ಬೆಂಗಳೂರು: ಅತಿಯಾದ ಸಾಲದಿಂದಾಗಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಆನ್‌ಲೈನ್ ಶಿಕ್ಷಣ ತಂತ್ರಜ್ಞಾನ ವಲಯದ ಬೈಜೂಸ್ (Byju’s) ಕಂಪನಿಯು ದೇಶದಲ್ಲಿರುವ ಬಹುತೇಕ ಕಚೇರಿಗಳನ್ನು (Byju’s Offices) ಸ್ಥಗಿತಗೊಳಿಸಿದೆ. ನಷ್ಟದಲ್ಲಿರುವ ಸಂಸ್ಥೆಯ ಆರ್ಥಿಕ ಹೊರೆಯನ್ನು ತಗ್ಗಿಸುವ ದಿಸೆಯಲ್ಲಿ ಬೈಜೂಸ್ ಈ ತೀರ್ಮಾನ ತೆಗೆದುಕೊಂಡಿದೆ ಎಂದು ತಿಳಿದುಬಂದಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ (Work From Home) ಮಾಡುವಂತೆ ಸೂಚಿಸಲಾಗಿದೆ.
ದೇಶಾದ್ಯಂತ 300 ಟ್ಯೂಷನ್ ಸೆಂಟರ್‌ಗಳಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಹೊರತುಪಡಿಸಿ ಉಳಿದೆಲ್ಲ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಲಾಗಿದೆ. ದೇಶಾದ್ಯಂತ ಬೈಜೂಸ್ ಸಂಸ್ಥೆಯಲ್ಲಿ 14 ಸಾವಿರ ನೌಕರರು ಕೆಲಸ ಮಾಡುತ್ತಿದ್ದಾರೆ. ಹಣಕಾಸು ಬಿಕ್ಕಟ್ಟಿನಿಂದಾಗಿ ಕಳೆದ ಕೆಲ ತಿಂಗಳಿಂದ ಬೈಜೂಸ್ ಕಂಪನಿಯು ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳವನ್ನೂ ಕೊಡಲು ಆಗುತ್ತಿಲ್ಲ. ಕಂಪನಿಯ ಶೇ.75ರಷ್ಟು ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳ ನೀಡಲು ಆಗುತ್ತಿಲ್ಲ. ಫೆಬ್ರವರಿ ತಿಂಗಳ ಸಂಬಳವನ್ನು ಮಾರ್ಚ್ 10ರಂದು ನೀಡಲಾಗಿದೆ.
ಬೈಜೂಸ್ ಕಂಪನಿಯ ಸಿಇಒ ಅರ್ಜುನ್ ಮೋಹನ್ ಅವರ ಸೂಚನೆಯ ಮೇರೆಗೆ ಕಚೇರಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ನಾಲ್ಡೆಡ್ಜ್ ಪಾರ್ಕ್‌ನಲ್ಲಿರುವ ಕೇಂದ್ರ ಕಚೇರಿಯನ್ನು ಹೊರತುಪಡಿಸಿ ಎಲ್ಲ ಕಚೇರಿಗಳಿಗೆ ಬೀಗ ಹಾಕಲಾಗಿದೆ ಎಂದು ತಿಳಿದುಬಂದಿದೆ. ಇದಕ್ಕೂ ಮೊದಲು ಬೈಜೂಸ್ ಕಂಪನಿಯು ಬೆಂಗಳೂರಿನ ಕಲ್ಯಾಣಿ ಟೆಕ್ ಪಾರ್ಕ್‌ನಲ್ಲಿರುವ 5.58 ಲಕ್ಷ ಚದರ ಅಡಿ ಕಚೇರಿ ಸ್ಥಳವನ್ನು ತೆರವುಗೊಳಿಸಿತ್ತು. ಈಗಾಗಲೇ ಉದ್ಯೋಗಿಗಳನ್ನೂ ಕೆಲಸದಿಂದ ವಜಾಗೊಳಿಸಿದೆ.
ಇದನ್ನೂ ಓದಿ: Byju Raveendran: ಸಿಇಒ ಸ್ಥಾನದಿಂದ ಬೈಜು ರವೀಂದ್ರನ್‌ರನ್ನು ಕಿತ್ತು ಹಾಕಿದ ಷೇರುದಾರರು!
ಬೈಜೂಸ್ ಕಂಪನಿಯು 1.2 ಶತಕೋಟಿ ಡಾಲರ್ (ಸುಮಾರು 10 ಸಾವಿರ ಕೋಟಿ ರೂ.) ಸಾಲವನ್ನು ಹೊಂದಿದ್ದು, ಮೂರು ತಿಂಗಳಿಗೆ ಸುಮಾರು 33 ಕೋಟಿ ರೂ. ಬಡ್ಡಿಯನ್ನೇ ಕಟ್ಟಬೇಕಿದೆ. ಬಡ್ಡಿ ಕಟ್ಟಲು ಕೂಡ ಆಗದ ಪರಿಸ್ಥಿತಿ ಎದುರಾಗಿದೆ. ಇನ್ನು ಬೈಜೂಸ್ ಕಂಪನಿಗೆ ಸಾಲ ಕೊಟ್ಟಿರುವ ರೆಡ್‌ವುಡ್ ಇನ್ವೆಸ್ಟ್‌ಮೆಂಟ್ಸ್ ಎಲ್‌ಎಲ್‌ಸಿ ಹಾಗೂ ಸಿಲ್ವರ್ ಪಾಯಿಂಟ್ ಕ್ಯಾಪಿಎಲ್ ಎಲ್‌ಪಿ ಕಂಪನಿಗಳು ಕೋರ್ಟ್ ಮೊರೆ ಹೋಗಿವೆ. ಸಾಲದಿಂದಾಗಿ ಬೈಜೂಸ್ ಅಂಗಸಂಸ್ಥೆಯಾದ ಬೈಜೂಸ್ ಅಲ್ಫಾ ಬೇರೆಯವರ ಪಾಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ