೊಡುಗೆ, ತೆರಿಗೆ ಹೊರೆ ಇಳಿಸುವುದು ಸೇರಿ ಹಲವು ಅಂಶಗಳು ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನ ಪ್ರಮುಖ ಅಂಶಗಳಾಗಿವೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Union Budget 2024: ಸ್ಟಾಂಡರ್ಡ್‌ ಡಿಡಕ್ಷನ್‌, 80 ಸಿ ಮೊತ್ತ ಹೆಚ್ಚಳ; ಬಜೆಟ್‌ನಲ್ಲಿ ಏನೆಲ್ಲ ತೆರಿಗೆ ರಿಲೀಫ್?

Exit mobile version