Site icon Vistara News

ಕೇಂದ್ರ ಸರ್ಕಾರಿ ನೌಕರರ ತುಟ್ಟಿ ಭತ್ಯೆ 4% ಏರಿಕೆ, ಮೋದಿ ಸಂಪುಟ ನಿರ್ಣಯ

narendra modi

ನವ ದೆಹಲಿ: ಕೇಂದ್ರ ಸರ್ಕಾರದ ನೌಕರರ ತುಟ್ಟಿ ಭತ್ಯೆ (ಡಿಎ) ಯನ್ನು ಶೇ.4ರಷ್ಟು ಏರಿಸಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಈ ವರ್ಷದಲ್ಲಿ ಎರಡನೇ ಬಾರಿಗೆ ತುಟ್ಟಿ ಭತ್ಯೆಯನ್ನು ಸರ್ಕಾರ ಹೆಚ್ಚಿಸುತ್ತಿದೆ. ಕಳೆ ಮಾರ್ಚ್‌ನಲ್ಲಿ ತುಟ್ಟಿ ಭತ್ಯೆಯನ್ನು ಶೇ.3ರಷ್ಟು ಹೆಚ್ಚಿಸಲಾಗಿತ್ತು. ಶೇ.31ರಿಂದ ಶೇ.34ಕ್ಕೆ ತುಟ್ಟಿ ಭತ್ಯೆ ಏರಿಕೆಯಾಗಿತ್ತು. ಪ್ರಸ್ತುತ ಏರಿಕೆಯೊಂದಿಗೆ ತುಟ್ಟಿ ಭತ್ಯೆಯ ಪ್ರಮಾಣ ಶೇ.38 ಆಗುತ್ತಿದೆ.

ಹಣದುಬ್ಬರದಿಂದ ಉಂಟಾಗುವ ಬೆಲೆಯೇರಿಕೆಯ ಪರಿಣಾಮಗಳನ್ನು ಸರಿದೂಗಿಸಲು ತುಟ್ಟಿಭತ್ಯೆಯನ್ನು ಅವರ ಸಂಬಳದ ಮೇಲೆ ಸರ್ಕಾರಿ ನೌಕರರಿಗೆ ನೀಡಲಾಗುತ್ತದೆ. ಇದು ನೌಕರರಿಗೆ ಹಾಗೂ ನಿವೃತ್ತರಿಗೂ ಅನ್ವಯವಾಗುತ್ತದೆ. ಸುಮಾರು 52 ಲಕ್ಷದಷ್ಟು ಇರುವ ಕೇಂದ್ರ ನೌಕರರು ಈ ಏರಿಕೆ ಲಾಭ ಪಡೆಯಲಿದ್ದಾರೆ. ರಾಜ್ಯ ಸರ್ಕಾರಗಳೂ ಈ ಉಪಕ್ರಮವನ್ನು ಆದರ್ಶವಾಗಿ ತೆಗೆದುಕೊಳ್ಳುವ ಸಾಧ್ಯತೆಗಳು ಇವೆ.

ತುಟ್ಟಿ ಭತ್ಯೆಯನ್ನು ಸಾಮಾನ್ಯವಾಗಿ ವರ್ಷದಲ್ಲಿ ಎರಡು ಬಾರಿ – ಜನವರಿ ಹಾಗೂ ಜುಲೈ- ಪರಿಷ್ಕರಿಸಲಾಗುತ್ತದೆ.

Exit mobile version