Site icon Vistara News

By election results: ಅಖಿಲೇಶ್‌ ಯಾದವ್‌ ಅತಿ ಆತ್ಮವಿಶ್ವಾಸವನ್ನು ಕುಟ್ಟಿ ಪುಡಿ ಮಾಡಿದ ಯೋಗಿ ಬುಲ್ಡೋಜರ್‌!

ನವ ದೆಹಲಿ: ಮೂರು ಲೋಕಸಭಾ ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ (By election) ಉತ್ತರ ಪ್ರದೇಶದ ರಾಮ್‌ ಪುರ ಮತ್ತು ಅಜಮ್‌ ಗಢ ಎರಡೂ ಕ್ಷೇತ್ರಗಳನ್ನು ಬಿಜೆಪಿ ಸಮಾಜವಾದಿ ಪಕ್ಷದ ಕೈಯಿಂದ ಕಿತ್ತುಕೊಂಡಿದೆ. ಪಂಜಾಬ್‌ನ ಸಂಗ್ರೂರ್‌ನಲ್ಲಿ ಶಿರೋಮಣಿ ಅಕಾಲಿ ದಳದ ವಿಭಜಿತ ಬಣ ಆಮ್‌ ಆದ್ಮಿ ಪಾರ್ಟಿಯನ್ನು ನೆಲಕಚ್ಚುವಂತೆ ಮಾಡಿದೆ. ಈ ಫಲಿತಾಂಶ ಸಮಾಜವಾದಿ ಪಕ್ಷ ಮತ್ತು ಆಮ್‌ ಆದ್ಮಿ ಪಾರ್ಟಿಯ ಅತಿಯಾದ ಆತ್ಮವಿಶ್ವಾಸಕ್ಕೆ ಘಾತಕ ಹೊಡೆತವನ್ನು ನೀಡಿದರೆ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿದೆ. ಆಮ್‌ ಆದ್ಮಿ ಪಾರ್ಟಿಗಂತೂ ಇದೂ ಮನೆಯಲ್ಲೇ ನಡೆದ ಮಂಗಳಾರತಿ. ಯಾಕೆಂದರೆ, ಸ್ವತಃ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರೇ ಗೆದ್ದ ಕ್ಷೇತ್ರವನ್ನು ಅದು ಕಳೆದುಕೊಂಡಿದೆ!

ಹೇಳಿ ಕೇಳಿ, ಅಜಂ ಗಢ ಮತ್ತು ರಾಮ್‌ಪುರ ಸಮಾಜವಾದಿ ಪಕ್ಷದ ಭದ್ರ ಕೋಟೆ. ಅಲ್ಲಿ ಎಸ್‌ಪಿಯಿಂದ ಯಾರು ನಿಂತರೂ ಗೆಲ್ಲಬಹುದು ಎನ್ನುವಷ್ಟು ಆತ್ಮವಿಶ್ವಾಸ ಅಖಿಲೇಶ್‌ ಯಾದವ್‌ ಟೀಮ್‌ಗೆ ಇದೆ. ಹಾಗಿರುವಾಗಲೂ ಈ ಬಾರಿ ಸೋತಿದೆ ಎಂದರೆ ಒಂದು, ಅದು ವಿಪರೀತ ಆತ್ಮವಿಶ್ವಾಸಕ್ಕೆ ಬಿದ್ದ ಪೆಟ್ಟು ಎನ್ನಬಹುದು. ಅಥವಾ ಉತ್ತರ ಪ್ರದೇಶದ ಯೋಗಿ ಸರಕಾರದ ಬುಲ್ಡೋಜರ್‌ ಮತ್ತಿತರ ಕಾರ್ಯಾಚರಣೆಗೆ ಸಿಗುತ್ತಿರುವ ಸಾರ್ವತ್ರಿಕ ಮಾನ್ಯತೆಯ ಒಂದು ನಿದರ್ಶನ ಎಂದೂ ವ್ಯಾಖ್ಯಾನಿಸಬಹುದು.

ಏನಾಗಿತ್ತು ಅಜಂಗಢ, ರಾಮ್‌ ಪುರದಲ್ಲಿ?
ಅಖಿಲೇಶ್‌ ಯಾದವ್‌ಗೆ ಈ ಕ್ಷೇತ್ರಗಳ ಬಗ್ಗೆ ಎಷ್ಟೊಂದು ಧೈರ್ಯವಿತ್ತೆಂದರೆ ಅವರು ಎರಡೂ ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋಗಲೇ ಇಲ್ಲ! ಆದರೆ, ಅದೇ ಹೊತ್ತಿಗೆ ಸಿಎಂ ಯೋಗಿ ಆದಿತ್ಯನಾಥ್‌ ಅವರು ತಮ್ಮೆಲ್ಲ ಕೆಲಸದ ಒತ್ತಡಗಳ ನಡುವೆಯೂ ಅಗ್ರೆಸಿವ್‌ ಆಗಿ ಪ್ರಚಾರ ನಡೆಸಿದ್ದರು. ಅಖಿಲೇಶ್‌ ಯಾದವ್‌ ಕಳೆದ ಚುನಾವಣೆಯಲ್ಲಿ ಎರಡು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಒಂದು ಅಜಮ್‌ಗಢ ಇನ್ನೊಂದು ಕರ್ಹಾಲ್‌. ಎರಡರಲ್ಲೂ ಗೆದ್ದಿದ್ದರು. ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿಯನ್ನು ಮಣಿಸಿ ಹಾಕಬೇಕೆಂದು ಕರ್ಹಾಲ್‌ ಅನ್ನು ಉಳಿಸಿಕೊಂಡು ಯಾದವ ಮತಗಳೇ ಹೆಚ್ಚಾಗಿರುವ ಅಜಮ್‌ ಗಢವನ್ನು ತ್ಯಜಿಸಿದ್ದರು. ಅಲ್ಲಿ ಅವರು ಟಿಕೆಟ್‌ ನೀಡಿದ್ದು ತನ್ನ ಸಹೋದರ ಸಂಬಂಧಿಯೇ ಆಗಿರುವ ಧರ್ಮೇಂದ್ರ ಯಾದವ್‌ಗೆ. ಆದರೆ, ಅತಿ ಆತ್ಮವಿಶ್ವಾಸದ ಮೂಟೆಯಾದ ಅಖಿಲೇಶ್‌ ಅತ್ತ ತಿರುಗಿಯೂ ಮಲಗಿಲ್ಲ. ಗೆದ್ಕೊಂಡು ಬರ್ತಾರೆ ಬಿಡು ಅನ್ನುವ ಹಾಗೆ ವರ್ತಿಸಿದ್ದರು.

ರಾಮ್‌ಪುರ ಕ್ಷೇತ್ರದಲ್ಲಿ ಸಂಸದರಾಗಿದ್ದದ್ದು ಅಜಂ ಖಾನ್‌. ಅವರು ಶಾಸಕರಾಗಿಯೂ ಆಯ್ಕೆಯಾಗಿದ್ದಾರೆ. ಅಜಂ ಖಾನ್‌ ತುಂಬ ಸ್ಟ್ರಾಂಗ್‌ ಮನುಷ್ಯ. ಹಿಂದೆ ಜೈಲಿನಲ್ಲಿದ್ದಾಗಲೂ ಗೆದ್ದಿದ್ದರು. ಈಗಲೂ ಅವರು ಜೈಲಿನಲ್ಲೇ ಇದ್ದಾರೆ! ಅವರು ಈ ಬಾರಿ ತಾವು ತೆರವು ಮಾಡಿದ ಕ್ಷೇತ್ರದಿಂದ ತಮ್ಮ ಕುಟುಂಬಿಕರಿಗೆ ಟಿಕೆಟ್‌ ನೀಡುವಂತೆ ಕೇಳಲಿಲ್ಲ. ಹೀಗಾಗಿ ಬೇರೆಯವರಿಗೆ ಟಿಕೆಟ್‌ ಸಿಕ್ಕಿತು. ಒಂದು ಕಡೆ ಅಜಂ ಖಾನ್‌ ಅನುಪಸ್ಥಿತಿ, ಇನ್ನೊಂದು ಕಡೆ ಅಜಂ ಖಾನ್‌ ಕುಟುಂಬದರು ಯಾವುದೇ ಆಸಕ್ತಿ ತೋರಿಸದೆ ಇದ್ದುದು ಸೋಲಿಗೆ ಸ್ವಲ್ಪ ಪ್ರಮಾಣದ ಯೋಗದಾನ ನೀಡಿರಬಹುದು. ಆದರೆ, ಎಲ್ಲಕ್ಕಿಂತ ಮುಖ್ಯವಾಗಿದ್ದು ಅಖಿಲೇಶ್‌ ಯಾದವ್‌ ಉದಾಸೀನ! ಇಲ್ಲಿ ಕೂಡಾ ಅವರು ಗಂಭೀರವಾಗಿ ಪ್ರಚಾರ ಮಾಡಲೇ ಇಲ್ಲ!

ಬಿಜೆಪಿಗೆ ಇನ್ನಷ್ಟು ಪವರ್‌
ಭಾರತೀಯ ಜನತಾ ಪಕ್ಷ ಈ ಗೆಲುವನ್ನು ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಬುಲ್ಡೋಜರ್‌ ಕಾರ್ಯಾಚರಣೆ ಮತ್ತು ದೊಂಬಿಕೋರರ ವಿರುದ್ಧ ಸರಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳಿಗೆ ಸಿಕ್ಕಿದ ಸರ್ಟಿಫಿಕೆಟ್‌ ಎಂದು ಭಾವಿಸಿದೆ. ಈ ಕಾರ್ಯಾಚರಣೆಗಳ ಬಗ್ಗೆ ಪ್ರತಿಪಕ್ಷಗಳ ಆಕ್ರೋಶ ಏನಿದ್ದರೂ ಕೇವಲ ಸೋಷಿಯಲ್‌ ಮೀಡಿಯಾದಲ್ಲಿ ಎನ್ನುವುದು ಸಾಬೀತಾಗಿದೆ.

೨೦೧೯ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ೮೦ ಸ್ಥಾನಗಳ ಪೈಕಿ ೬೪ನ್ನು ಗೆದ್ದುಕೊಂಡಿತ್ತು. ೨೦೧೪ರಲ್ಲಿ ಅದು ೭೩ ಸ್ಥಾನಗಳನ್ನು ಗೆದ್ದುಕೊಂಡಿದ್ದನ್ನು ಬೆಟ್ಟು ಮಾಡಿ ಕೆಲವರು ಬಿಜೆಪಿ ಜನಪ್ರಿಯತೆ ಕುಸಿಯುತ್ತಿದೆ ಎಂದು ಅಬ್ಬರಿಸಿದ್ದರು. ಈಗ ಬಿಜೆಪಿ ಬಲ ೬೬ಕ್ಕೇರಿದೆ. ನಿಜವೆಂದರೆ, ಕೇವಲ ಐದು ಸ್ಥಾನದಲ್ಲಷ್ಟೇ ಗೆದ್ದಿದ್ದ ಸಮಾಜವಾದಿ ಪಾರ್ಟಿ ಈಗ ಮೂರಕ್ಕೆ ಇಳಿದಿದೆ. ಇದ್ದುದರಲ್ಲಿ ಮಾಯಾವತಿ ಅವರ ಬಹುಜನ ಸಮಾಜ ಪಕ್ಷವೇ ವಾಸಿ. ಅದರ ಕೈಯಲ್ಲಿ ಹತ್ತು ಲೋಕಸಭಾ ಕ್ಷೇತ್ರಗಳಿವೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಂತೂ ಸಮಾಜವಾದಿ ಪಕ್ಷ ಅಧಿಕಾರಕ್ಕೇರಿಯೇ ಬಿಟ್ಟಿತು ಎಂಬಷ್ಟು ಹವಾ ಸೃಷ್ಟಿಯಾಗಿತ್ತು. ಆದರೆ, ಅಂತಿಮವಾಗಿ ಸಿಕ್ಕಿದ್ದು ೧೨೫ ಸ್ಥಾನ. ಹಾಗಂತ ಅದು ಹಿಂದಿನ ಬಾರಿಗೆ ಹೋಲಿಸಿದರೆ ದೊಡ್ಡ ಸಾಧನೆಯೇ. ಬಿಜೆಪಿಯ ಬಲ ೩೨೫ರಿಂದ ೨೭೩ಕ್ಕೆ ಇಳಿದಿತ್ತು. ಬಿಎಸ್‌ಪಿಗೆ ಸಿಕ್ಕಿದ್ದು ಒಂದೇ ಸೀಟು.

ಈ ಫಲಿತಾಂಶ ನೋಡಿ ಯೋಗಿ ಅಬ್ಬರ ನಡುವೆಯೂ ಸಮಾಜವಾದಿ ಪಾರ್ಟಿ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದೆ ಎಂದು ನಂಬಲಾಗಿತ್ತು. ಆದರೆ, ಲೋಕಸಭಾ ಉಪಚುನಾವಣೆ ಫಲಿತಾಂಶ ಈ ಎಲ್ಲ ನಂಬಿಕೆಗಳಿಗೆ ಮೊಳೆ ಹೊಡೆದಿದೆ. ನಿಜವಾಗಿ ಅದ್ಭುತವಾಗಿ ಚೇತರಿಸಿಕೊಂಡಿದ್ದು ಬಿಜೆಪಿಯೇ.

ಇದನ್ನೂ ಓದಿ| Bypoll Results: ಅಖಿಲೇಶ್‌ ಯಾದವ್‌ ಪಕ್ಷದ ಕೈಯಲ್ಲಿದ್ದ ಎರಡೂ ಲೋಕಸಭಾ ಕ್ಷೇತ್ರಗಳು ಬಿಜೆಪಿ ಮಡಿಲಿಗೆ

Exit mobile version