Site icon Vistara News

Burj Khalifa: ಬುರ್ಜ್‌ ಖಲೀಫಾ ಮೇಲೆ ಭಾರತದ ತಿರಂಗಾ; ಮೋದಿ ಭೇಟಿ ಹಿನ್ನೆಲೆ ಗೌರವ

Burj Khalifa

Burj Khalifa lights up with 'Guest of Honor- Republic of India' ahead of PM Modi's address in Dubai

ಅಬುಧಾಬಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಯುಎಇ ಪ್ರವಾಸದಲ್ಲಿದ್ದು, ಸಾಲು ಸಾಲು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲೂ, ಅವರು ಬುಧವಾರ ವರ್ಲ್ಡ್‌ ಗವರ್ನ್‌ಮೆಂಟ್‌ ಶೃಂಗಸಭೆಯಲ್ಲಿ (World Government Summit) ಪಾಲ್ಗೊಳ್ಳಲಿದ್ದಾರೆ. ಯುಎಇ ಮೊದಲ ಹಿಂದು ದೇವಾಲಯವನ್ನೂ (UAE Hindu Temple) ಉದ್ಘಾಟಿಸಲಿದ್ದಾರೆ. ಇದಕ್ಕೂ ಮೊದಲು ಭಾರತಕ್ಕೆ ಗೌರವ ಸಲ್ಲಿಸುವ ದಿಸೆಯಲ್ಲಿ ಯುಎಇ ಸರ್ಕಾರವು ದುಬೈನಲ್ಲಿರುವ ಬುರ್ಜ್‌ ಖಲೀಫಾ ಕಟ್ಟಡದ (Burj Khalifa) ಮೇಲೆ ಭಾರತದ ತಿರಂಗಾವನ್ನು ವಿದ್ಯುತ್‌ ದೀಪಗಳ ಮೂಲಕ ಬೆಳಗಿಸಿದೆ.

ಬೆಳಕಿನ ಮೂಲಕ ತಿರಂಗಾದ ಚಿತ್ತಾರ ಮೂಡಿಸಿದ ಫೋಟೊವನ್ನು ದುಬೈ ಅರಸ ಶೇಖ್‌ ಹಮ್ದಾನ್‌ ಬಿನ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಕ್ತೌಮ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ. “ಪ್ರಸಕ್ತ ವರ್ಷದ ವರ್ಲ್ಡ್‌ ಗವರ್ನ್‌ಮೆಂಟ್ಸ್‌ ಶೃಂಗಸಭೆಗೆ ಭಾರತಕ್ಕೆ ಆತ್ಮೀಯ ಸ್ವಾಗತ. ಹಾಗೆಯೇ, ಭಾರತಕ್ಕೆ ವಿಶೇಷ ಗೌರವ ವಂದನೆ ಕೂಡ ಸಲ್ಲುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನೂ ನಾವು ಯುಎಇಗೆ ಆತ್ಮೀಯವಾಗಿ ಸ್ವಾಗತಿಸುತ್ತೇವೆ. ಭಾರತ ಹಾಗೂ ಯುಎಇ ನಡುವಿನ ಉತ್ತಮ ಬಾಂಧವ್ಯವು ಅಂತಾರಾಷ್ಟ್ರೀಯ ಸಹಕಾರಕ್ಕೆ ಮಾದರಿಯಾಗಿದೆ” ಎಂದು ದುಬೈ ಅರಸ ಪೋಸ್ಟ್‌ ಮಾಡಿದ್ದಾರೆ.

ಕನ್ನಡದಲ್ಲಿ ಮಾತನಾಡಿದ ಮೋದಿ

ಅಬುಧಾಬಿಯಲ್ಲಿ ನಡೆದ ‘ಅಹ್ಲಾನ್ ಮೋದಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ನಾಲ್ಕು ದಕ್ಷಿಣ ರಾಜ್ಯಗಳಲ್ಲಿ ಮಾತನಾಡಿದರು. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಮಾತನಾಡಿ ಖುಷಿ ಪಟ್ಟಿದ್ದಾರೆ. ಈ ಪ್ರದೇಶದಲ್ಲಿ ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತದ ಹಲವಾರು ಮಂದಿ ಇದ್ದಾರೆ. ಹೀಗಾಗಿ ಅವರಿಗೆ ಖುಷಿ ನೀಡುವ ಉದ್ದೇಶದಿಂದ ನಾಲ್ಕು ಭಾಷೆಗಳಲ್ಲಿ ಮಾತನಾಡಿದರು.

ನನ್ನ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಬಂದಿದ್ದೇನೆ. ನೀವು ಹುಟ್ಟಿದ ಮಣ್ಣಿನ ಪರಿಮಳವನ್ನು ತಂದು 140 ಕೋಟಿ ಜನರ ಸಂದೇಶವನ್ನು ತಂದಿದ್ದೇನೆ. ಭಾರತವು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ ಎಂಬ ಸಂದೇಶವಿದೆ. ನನ್ನ ಮೇಲಿನ ನಿಮ್ಮ ಪ್ರೀತಿ ಅಸಾಧಾರಣವಾದದ್ದು. ನೀವು ಇಂದು ನನ್ನನ್ನು ಇಲ್ಲಿ ನೋಡಲು ಸಮಯ ತೆಗೆದುಕೊಂಡಿದ್ದೀರಿ, ನಾನು ನಿಮಗೆ ಕೃತಜ್ಞನಾಗಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದರು.

ನಿಮ್ಮ ಉತ್ಸಾಹ, ನಿಮ್ಮ ಧ್ವನಿ ಅಬುಧಾಬಿಯಲ್ಲಿ ಪ್ರತಿಧ್ವನಿಸುತ್ತಿದೆ. ಇಲ್ಲಿಗೆ ಬಂದಿದ್ದಕ್ಕಾಗಿ ನಾನು ನಿಮಗೆ ಧನ್ಯವಾದಗಳು. ನಾನು ನನ್ನ ಸಹೋದರ ಶೇಖ್ ಮೊಹಮ್ಮದ್ ಬಿನ್ ಜಹೈದ್ (ಯುಎಇ ಅಧ್ಯಕ್ಷ) ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರಿಲ್ಲದೇ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version