Site icon Vistara News

CAA: ಸಿಎಎ ಜಾರಿ; ಕೇರಳ, ತಮಿಳುನಾಡು ಮುಖ್ಯಮಂತ್ರಿಗಳ ನಿಲುವೇನು?

pinrayi stalin

pinrayi stalin

ನವದೆಹಲಿ: ಕೇಂದ್ರ ಸರ್ಕಾರ (Central Government) ಸೋಮವಾರ ಪೌರತ್ವ ತಿದ್ದುಪಡಿ ಕಾಯ್ದೆ (CAA) ಅನುಷ್ಠಾನವನ್ನು ಘೋಷಿಸಿದೆ. ಹಲವರು ಇದನ್ನು ಸ್ವಾಗತಿಸಿದ್ದಾರೆ. ಈ ಮಧ್ಯೆ ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಈ ಕಾಯ್ದೆಯನ್ನು ತಮ್ಮ ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಘೋಷಿಸಿವೆ.

ಕೇರಳದ ನಿಲುವೇನು?

ಸಿಎಎಯನ್ನು ನಮ್ಮ ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಘೋಷಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ʼʼಅಲ್ಪಸಂಖ್ಯಾತ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದಿಲ್ಲ ಎಂದು ನಮ್ಮ ಸರ್ಕಾರ ಹಿಂದೆಯೂ ಹೇಳಿತ್ತು. ಈಗಲೂ ಅದನ್ನೇ ಹೇಳುತ್ತೇವೆʼʼ ಎಂದು ಅವರು ತಿಳಿಸಿದ್ದಾರೆ.

ʼʼಈ ಕೋಮುವಾದಿ ಕಾನೂನನ್ನು ವಿರೋಧಿಸಲು ಇಡೀ ಕೇರಳ ಒಂದಾಗಲಿದೆ. ದೇಶದ ಕೋಮು ಸೌಹಾರ್ದತೆಯನ್ನು ಕದಡಲು ಕೇಂದ್ರ ಸರ್ಕಾರವು ಚುನಾವಣೆಗೆ ಮುಂಚಿತವಾಗಿ ಪೌರತ್ವ ತಿದ್ದುಪಡಿ ಕಾಯ್ದೆಯ ನಿಬಂಧನೆಗಳನ್ನು ಅಧಿಸೂಚನೆ ಮಾಡಿದೆʼʼ ಎಂದು ಅವರು ಆರೋಪಿಸಿದ್ದಾರೆ.

ಇದನ್ನು ಸಂಘ ಪರಿವಾರದ ಕೋಮುವಾದಿ ಕಾರ್ಯಸೂಚಿಯ ಭಾಗ ಎಂದು ಕರೆದಿರುವ ಪಿಣರಾಯಿ ವಿಜಯನ್, ʼʼ2014ರ ಡಿಸೆಂಬರ್ 31ರಂದು ಅಥವಾ ಅದಕ್ಕೂ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರರಿಗೆ ಪೌರತ್ವ ನೀಡುವುದು ಮತ್ತು ಮುಸ್ಲಿಮರಿಗೆ ಪೌರತ್ವವನ್ನು ನಿರಾಕರಿಸುವುದು ಸಂವಿಧಾನದ ಸ್ಪಷ್ಟ ಉಲ್ಲಂಘನೆʼʼ ಎಂದು ಅಭಿಪ್ರಾಯಪಟ್ಟಿದ್ದಾರೆ. ʼʼಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ಮೊದಲ ವಿಧಾನಸಭೆ ಕೇರಳʼʼ ಎಂದೂ ಅವರು ತಿಳಿಸಿದ್ದಾರೆ.

ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪ್ರಧಾನ ಕಾರ್ಯದರ್ಶಿ ಪಿ.ಕೆ.ಕುನ್ಹಾಲಿಕುಟ್ಟಿ ಮಾತನಾಡಿ, ʼʼಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕೇಂದ್ರ ಸರ್ಕಾರ ವಿವಾದಾತ್ಮಕ ಸಿಎಎ ಅಧಿಸೂಚನೆ ಹೊರಡಿಸಿರುವುದು ಕಾನೂನುಬಾಹಿರʼʼ ಎಂದು ಕಿಡಿ ಕಾರಿದ್ದಾರೆ. “ಇದನ್ನು ನಾವು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ” ಎಂದು ಸವಾಲು ಹಾಕಿದ್ದಾರೆ.

ತಮಿಳುನಾಡು ಹೇಳೋದೇನು?

ಇತ್ತ ತಮಿಳು ನಾಡು ಸರದಕಾರ ಕೂಡ ಸಿಎಎ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌, ಈ ಕಾಯ್ದೆ ಭಾರತೀಯ ನಾಗರಿಕರನ್ನು ವಿಭಜಿಸುತ್ತದೆ. ಹೀಗಾಗಿ ಇದನ್ನು ರಾಜ್ಯದಲ್ಲಿ ಜಾರಿಗೆ ತರುವುದಿಲ್ಲ ಎಂದು ಹೇಳಿದ್ದಾರೆ. ʼʼಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಸಿಎಎಯ ನಿಯಮಗಳನ್ನು ಅಧಿಸೂಚನೆಯಾಗಿ ಪ್ರಕಟಿಸಲಾಗಿದೆ. ಸಿಎಎ ಮತ್ತು ಅದರ ನಿಯಮಗಳು ಸಂವಿಧಾನದ ಮೂಲ ರಚನೆಗೆ ವಿರುದ್ಧʼʼ ಎಂದು ಹೇಳಿದ್ದಾರೆ.

ಇದನ್ನೂ ಓದಿ: CAA: ಸಿಎಎ ಜಾರಿ; ಕೇಂದ್ರದ ನಿರ್ಧಾರ ಸ್ವಾಗತಿಸಿದ ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಹೇಳಿದ್ದೇನು?

“ಸಿಎಎಯಿಂದ ಯಾವುದೇ ಪ್ರಯೋಜನ ಇಲ್ಲ. ಈ ಕಾನೂನು ಸಂಪೂರ್ಣವಾಗಿ ಅನಗತ್ಯ ಎಂಬುದು ನಮ್ಮ ಸರ್ಕಾರದ ನಿಲುವು. ಅದನ್ನು ರದ್ದುಪಡಿಸಬೇಕುʼʼ ಎಂದು ಆಗ್ರಹಿಸಿದ್ದಾರೆ. ʼʼಸಿಎಎ ಬಹುತ್ವ, ಜಾತ್ಯಾತೀತತೆ, ಅಲ್ಪಸಂಖ್ಯಾತ ಸಮುದಾಯ ಮತ್ತು ಶ್ರೀಲಂಕಾದ ತಮಿಳು ನಿರಾಶ್ರಿತರಿಗೆ ವಿರುದ್ಧವಾಗಿದೆʼʼ ಎಂದು ಆಡಳಿತಾರೂಢ ಡಿಎಂಕೆ ಅಧ್ಯಕ್ಷರೂ ಆಗಿರುವ ಸ್ಟಾಲಿನ್ ಪುನರುಚ್ಚರಿಸಿದ್ದಾರೆ. ಸಿಎಎ ಕಾಯ್ದೆಯ ವಿರುದ್ಧ ದೇಶದ ವಿವಿಧ ಕಡೆಗಳಲ್ಲಿ ಪ್ರತಿಭಟನೆ ಆರಂಭವಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version