Site icon Vistara News

By poll results: ಸಂಗ್ರೂರ್‌ನ ಭಗವಂತ್‌ ಮಾನ್‌ ಕೋಟೆ ಛಿದ್ರವಾಗಿದ್ದೇಕೆ? ಇಲ್ಲಿದೆ 5 ಕಾರಣ

ಚಂಡೀಗಢ: ಪಂಜಾಬ್‌ನಲ್ಲಿ ಅದ್ಧೂರಿಯಾಗಿ ಅಧಿಕಾರಕ್ಕೇರಿದ ಆಮ್‌ ಆದ್ಮಿ ಪಾರ್ಟಿಗೆ ಇದು ಮೊದಲ ಸೋಲಿನ ರುಚಿ. ಅದರಲ್ಲೂ ಪಕ್ಷವನ್ನು ಗೆಲ್ಲಿಸಿಕೊಂಡು ಬಂದ ಶಕ್ತಿ ಎಂದು ಬಿಂಬಿತವಾಗಿದ್ದ ಹಾಲಿ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರ ಅತಿಯಾದ ಆತ್ಮ ವಿಶ್ವಾಸಕ್ಕೆ ಬಿದ್ದ ಕೊಡಲಿ ಪೆಟ್ಟು. ಯಾಕೆಂದರೆ ಸಂಗ್ರೂರ್‌ನ ಅವರ ಕೋಟೆಯೇ ಚಿಪ್ಪಾ ಚೂರಾಗಿದೆ. ಅವರು ಗೆದ್ದಿದ್ದ ಕ್ಷೇತ್ರ ಈಗ ಶಿರೋಮಣಿ ಅಕಾಲಿದಳ (ಅಮೃತಸರ) ಪಕ್ಷದ ಪಾಲಾಗಿದೆ.
ನಿಜ ಹೇಳಬೇಕು ಎಂದರೆ ಶಿರೋಮಣಿ ಅಕಾಲಿ ದಳ (ಅಮೃತಸರ) ಎನ್ನುವುದೇ ಒಂದು ಬೋರ್ಡಿಲ್ಲದ ಪಕ್ಷ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ ಎಂದು ನಂಬಲಾಗಿದ್ದ ಈ ಪಾರ್ಟಿಯಿಂದ ಕನಿಷ್ಠ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗಿರಲಿಲ್ಲ.
ಇನ್ನು ಇದೀಗ ಗೆದ್ದಿರುವ ಸಿಮ್ರನ್‌ಜಿತ್‌ ಸಿಂಗ್‌ ಮಾನ್‌ ಅವರು ಸೋಲಿನಲ್ಲೇ ಜೀವನ ಕಳೆದವರು! ಅವರೊಬ್ಬ ಮಾಜಿ ಐಪಿಎಸ್‌ ಆಫೀಸರ್‌. ೧೯೮೪ರಲ್ಲಿ ನಡೆದ ಆಪರೇಷನ್‌ ಬ್ಲೂಸ್ಟಾರ್‌ ಕಾರ್ಯಾಚರಣೆಯನ್ನು ವಿರೋಧಿಸಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದವರು. ಅಲ್ಲಿಂದ ಬಳಿಕ ಚುನಾವಣೆ ಬಳಿಕ ಚುನಾವಣೆಯಲ್ಲಿ ಕಣಕ್ಕಿಳಿಯುತ್ತಲೇ ಇದ್ದಾರೆ. ಅವರು ಗೆದ್ದಿದ್ದು ೧೯೯೯ರಲ್ಲಿ ಒಮ್ಮೆ ಮಾತ್ರ. ಅದೂ ಇದೇ ಸಂಗ್ರೂರ್‌ ಕ್ಷೇತ್ರದಲ್ಲಿ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲೂ ಅವರು ಕಣಕ್ಕೆ ಇಳಿದಿದ್ದರು. ಆಲಂಗಢ ಕ್ಷೇತ್ರದಲ್ಲಿ ಅವರು ಸೋತಿದ್ದರು. ಭಾನುವಾರದ ಮತ ಎಣಿಕೆಯಲ್ಲಿ ಅವರು ಗೆದ್ದಿದ್ದು ೫೮೦೦ ಮತಗಳಿಂದ.

ಸಿಮ್ರನ್‌ ಜಿತ್‌ ಸಿಂಗ್‌ ಮಾನ್

ಹಾಗಿದ್ದರೆ ಈ ಕ್ಷೇತ್ರವನ್ನು ಆಮ್‌ ಆದ್ಮಿ ಪಾರ್ಟಿ ಕಳೆದುಕೊಂಡಿದ್ದು ಹೇಗೆ? ಕಳೆದ ಎರಡು ಚುನಾವಣೆಗಳಲ್ಲಿ ಇಲ್ಲಿ ಭಗವಂತ್‌ ಮಾನ್‌ ದೊಡ್ಡ ಮತದ ಅಂತರದಿಂದ ಗೆದ್ದಿದ್ದರು. ಆಗ ಠೇವಣಿಯನ್ನೇ ಕಳೆದುಕೊಂಡಿದ್ದ ಸಿಮ್ರನ್‌ ಜಿತ್‌ ಸಿಂಗ್‌ ಮಾನ್‌ ಈಗ ಮಹನೀಯನಾಗಿ ಎದ್ದು ನಿಂತಿದ್ದು ಹೇಗೆ? ಇಲ್ಲಿದೆ ಐದು ಕಾರಣಗಳು.

೧. ಮತದಾರರ ಅಸಮಾಧಾನ
ಸಂಗ್ರೂರ್‌ನ ಮತದಾರರಿಗೆ ಆಮ್‌ ಆದ್ಮಿ ಪಾರ್ಟಿಯ ಮೇಲೆ ಎಷ್ಟೊಂದು ನಂಬಿಕೆ ಎಂದರೆ ಕಳೆದ ಬಾರಿ ಭಗವಂತ್‌ ಮಾನ್‌ನನ್ನು ಗೆಲ್ಲಿಸಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಂದರೆ ಕೇವಲ ನಾಲ್ಕು ತಿಂಗಳ ಹಿಂದೆ ಎಲ್ಲಾ ೯ ಕ್ಷೇತ್ರಗಳಲ್ಲಿ ಆಮ್‌ ಆದ್ಮಿ ಪಾರ್ಟಿಯೇ ವಿಜೃಂಭಿಸಿತ್ತು. ಇದು ಮಾಲ್ವ ವಲಯಕ್ಕೆ ಬರುತ್ತದೆ. ಇಲ್ಲಿ ೬೯ ಸ್ಥಾನಗಳ ಪೈಕಿ ಆಪ್‌ ಗೆದ್ದಿದ್ದು ೬೬ ಸ್ಥಾನ! ಆದರೆ ಈಗ ಪರಿಸ್ಥಿತಿಯೇ ಬದಲಾಗಿದೆ. ಮತದಾರರು ತಮ್ಮ ಹೊಸ ಶಾಸಕರ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂಬ ಮಾತಿದೆ. ಅದರಲ್ಲೂ ಮುಖ್ಯವಾಗಿ ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಮಾಲ್ವ ಭಾಗದಿಂದ ಒಬ್ಬರನ್ನೂ ಆರಿಸಿಲ್ಲ ಎನ್ನುವ ಸಿಟ್ಟಿದೆ.

ಸಿಧು ಮೂಸೆ ವಾಲಾ

೨. ಮೂಸೆ ವಾಲಾ ಮರ್ಡರ್‌ ಮತ್ತು ಭದ್ರತೆ
ಮೇ ೨೯ರಂದು ನಡೆದ ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಅವರ ಕೊಲೆ ಈ ಭಾಗವನ್ನು ತಲ್ಲಣಗೊಳಿಸಿತ್ತು. ಪಂಜಾಬ್‌ ಸರಕಾರ ಮೂಸೆ ವಾಲಾ ಅವರ ಭದ್ರತೆಯನ್ನು ಹಿಂದೆಗೆದುಕೊಂಡಿದ್ದೇ ಅವರ ಹತ್ಯೆಗೆ ಕಾರಣವಾಯಿತು ಎನ್ನುವುದು ಅಭಿಮಾನಿಗಳ ಆರೋಪ. ಜನಾಕ್ರೋಶದ ಬಳಿಕವಷ್ಟೇ ಗಣ್ಯರ ಭಧ್ರತೆಯನ್ನು ಮರುಸ್ಥಾಪಿಸಿತ್ತು. ಮೂಸೆ ವಾಲಾ ಪಕ್ಕದ ಮಾನ್ಸಾ ಕ್ಷೇತ್ರದವರು. ಆದರೆ, ಅಭಿಮಾನಿಗಳು ಸಂಗ್ರೂರ್‌ನಲ್ಲೂ ದೊಡ್ಡ ಮಟ್ಟದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಮೂಸೆ ವಾಲಾ ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸಿದ್ದರೂ ಸಂಗ್ರೂರ್‌ನಲ್ಲಿ ಬೆಂಬಲ ಸಿಮ್ರನ್‌ಜಿತ್‌ ಸಿಂಗ್‌ಗೇ ಇತ್ತಂತೆ.

೩. ರೈತರ ಪ್ರತಿಭಟನೆಯ ಕಾವು
೨೦೧೫ರಲ್ಲಿ ಅಕಾಲಿದಳ ಬಿಜೆಪಿ ಸರಕಾರವಿದ್ದಾಗ ಗುರುದ್ವಾರಕ್ಕೆ ನಡೆದ ಅಪಚಾರದ ವಿರುದ್ಧ ಧ್ವನಿ ಎತ್ತಿದ ಸಿಮ್ರನ್‌ ಜಿತ್‌ ಸಿಂಗ್‌ ಮಾನ್‌ ದೊಡ್ಡ ಸುದ್ದಿಯಾಗಿದ್ದರು. ಬಳಿಕ ಅವರನ್ನು ಮೇಲೆತ್ತಿದ್ದು ಪಂಜಾಬಿನ ರೈತರ ಹೋರಾಟ. ಕೃಷಿ ಕಾಯಿದೆಗಳ ವಿರುದ್ಧ ಪಂಜಾಬಿ ರೈತರ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು. ಈ ಬಾರಿ ಅವರು ಕಾಂಗ್ರೆಸ್‌, ಬಿಜೆಪಿ, ಆಪ್‌ ಹೊರತಾದ ಜಾತ್ಯತೀತ ಶಕ್ತಿಗಳ ಸರ್ವ ಬೆಂಬಲವನ್ನು ಪಡೆದಂತೆ ಕಾಣುತ್ತಿದೆ.

೪. ಆಪ್‌ ಅಭ್ಯರ್ಥಿ ದುರ್ಬಲ
ಈ ಬಾರಿ ಆಪ್‌ನಿಂದ ಕಣಕ್ಕೆ ಇಳಿದದ್ದು ಗುರ್ಮೇಲ್ ಸಿಂಗ್‌. ಇವರು ಘರ್‌ಚಾಂವ್‌ ಎಂಬ ಹಳ್ಳಿಯ ಸರಪಂಚರು ಅಷ್ಟೆ. ಹೆಚ್ಚಿನ ಮಂದಿಗೆ ಅವರ ಪರಿಚಯವೇ ಇರಲಿಲ್ಲ. ಗುರ್ಮೇಲ್‌ ಸಿಂಗ್‌ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಭಗವಂತ್‌ ಸಿಂಗ್‌ ಮಾನ್‌ ಅವರ ಕಚೇರಿಯನ್ನು ನಿರ್ವಹಿಸುತ್ತಿದ್ದರು. ಆದರೆ, ತನ್ನನ್ನು ಬೆಂಬಲಿಸಿದವರು ಇವರನ್ನೂ ಬೆಂಬಲಿಸುತ್ತಾರೆ ಎನ್ನುವ ಅತಿ ಆತ್ಮವಿಶ್ವಾಸ ಮಾನ್‌ಗಿತ್ತು. ಅದರಲ್ಲೂ ಭಗವಂತ್‌ ಮಾನ್‌ ಕೂಡಾ ಇಲ್ಲಿ ಸರಿಯಾಗಿ ಪ್ರಚಾರ ಮಾಡಿದ್ದು ಕೊನೆಯ ಎರಡು ದಿನ ಮಾತ್ರ.

೫. ಪಂಚಕೋನ ಸ್ಪರ್ಧೆ
ಸಂಗ್ರೂರ್‌ನಲ್ಲಿ ಇದೇ ಮೊದಲ ಬಾರಿಗೆ ಪಂಚಕೋನ ಸ್ಪರ್ಧೆ ನಡೆದಿದೆ. ಇಷ್ಟೊಂದು ಜನ ಯಾಕೆ ಸ್ಪರ್ಧೆ ಮಾಡಿದ್ದರು ಎಂದರೆ ಆಮ್‌ ಆದ್ಮಿ ಪಾರ್ಟಿಯ ವೋಟನ್ನು ಒಡೆಯಬೇಕು ಎನ್ನುವುದಕ್ಕೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಧೂರಿ ಕ್ಷೇತ್ರದಲ್ಲಿ ಮಾನ್‌ ವಿರುದ್ಧ ಸೋತಿದ್ದ ದಲ್ವೀರ್‌ ಗೋಲ್ಡಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಬಿಜೆಪಿ ಶಕ್ತಿಶಾಲಿ ಉದ್ಯಮಿ ಕೇವಲ್‌ ಧಿಲ್ಲೋನ್‌ ಅವರಿಗೆ ಟಿಕೆಟ್‌ ನೀಡಿತ್ತು. ಅಕಾಲಿದಳದಿಂದ ಸ್ಪರ್ಧಿಸಿದ್ದು ಕಮಲ್‌ ದೀಪ್‌ ಕೌರ್‌. ಇವರು ಮಾಜಿ ಮುಖ್ಯಮಂತ್ರಿ ಬಿಯಾಂತ್‌ ಸಿಂಗ್‌ ಅವರನ್ನು ಕೊಲೆ ಮಾಡಿದ ಬಲವಂತ್‌ ಸಿಂಗ್‌ ರಾಜೌನಾ ಅವರ ಸೋದರಿ.

ಇದನ್ನೂ ಓದಿ| ಆಪ್‌ಗೆ ಮುಖಭಂಗ; ಭಗವಂತ್‌ ಮಾನ್‌ ಸಂಸದರಾಗಿದ್ದ ಕ್ಷೇತ್ರದಲ್ಲಿ ಎಸ್‌ಎಡಿ-ಎ ಅಭ್ಯರ್ಥಿಗೆ ಗೆಲುವು

Exit mobile version