Site icon Vistara News

Bus Fire Accident: ಟ್ರಕ್‌ಗೆ ಡಿಕ್ಕಿ ಹೊಡೆದು ಬೆಂಕಿಗೆ ತುತ್ತಾದ ಬಸ್‌, 12 ಮಂದಿ ಬಲಿ

MP bus fire accident

ಗುನಾ (MP): ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಡಂಪರ್‌ಗೆ ಡಿಕ್ಕಿ ಹೊಡೆದ ನಂತರ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ (Bus Fire Accident) ಕನಿಷ್ಠ 12 ಜನರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿಗೆ ತೀವ್ರ ಸುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗುನಾ- ಆರೋನ್ ರಸ್ತೆಯಲ್ಲಿ ಖಾಸಗಿ ಬಸ್ ಡಂಪರ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಗುನಾ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಬೆಂಕಿಯಲ್ಲಿ 12 ಬಸ್ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ಗುನಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ರಾತ್ರಿ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿತು. ಹತಭಾಗ್ಯರಿದ್ದ ಬಸ್ ಆರೋನ್‌ಗೆ ಹೋಗುತ್ತಿದ್ದಾಗ ಗುನಾ ಕಡೆ ಹೋಗುತ್ತಿದ್ದ ಡಂಪರ್‌ಗೆ ಡಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಸಮಯದಲ್ಲಿ ಬಸ್‌ನಲ್ಲಿ ಸುಮಾರು 30 ಪ್ರಯಾಣಿಕರಿದ್ದರು. ಅವರಲ್ಲಿ ನಾಲ್ವರು ಹೇಗೋ ಬಸ್‌ನಿಂದ ಪಾರಾಗಿ ಮನೆಗೆ ಹೋಗಿದ್ದಾರೆ. ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ತಲಾ ₹4 ಲಕ್ಷ ಮತ್ತು ಗಾಯಗೊಂಡವರಿಗೆ ₹50,000 ನೆರವು ಘೋಷಿಸಿದ್ದಾರೆ.

ಮುಖ್ಯಮಂತ್ರಿಗಳು ಅಪಘಾತದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಏತನ್ಮಧ್ಯೆ, ಎಕ್ಸ್‌ನಲ್ಲಿ ನೀಡಿದ ಸಂದೇಶದಲ್ಲಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಶ್ರೀ ಪ್ರಯಾಣಿಕರ ನಿಧನಕ್ಕೆ ಸಂತಾಪ ಸೂಚಿಸಿದ್ದು, “ಘಟನೆಯಿಂದ ತಂಬಾ ದುಃಖವಾಗಿದೆ” ಎಂದಿದ್ದಾರೆ. “ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ನಾನು ಜಿಲ್ಲಾಧಿಕಾರಿ ಮತ್ತು ಎಸ್ಪಿಯೊಂದಿಗೆ ಮಾತನಾಡಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು ಸೂಚಿಸಿದ್ದೇನೆ” ಎಂದಿದ್ದಾರೆ.

ಇದನ್ನೂ ಓದಿ: Road Accident : ಓಂಶಕ್ತಿಗೆ ತೆರಳುತ್ತಿದ್ದ ಬಸ್‌ ಪಲ್ಟಿ; ಮಾಲಾಧಾರಿಗಳು ಗಂಭೀರ

Exit mobile version