ನವ ದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆಯ ಉಸ್ತುವಾರಿ ವಹಿಸಿದ್ದ ಎನ್‌ಎಚ್‌ಎಸ್‌ಆರ್‌ಸಿಎಲ್ ನಿರ್ವಹಣಾ ನಿರ್ದೇಶಕ ಸತೀಶ್ ಅಗ್ನಿಹೋತ್ರಿ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.
ಈ ವಿಚಾರವನ್ನು ಹಿರಿಯ ಅಧಿಕಾರಿಗಳು ತಿಳಿಸಿದ್ದು, ಎನ್‌ಎಚ್‌ಎಸ್‌ಆರ್‌ಸಿಎಲ್‌ನ ಯೋಜನಾ ನಿರ್ದೇಶಕ ರಾಜೇಂದ್ರ ಪ್ರಸಾದ್ ಅವರಿಗೆ ಮುಂದಿನ ಮೂರು ತಿಂಗಳ ಜವಾಬ್ದಾರಿ ನೀಡಲಾಗಿದೆ. NHSRCL ಹೈಸ್ಪೀಡ್ ರೈಲು ಯೋಜನೆಗಳ ಅನುಷ್ಠಾನವನ್ನು ನೋಡಿಕೊಳ್ಳುತ್ತದೆ.
ಅಗ್ನಿಹೋತ್ರಿ ಅವರು ರೈಲ್ವೆ ಅಧಿಕಾರಿಯಾಗಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಸರ್ಕಾರಿ ಹಣವನ್ನು ಖಾಸಗಿ ಕಂಪನಿಗೆ ಅಕ್ರಮವಾಗಿ ಒದಗಿಸಿದ್ದಾರೆ ಎಂದು ಹಿರಿಯ ರೈಲ್ವೇ ಅಧಿಕಾರಿಗಳು ಆರೋಪಿಸಿದ್ದಾರೆ. ಆದರೆ ಅಗ್ನಿಹೋತ್ರಿ ಈ ಆರೋಪಗಳನ್ನು ತಳ್ಳಿಹಾಕಿದ್ದು, ತಾನಾಗಲೀ ತಮ್ಮ ಮಗನಾಗಲೀ ಯಾವುದೇ ಅಕ್ರಮ ಎಸಗಿಲ್ಲ ಎಂದಿದ್ದಾರೆ.
ಅಗ್ನಿಹೋತ್ರಿ ಇದಕ್ಕೂ ಮುನ್ನ ರೈಲ್ ವಿಕಾಸ್ ನಿಗಮ್ ಲಿಮಿಟೆಡ್‌ಗೆ ಒಂಬತ್ತು ವರ್ಷಗಳ ಕಾಲ ಸಿಎಂಡಿ ಆಗಿದ್ದರು. ಎನ್‌ಎಚ್‌ಎಸ್‌ಆರ್‌ಸಿಎಲ್‌ನ ಎಂಡಿ ಆಗಿದ್ದಾಗ ಖಾಸಗಿ ಕಂಪನಿಯೊಂದಿಗೆ ನಡೆಸಿದ ವ್ಯವಹಾರಗಳಲ್ಲಿ ಅಕ್ರಮ ಎಸಗಿರುವ ಕುರಿತು ಆರೋಪಗಳನ್ನು ಪರಿಶೀಲಿಸುವಂತೆ ಜೂನ್ 2ರಂದು ಲೋಕಪಾಲ್ ನ್ಯಾಯಾಲಯವು ಸಿಬಿಐಗೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿಹೋತ್ರಿ ಅವರನ್ನು ವಜಾಗೊಳಿಸಲಾಗಿದೆ.
ಇದನ್ನೂ ಓದಿ: ಬುಲೆಟ್ ರೈಲು 2026ಕ್ಕೆ ಆರಂಭವಾಗುವ ವಿಶ್ವಾಸ ಇದೆ ಎಂದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್
ಲೋಕಪಾಲ್ ನ್ಯಾಯಾಲಯದ ನಿರ್ದೇಶನದ ಪ್ರಕಾರ, ಭ್ರಷ್ಟಾಚಾರ ತಡೆ ಕಾಯಿದೆ- 1988ರ ಅಡಿಯಲ್ಲಿ ಅಗ್ನಿಹೋತ್ರಿ ಅವರು ಯಾವುದೇ ಅಪರಾಧ ಎಸಗಿದ್ದಾರೆಯೇ ಎಂಬುದನ್ನು ಸಿಬಿಐ ಖಚಿತಪಡಿಸಿಕೊಳ್ಳಬೇಕು ಮತ್ತು ತನಿಖೆಯ ಫಲಿತಾಂಶಗಳನ್ನು ಆರು ತಿಂಗಳೊಳಗೆ ಲೋಕಪಾಲ್‌ಗೆ ಸಲ್ಲಿಸಬೇಕು. ಅಧಿಕಾರಿಗಳ ಪ್ರಕಾರ, ಅಗ್ನಿಹೋತ್ರಿ ಅವರು ನಿವೃತ್ತರಾಗಿ ಒಂದು ವರ್ಷವಾಗುವುದಕ್ಕೂ ಮುನ್ನವೇ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಲಾರಂಭಿಸಿದ್ದರು. ಸರ್ಕಾರಿ ನಿಯಮಾವಳಿ ಪ್ರಕಾರ ನಿವೃತ್ತ ಅಧಿಕಾರಿಗಳು ಕೇಂದ್ರದ ಅನುಮೋದನೆಯಿಲ್ಲದೆ ನಿವೃತ್ತಿಯ ಒಂದು ವರ್ಷದ ಒಳಗೆ ಇತರ ವಾಣಿಜ್ಯ ಉದ್ಯೋಗ ಸೇರುವುದು ಕಾನೂನಿಗೆ ವಿರುದ್ಧ.
ಮುಂಬೈ ಮತ್ತು ಅಹಮದಾಬಾದ್ ನಡುವಿನ ಸರ್ಕಾರದ ಮಹತ್ವಾಕಾಂಕ್ಷೆಯ ಬುಲೆಟ್ ರೈಲು ಯೋಜನೆಯ ಅನುಷ್ಠಾನ ಸಂಸ್ಥೆಯಾಗಿರುವ ಎನ್‌ಎಚ್‌ಎಸ್‌ಆರ್‌ಸಿಎಲ್ ಮುನ್ನಡೆಸುವ ಪ್ರತಿಷ್ಠಿತ ಸ್ಥಾನಕ್ಕೆ ಏರಿದ ಬಳಿಕ, ಅವರ ಬ್ಯಾಚ್‌ಮೇಟ್‌ಗಳಲ್ಲಿ ಒಬ್ಬರು ಅಗ್ನಿಹೋತ್ರಿ ವಿರುದ್ಧ ದೂರುಗಳನ್ನು ನೀಡಿದ್ದರು. 1982ರ ಬ್ಯಾಚ್‌ನ ಐಆರ್‌ಎಸ್‌ಇ ಅಧಿಕಾರಿ ಅಗ್ನಿಹೋತ್ರಿ ಜುಲೈ 2021ರಲ್ಲಿ ಎನ್‌ಎಚ್‌ಎಸ್‌ಆರ್‌ಸಿಎಲ್ ಸೇರಿದ್ದರು. ಮೆಗಾ ರೈಲು ಮೂಲಸೌಕರ್ಯ ಯೋಜನೆಗಳ ಅನುಷ್ಠಾನದಲ್ಲಿ ಅವರು 20 ವರ್ಷಗಳ ಅನುಭವ ಹೊಂದಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಅಧಿಕಾರ ಬದಲಾವಣೆ ಎಫೆಕ್ಟ್, ಬುಲೆಟ್ ರೈಲು ಯೋಜನೆಗೆ ಸ್ಪೀಡ್ ನಿರೀಕ್ಷೆ