Site icon Vistara News

CAA: ಸಿಎಎ ಜಾರಿ; ಕೇಂದ್ರದ ನಿರ್ಧಾರ ಸ್ವಾಗತಿಸಿದ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಹೇಳಿದ್ದೇನು?

Maulana Shahabuddin Razvi Bareilvi

Maulana Shahabuddin Razvi Bareilvi

ಲಕ್ನೋ: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆ (CAA) ಅನುಷ್ಠಾನವನ್ನು ಘೋಷಿಸಿದ್ದು, ದೇಶಾದ್ಯಂತ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಈ ಮಧ್ಯೆ ಅಖಿಲ ಭಾರತ ಮುಸ್ಲಿಂ ಜಮಾತ್ (All India Muslim Jamaat) ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಬರೇಲಿ (Maulana Shahabuddin Razvi Bareilvi) ಈ ಕಾಯ್ದೆಯನ್ನು ಸ್ವಾಗತಿಸುವ ಮೂಲಕ ಗಮನ ಸೆಳೆದರು. ʼʼಸಿಎಎ ಕಾಯ್ದೆಯನ್ನು ಸ್ವಾಗತಿಸುತ್ತೇನೆ. ಇದು ಮುಸ್ಲಿಮರ ಪೌರತ್ವ ಸ್ಥಾನಮಾನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲʼʼ ಎಂದು ಅವರು ಗೊಂದಲ, ಆತಂಕ ನಿವಾರಣೆಗೆ ಯತ್ನಿಸಿದರು.

“ಭಾರತ ಸರ್ಕಾರ ಸಿಎಎ ಕಾನೂನನ್ನು ಜಾರಿಗೆ ತಂದಿದೆ. ನಾನು ಈ ಕಾನೂನನ್ನು ಸ್ವಾಗತಿಸುತ್ತೇನೆ. ಇದನ್ನು ಬಹಳ ಮೊದಲೇ ಮಾಡಬೇಕಾಗಿತ್ತು. ಆದರೆ ತಡವಾದರೂ ಉತ್ತಮ ನಿರ್ಧಾರ. ಈ ಕಾನೂನಿನ ಬಗ್ಗೆ ಮುಸ್ಲಿಮರಲ್ಲಿ ಸಾಕಷ್ಟು ತಪ್ಪು ತಿಳುವಳಿಕೆಗಳಿವೆ. ಈ ಕಾನೂನಿಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ಧರ್ಮದ ಆಧಾರದ ಮೇಲೆ ದೌರ್ಜನ್ಯವನ್ನು ಎದುರಿಸಿದ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬರುವ ಮುಸ್ಲಿಮೇತರರಿಗೆ ಪೌರತ್ವ ನೀಡಲು ಈ ಹಿಂದೆ ಯಾವುದೇ ಕಾನೂನು ಇರಲಿಲ್ಲ. ಆ ಕೊರತೆಯನ್ನು ಈ ಕಾಯ್ದೆ ಮೂಲಕ ನಿವಾರಿಸಲಾಗುತ್ತಿದೆ” ಎಂದು ಮೌಲಾನಾ ತಿಳಿಸಿದರು.

ಮಾಹಿತಿ ಕೊರತೆಯಿಂದ ವಿರೋಧ

“ಈ ಕಾನೂನಿನಿಂದ ಭಾರತದಲ್ಲಿರುವ ಕೋಟ್ಯಂತರ ಮುಸ್ಲಿಮರ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ. ಈ ಕಾನೂನು ಯಾವುದೇ ಮುಸ್ಲಿಮನ ಪೌರತ್ವವನ್ನು ಕಸಿದುಕೊಳ್ಳುವುದಿಲ್ಲ. ತಪ್ಪು ತಿಳುವಳಿಕೆ, ಮಾಹಿತಿ ಕೊರತೆಯಿಂದಾಗಿ ಈ ಬಗ್ಗೆ ಪ್ರತಿಭಟನೆಗಳು ನಡೆಯುತ್ತಿವೆ. ಕೆಲವು ರಾಜಕೀಯ ವ್ಯಕ್ತಿಗಳು ಮುಸ್ಲಿಮರಲ್ಲಿ ತಪ್ಪು ತಿಳುವಳಿಕೆಗಳನ್ನು ಮೂಡಿಸಿದ್ದಾರೆ. ಭಾರತದ ಪ್ರತಿಯೊಬ್ಬ ಮುಸ್ಲಿಮರು ಸಿಎಎಯನ್ನು ಸ್ವಾಗತಿಸಬೇಕು” ಎಂದು ಅವರು ಕರೆ ನೀಡಿದರು.

ಫೆಬ್ರವರಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಿಎಎ ಕಾಯ್ದೆಯನ್ನು ಪೌರತ್ವವನ್ನು ನೀಡಲು ತರಲಾಗುತ್ತಿದೆಯೇ ಹೊರತು ಯಾರ ಪೌರತ್ವವನ್ನು ಕಸಿದುಕೊಳ್ಳಲು ಅಲ್ಲ ಎಂದು ಸ್ಪಷ್ಟ ಪಡಿಸಿದ್ದರು. “ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. ಸಿಎಎಯಿಂದ ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಏಕೆಂದರೆ ಕಾಯ್ದೆಯಲ್ಲಿ ಇದಕ್ಕೆ ಯಾವುದೇ ಅವಕಾಶವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡುವ ಕಾಯ್ದೆ” ಎಂದು ಅಮಿತ್ ಶಾ ಒತ್ತಿ ಹೇಳಿದ್ದರು.

ಏನಿದು ಪೌರತ್ವ ತಿದ್ದುಪಡಿ ಕಾಯ್ದೆ ?

2014ರ ಡಿಸೆಂಬರ್ 31ಕ್ಕಿಂತ ಮೊದಲು ನೆರೆಯ ಮುಸ್ಲಿಂ ಬಹುಸಂಖ್ಯಾತ ದೇಶಗಳಾದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ವಲಸೆ ಬಂದ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವಕ್ಕೆ ಮಾರ್ಗವನ್ನು ಒದಗಿಸಲು ಸಿಎಎ 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಸಿಎಎ ಅನುಷ್ಠಾನದ ಬಗ್ಗೆ ಆಡಳಿತಾರೂಢ ಬಿಜೆಪಿ ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು.

ಇದನ್ನೂ ಓದಿ: CAA: ಸಿಎಎ ಜಾರಿ ಬಗ್ಗೆ ಅಮೆರಿಕದ ಗಾಯಕಿಯ ಸ್ಪಷ್ಟ ಮಾತು; ಆಕೆ ಹೇಳಿದ್ದೇನು?

ಸಿಎಎಯನ್ನು 2019ರ ಡಿಸೆಂಬರ್ 11ರಂದು ಸಂಸತ್ತು ಅಂಗೀಕರಿಸಿತು. ಅದೇ ವರ್ಷದ ಡಿಸೆಂಬರ್ 12ರಂದು ಅಧಿಸೂಚನೆ ಹೊರಡಿಸಲಾಯಿತು. ಆದಾಗ್ಯೂ, ನಿಯಮಗಳನ್ನು ಸೂಚಿಸದ ಕಾರಣ ಕಾಯ್ದೆಯನ್ನು ಜಾರಿಗೆ ತರಲು ತಡವಾಯಿತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version