Site icon Vistara News

Beware Of Beer: ಬಿಯರ್‌ ಪ್ರಿಯರೇ ಎಚ್ಚರ; ಎಣ್ಣೆ, ಮಾಂಸದಲ್ಲಿದೆ ಕ್ಯಾನ್ಸರ್‌ಕಾರಕ ಅಂಶ

Cancer-causing chemicals present in meat & beer: Study

Cancer-causing chemicals present in meat & beer: Study

ನವದೆಹಲಿ: ವಾರವಿಡೀ ಕೆಲಸ ಮಾಡಿರುತ್ತೀರಿ. ಸಿಗುವ ವೀಕೆಂಡ್‌ ಸುಮ್ಮನೆ ಕಳೆದುಹೋದರೆ ಮತ್ತೆ ಒಂದು ವಾರ ದುಡಿಯಬೇಕು. ಹಾಗಾಗಬಾರದು ಎಂದು ಶಪಥ ಮಾಡಿ, ಎರಡು ಬಿಯರ್‌ ಬಾಟಲಿ ಕೈಗೆತ್ತಿಕೊಳ್ಳುತ್ತೀರಿ. ಬರೀ ಬಿಯರ್‌ ಆದರೆ ಪಾರ್ಟಿ ಕಂಪ್ಲೀಟ್‌ ಆದೀತೆ? ಮಾಂಸವನ್ನೂ (Meat) ಆರ್ಡರ್‌ ಮಾಡುತ್ತೀರಿ. ಆದರೆ, ಮುಂದಿನ ವೀಕೆಂಡ್‌ನಲ್ಲಿ ಹೀಗೆ ಸ್ಟೈಲ್‌ ಆಗಿ ಬಿಯರ್‌ ಹಾಗೂ ಮಾಂಸವನ್ನು ಆರ್ಡರ್‌ ಮಾಡುವ ಮುನ್ನ ಈ ಸುದ್ದಿಯನ್ನು ಇನ್ನೊಮ್ಮೆ ನನಪಿಸಿಕೊಳ್ಳಿ. ಹೌದು, ಬಿಯರ್‌ ಹಾಗೂ ಮಾಂಸದಲ್ಲಿ (Beware Of Beer) ಕ್ಯಾನ್ಸರ್‌ಕಾರಕ ರಾಸಾಯನಿಕ ಅಂಶಗಳಿವೆ ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ.

ಯುರೋಪಿಯನ್‌ ಯುನಿಯನ್‌ನ ಯುರೋಪಿಯನ್‌ ಫುಡ್‌ ಸೇಫ್ಟಿ ಏಜೆನ್ಸಿಯು ಅಧ್ಯಯನ ವರದಿ ಬಿಡುಗಡೆ ಮಾಡಿದ್ದು, ಹತ್ತಾರು ಭಯಾನಕ ಅಂಶಗಳನ್ನು ತೆರೆದಿಟ್ಟಿದೆ. “ಬಿಯರ್‌ ಹಾಗೂ ಮಾಂಸದಲ್ಲಿ ಆರೋಗ್ಯಕ್ಕೆ ಹಾನಿ ಉಂಟುಮಾಡುವ ರಾಸಾಯನಿಕಗಳಿವೆ. ಅದರಲ್ಲೂ, ನೈಟ್ರೋಸಮೈನ್ಸ್‌ ಎಂಬ ರಾಸಾಯನಿಕವು ಕ್ಯಾನ್ಸರ್‌ಕಾರಕವಾಗಿದೆ. ಬಿಯರ್‌ ಹಾಗೂ ಮಾಂಸದಲ್ಲಿ ಈ ಅಂಶವು ಪತ್ತೆಯಾಗಿರುವುದರಿಂದ ಸೇವಿಸುವವರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ” ಎಂದು ತಿಳಿಸಿದೆ.

“ನೈಟ್ರೋಸಮೈನ್ಸ್‌ನ 10 ಅಂಶಗಳನ್ನು ಮಾಂಸದಡುಗೆಯಲ್ಲಿ ಉದ್ದೇಶಪೂರ್ವಕಾಗಿ ಸೇರಿಸಿರುವುದಿಲ್ಲ ನಿಜ. ಆದರೆ, ಮಾಂಸದ ಸಂಸ್ಕರಣೆ ಹಾಗೂ ಅಡುಗೆ ಮಾಡುವ ವೇಳೆ ಈ ರಾಸಾಯನಿಕದ ಉತ್ಪಾದನೆಯಾಗುತ್ತಿದೆ. ಇದರಿಂದ ಡಿಎನ್‌ಎ ಮೇಲೆ ಪರಿಣಾಮ ಬೀರುತ್ತದೆ. ಅಧ್ಯಯನದ ವೇಳೆ ಪ್ರಾಣಿಗಳ ಪ್ರಯೋಗ ಮಾಡಿ ನೋಡಲಾಗಿದೆ. ಇದರಿಂದ ಲಿವರ್‌ ಮೇಲೆ ಭಾರಿ ಪರಿಣಾಮ ಬೀರಿರುವುದು ಕಂಡುಬಂದಿದೆ. ಮನುಷ್ಯರಿಗೆ ಇದರಿಂದ ಗಂಭೀರ ಆರೋಗ್ಯ ಪರಿಣಾಮ ಎದುರಾಗುವ ಸಾಧ್ಯತೆ ಇದೆ” ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನೈಟ್ರೋಸಮೈನ್ಸ್‌ ರಾಸಾಯನಿಕವು ಮಾಂಸದಲ್ಲಿ ಮಾತ್ರವಲ್ಲ, ಸಂಸ್ಕರಣೆ ಮಾಡಿದ ಮೀನು, ಕೊಕೊವಾ, ಬಿಯರ್‌ ಸೇರಿ ವಿವಿಧ ಆಲ್ಕೋಹಾಲಿಕ್‌ ಪಾನೀಯಗಳಲ್ಲಿ ಪತ್ತೆಯಾಗಿದೆ. ಜನ ಪ್ರಮುಖವಾಗಿ ಗಮನಹರಿಸಬೇಕಾಗಿರುವುದು ಮಾಂಸ ಸೇವೆಯ ಬಗ್ಗೆ” ಎಂದು ಅಧ್ಯಯನ ವರದಿ ತಿಳಿಸಿದೆ. ಮನುಷ್ಯನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಕಾರಣದಿಂದಾಗಿ ಅಧ್ಯಯನ ವರದಿಯನ್ನು ಯುರೋಪಿಯನ್‌ ಒಕ್ಕೂಟದ ಎಲ್ಲ 27 ರಾಷ್ಟ್ರಗಳೊಂದಿಗೂ ಹಂಚಿಕೊಳ್ಳಲು ಏಜೆನ್ಸಿ ತೀರ್ಮಾನಿಸಿದೆ. ಹಾಗೆಯೇ, ಬೇರೆ ದೇಶಗಳ ಜನರು ಕೂಡ ಬಿಯರ್‌ ಸೇವನೆ, ಮಾಂಸ ಸೇವನೆಯಿಂದ ದೂರ ಇರುವುದೇ ಒಳ್ಳೆಯದು ಎಂಬುದಾಗಿ ತಜ್ಞರು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Karnataka Election 2023 : ಪ್ರಚಾರಕ್ಕೆ ಬಂದ ನಿಖಿಲ್‌ಗೆ ಮಹಿಳೆಯರ ತರಾಟೆ; ವಿಡಿಯೋ ವೈರಲ್‌

Exit mobile version