Site icon Vistara News

CAA: ಮುಂದಿನ ವಾರ ಪೌರತ್ವ ತಿದ್ದುಪಡಿ ಕಾಯಿದೆ ನಿಯಮಾವಳಿ ಜಾರಿ

amit shah

ಹೊಸದಿಲ್ಲಿ: ಮುಂದಿನ ಎರಡು ವಾರಗಳಲ್ಲಿ ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆ (The Citizenship Amendment Act – CAA) ಜಾರಿ ಮಾಡುವ ಕುರಿತ ಗೃಹ ವ್ಯವಹಾರಗಳ ಸಚಿವಾಲಯದಿಂದ (MHA) ನಿಯಮಗಳ ಕುರಿತ ಸೂಚನೆ ಹೊರಡಲಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ (model code of conduct – ಎಂಸಿಸಿ) ಜಾರಿಗೆ ಬರುವ ಮೊದಲು ಈ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಗೊತ್ತಾಗಿದೆ. ಲೋಕಸಭೆ ಚುನಾವಣೆಯ (Lok sabha Election 2024) ದಿನಾಂಕಗಳನ್ನು ಘೋಷಿಸಿದ ಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬರುತ್ತದೆ.

ಸಿಎಎ ಅಡಿಯಲ್ಲಿ ಪೌರತ್ವಕ್ಕಾಗಿ ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಅರ್ಜಿದಾರರಿಗೆ ಅಗತ್ಯವಿರುವ ಪುರಾವೆಗಳನ್ನು ನಿಯಮಗಳು ರೂಪಿಸುತ್ತವೆ. ಡಿಸೆಂಬರ್ 31, 2014ರ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಂತಹ ನೆರೆಯ ಮುಸ್ಲಿಂ-ಬಹುಸಂಖ್ಯಾತ ದೇಶಗಳಿಂದ ವಲಸೆ ಬಂದ ಹಿಂದೂಗಳು, ಸಿಖ್‌ಗಳು, ಕ್ರಿಶ್ಚಿಯನ್ನರು, ಬೌದ್ಧರು, ಜೈನರು ಮತ್ತು ಪಾರ್ಸಿಗಳಿಗೆ ಭಾರತೀಯ ಪೌರತ್ವವನ್ನು CAA ಒದಗಿಸುತ್ತದೆ. ಹೀಗೆ ಮಾಡುವಂತೆ 1955ರ ಪೌರತ್ವ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ.

CAAಯ ಜಾರಿಯು ಭಾರತದಾದ್ಯಂತ ಭಾರೀ ವಿವಾದ ಮತ್ತು ವ್ಯಾಪಕ ಪ್ರತಿಭಟನೆಯನ್ನು ಹುಟ್ಟುಹಾಕಿತ್ತು. ಇದು ಮುಸ್ಲಿಮರ ವಿರುದ್ಧ ತಾರತಮ್ಯ ಮಾಡುತ್ತದೆ. ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ತತ್ವಗಳನ್ನು ದುರ್ಬಲಗೊಳಿಸುತ್ತದೆ ಎಂದು ವಿಪಕ್ಷಗಳು ವಾದಿಸಿ ಪ್ರತಿಭಟನೆ ನಡೆಸಿದ್ದವು. ಮತ್ತೊಂದೆಡೆ, ನೆರೆಯ ದೇಶಗಳಿಂದ ಕಿರುಕುಳಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಮಾನವೀಯ ಕ್ರಮ ಇದು ಎಂದು ಸರ್ಕಾರವು ಕಾನೂನನ್ನು ಸಮರ್ಥಿಸಿತು.

ಕಾಯಿದೆಯ ಪ್ರಕಾರ, ಪೌರತ್ವ ಕೋರಿದವರು ಧಾರ್ಮಿಕ ಕಿರುಕುಳ ಹೊಂದಿದ್ದಾರೆ ಎಂಬುದಕ್ಕೆ ಸಾಕ್ಷ್ಯ ಕೇಳಲಾಗುವುದಿಲ್ಲ. ವಲಸೆ ಬಂದವರು ಕಿರುಕುಳ ಅಥವಾ ಕಿರುಕುಳದ ಭಯದಿಂದ ಹಾಗೆ ಮಾಡಿದ್ದಾರೆ ಎಂದು ಗ್ರಹಿಸಲಾಗುತ್ತದೆ. CAA ಅನ್ನು ಡಿಸೆಂಬರ್ 11, 2019ರಂದು ಸಂಸತ್ತು ಅಂಗೀಕರಿಸಿತು. ಅದೇ ವರ್ಷದ ಡಿಸೆಂಬರ್ 12ರಂದು ಅಧಿಸೂಚನೆಯನ್ನು ನೀಡಲಾಯಿತು. ಆದರೆ, ನಿಯಮಾವಳಿಗಳನ್ನು ತಿಳಿಸದ ಕಾರಣ ವಿವಾದಾತ್ಮಕ ಕಾನೂನು ಜಾರಿಗೆ ಬಂದಿಲ್ಲ.

ಈ ತಿಂಗಳ ಆರಂಭದಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಲೋಕಸಭೆ ಚುನಾವಣೆಗೆ ಮುನ್ನ ಸಿಎಎ ನಿಯಮಗಳನ್ನು ಅಧಿಸೂಚನೆ ಮಾಡಿ ಜಾರಿಗೊಳಿಸಲಾಗುವುದು ಎಂದು ಹೇಳಿದ್ದರು. ದೆಹಲಿಯಲ್ಲಿ ನಡೆದ ಇಟಿ-ನೌ ಗ್ಲೋಬಲ್ ಬ್ಯುಸಿನೆಸ್ ಶೃಂಗಸಭೆಯಲ್ಲಿ (ಜಿಬಿಎಸ್) ಮಾತನಾಡಿದ್ದ ಶಾ, ಸಿಎಎ ಕುರಿತು ಚುನಾವಣೆಗೆ ಮುನ್ನ ಸೂಚನೆ ನೀಡಲಾಗುವುದು. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದಿದ್ದರು.

“ಈ ಕಾನೂನು ಕಾಂಗ್ರೆಸ್ ಸರ್ಕಾರದ ಭರವಸೆಯಾಗಿತ್ತು. ದೇಶ ವಿಭಜನೆಯಾದಾಗ ಮತ್ತು ಆ ದೇಶಗಳಲ್ಲಿ ಅಲ್ಪಸಂಖ್ಯಾತರು ಕಿರುಕುಳಕ್ಕೊಳಗಾದಾಗ, ನಿರಾಶ್ರಿತರಿಗೆ ಭಾರತದಲ್ಲಿ ಸ್ವಾಗತವಿದೆ ಮತ್ತು ಅವರಿಗೆ ಭಾರತೀಯ ಪೌರತ್ವವನ್ನು ಒದಗಿಸಲಾಗುವುದು ಎಂದು ಕಾಂಗ್ರೆಸ್ ಭರವಸೆ ನೀಡಿತ್ತು. ಆದರೆ ಅವರು ಆ ಭರವಸೆಯಿಂದ ಹಿಂದೆ ಸರಿದರು” ಎಂದು ಶಾ ಹೇಳಿದ್ದರು.

ಇದನ್ನೂ ಓದಿ: CAA: ದೇಶಾದ್ಯಂತ ಒಂದೇ ವಾರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ; ಕೇಂದ್ರ ಮಹತ್ವದ ಘೋಷಣೆ

Exit mobile version