Site icon Vistara News

India Canada Row: ಬಿಕ್ಕಟ್ಟಿನ ಮಧ್ಯೆಯೇ ಹಿಂದುಗಳಿಗೆ ಟ್ರುಡೋ ನವರಾತ್ರಿ ಶುಭಾಶಯ!

justin trudeau and narendra modi

ಒಟ್ಟಾವ: ಭಾರತ ಹಾಗೂ ಕೆನಡಾ ಮಧ್ಯೆ ರಾಜತಾಂತ್ರಿಕ ಬಿಕ್ಕಟ್ಟು (India Canada Row) ಏರ್ಪಟ್ಟಿದೆ. ಕೆನಡಾದಲ್ಲಿರುವ ಭಾರತದ ರಾಯಭಾರಿಗಳನ್ನು ಜಸ್ಟಿನ್‌ ಟ್ರುಡೋ ಭಾರತಕ್ಕೆ ಕಳುಹಿಸಿದರೆ, ಭಾರತದಲ್ಲಿರುವ ರಾಜತಾಂತ್ರಿಕ ಅಧಿಕಾರಿಗಳನ್ನು ಕೆನಡಾಗೆ ವಾಪಸ್‌ ಹೋಗಿ ಎಂದು ಆದೇಶಿಸಿದೆ. ಖಲಿಸ್ತಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಜಸ್ಟಿನ್‌ ಟ್ರುಡೋ‌ (Justin Trudeau) ಆರೋಪಿಸಿದ ಬಳಿಕವಂತೂ ಭಾರತ ಹಲವು ಕ್ರಮ ತೆಗೆದುಕೊಂಡಿದೆ. ಅಷ್ಟರಮಟ್ಟಿಗೆ ಎರಡೂ ದೇಶಗಳ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿದ್ದರೂ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಅವರು ಹಿಂದುಗಳಿಗೆ ನವರಾತ್ರಿ ಹಬ್ಬದ (Navaratri Festival) ಶುಭಾಶಯ ತಿಳಿಸಿದ್ದಾರೆ.

“ಕೆನಡಾದಲ್ಲಿರುವ ಹಿಂದುಗಳಿಗೆ ನವರಾತ್ರಿ ಹಬ್ಬದ ಶುಭಾಶಯಗಳು. ನವರಾತ್ರಿ ಹಬ್ಬವನ್ನು ಆಚರಿಸುತ್ತಿರುವ ಎಲ್ಲರಿಗೂ ಹಬ್ಬದ ಶುಭಾಶಯಗಳು. ಮುಂದಿನ 9 ರಾತ್ರಿ ಹಾಗೂ 10 ದಿನ ಕೆನಡಾದಲ್ಲಿರುವ ಹಿಂದುಗಳು ಸೇರಿ ಜಗತ್ತಿನಾದ್ಯಂತ ಇರುವ ಹಿಂದುಗಳು ನವರಾತ್ರಿ ಆಚರಿಸುತ್ತಾರೆ. ಮಹಿಷಾಸುರನನ್ನು ದುರ್ಗೆ ವಧೆ ಮಾಡಿದ್ದನ್ನು ಸಂಭ್ರಮಿಸಲಾಗುತ್ತದೆ. ಇದು ಸಮಾಜದಲ್ಲಿ ಕೆಟ್ಟದ್ದರ, ದುಷ್ಟಶಕ್ತಿಯ ಅಳಿವಿನ ಸಂಕೇತ ಎಂಬುದಾಗಿ ಆಚರಿಸಲಾಗುತ್ತದೆ. ವಿಶೇಷ ತಿನಿಸು ಹಾಗೂ ಪಟಾಕಿ ಸಿಡಿಸಿ ಆಚರಿಸಲಾಗುತ್ತದೆ” ಎಂದು ಜಸ್ಟಿನ್‌ ಟ್ರುಡೋ ಪ್ರಕಟಣೆ ಹೊರಡಿಸಿದ್ದಾರೆ.

ಕೆನಡಾ ಪ್ರಧಾನಿ ಪೋಸ್ಟ್

ಇದನ್ನೂ ಓದಿ: India Canada Row: ‘ಖಾಸಗಿ ಮಾತುಕತೆ ನಡೆಸೋಣ ಬನ್ನಿ’; ಎದುರೇಟಿಗೆ ಏದುಸಿರು ಬಿಟ್ಟ ಕೆನಡಾ ಮನವಿ

ಜೂನ್ 18ರಂದು ನಡೆದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆನ್ಸಿಗಳ ಕೈವಾಡ ಇರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಹೇಳಿಕೆ ನೀಡಿದ್ದರು. ಇದಾದ ಬೆನ್ನಲ್ಲೇ ಭಾರತ ಮತ್ತು ಕೆನಡಾ ಮಧ್ಯೆ ರಾಜತಾಂತ್ರಿಕ ಸಂಘರ್ಷ ಏರ್ಪಟ್ಟಿತ್ತು. ಭಾರತವು ಟ್ರೂಡೋ ಆರೋಪಕ್ಕೆ ಪ್ರತಿಕ್ರಿಯಿಸಿ, ಇದೊಂದು ಆಧಾರ ರಹಿತ ಆರೋಪ ಎಂದು ಹೇಳಿತ್ತು. ಅಲ್ಲದೇ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ವಜಾ ಮಾಡುವ ಮೂಲಕ ಸ್ಪರ್ಧೆಗೆ ಇಳಿದಿದ್ದವು.

ಮಾತುಕತೆಗೆ ಸಿದ್ಧ ಎಂದಿರುವ ಕೆನಡಾ

“ಭಾರತದ ಜತೆಗಿನ ರಾಜತಾಂತ್ರಿಕ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲು ಕೆನಡಾ ಬಯಸುತ್ತದೆ. ನಾವು ಕೆನಡಾ ರಾಜತಾಂತ್ರಿಕ ಅಧಿಕಾರಿಗಳು, ರಾಯಭಾರಿಗಳ ಸುರಕ್ಷತೆಯು ಕೆನಡಾ ಆದ್ಯತೆಯಾಗಿದೆ. ಹಾಗೆಯೇ, ಬಿಕ್ಕಟ್ಟು ಬಗೆಹರಿಸಿಕೊಳ್ಳಲು ಖಾಸಗಿಯಾಗಿ ಮಾತುಕತೆ ನಡೆಸುವುದು ಕೆನಡಾ ಉದ್ದೇಶವಾಗಿದೆ. ಇದಕ್ಕಾಗಿ ಭಾರತ ಸರ್ಕಾರದ ಜತೆ ಮಾತುಕತೆ ನಡೆಸಲಾಗುತ್ತಿದೆ” ಎಂದು ಈಗಾಗಲೇ ಕೆನಡಾ ವಿದೇಶಾಂಗ ಸಚಿವೆ ಮೆಲಾನೀ ಜೋಲಿ (Melanie Joly) ಹೇಳಿದ್ದು, ಯಾವುದೇ ಪ್ರಗತಿ ಕಾಣಿಸಿಲ್ಲ.

Exit mobile version