Site icon Vistara News

Amarinder Singh | ಬಿಜೆಪಿ ಜತೆ ಪಂಜಾಬ್‌ ಲೋಕ ಕಾಂಗ್ರೆಸ್‌ ವಿಲೀನಗೊಳಿಸಿದ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌

Amar

ನವದೆಹಲಿ: ಕಾಂಗ್ರೆಸ್‌ನಲ್ಲಿ ನಡೆದ ರಾಜಕೀಯ ಮೇಲಾಟದಿಂದ ಬೇಸತ್ತು, ಪಂಜಾಬ್‌ ಲೋಕ ಕಾಂಗ್ರೆಸ್‌ ಪಕ್ಷ ಸ್ಥಾಪಿಸಿದರೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಿದ್ದ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ (Amarinder Singh) ಅವರು ತಮ್ಮ ಪಕ್ಷವನ್ನು ಬಿಜೆಪಿ ಜತೆ ವಿಲೀನಗೊಳಿಸಿದ್ದಾರೆ.

ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌, ಏಳು ಮಾಜಿ ಶಾಸಕರು ಹಾಗೂ ಒಬ್ಬ ಮಾಜಿ ಸಂಸದ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಕೇಂದ್ರ ಸಚಿವರಾದ ನರೇಂದ್ರ ಸಿಂಗ್‌ ತೋಮರ್‌, ಕಿರಣ್‌ ರಿಜಿಜು ಸೇರಿ ಹಲವು ನಾಯಕರು ಅಮರಿಂದರ್‌ ಸಿಂಗ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.

ದೇಶ ಮೊದಲು, ಪಕ್ಷ ನಂತರ

ಕ್ಯಾಪ್ಟನ್‌ ಅವರನ್ನು ಬಿಜೆಪಿಗೆ ಸ್ವಾಗತಿಸಿದ ಬಳಿಕ ಮಾತನಾಡಿದ ನರೇಂದ್ರ ಸಿಂಗ್‌ ತೋಮರ್‌, “ಬಿಜೆಪಿಯಲ್ಲಿ ದೇಶ ಮೊದಲು, ಪಕ್ಷ ನಂತರ ಎಂಬ ಮನೋಭಾವ ಇದೆ. ಇದೇ ಮನಸ್ಥಿತಿಯನ್ನು ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು ಮೊದಲಿನಿಂದಲೂ ರೂಢಿಸಿಕೊಂಡಿದ್ದಾರೆ. ಹಾಗಾಗಿ, ಅವರು ನಮ್ಮ ಪಕ್ಷಕ್ಕೆ ಆಗಮಿಸಿದ್ದು ಖುಷಿ ತಂದಿದೆ. ನರೇಂದ್ರ ಮೋದಿ ನೇತೃತ್ವದಲ್ಲಿ ಹಾಗೂ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರ ಮಾರ್ಗದರ್ಶನದಲ್ಲಿ ಪಂಜಾಬ್‌ ಅಭಿವೃದ್ಧಿಗೆ ಶ್ರಮಿಸಲಾಗುವುದು” ಎಂದು ಹೇಳಿದರು.

ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಅಮರಿಂದರ್‌ ಸಿಂಗ್‌, ಪಕ್ಷದ ವಿಲೀನ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನೂ ಭೇಟಿಯಾಗಿದ್ದರು. ಇದಾದ ಬಳಿಕ ಪಂಜಾಬ್‌ ಲೋಕ ಕಾಂಗ್ರೆಸ್‌ಅನ್ನು ಬಿಜೆಪಿ ಜತೆ ವಿಲೀನಗೊಳಿಸಲು ತೀರ್ಮಾನಿಸಿದ್ದರು.

ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕ್ಯಾಪ್ಟನ್‌ ಅವರು ಬಿಜೆಪಿ ಸೇರ್ಪಡೆಯಾಗಿರುವುದು ಬಿಜೆಪಿ ಹಾಗೂ ಅಮರಿಂದರ್‌ ಸಿಂಗ್‌ ಅವರಿಗೆ ಅನುಕೂಲ ಎಂದು ವಿಶ್ಲೇಷಿಸಲಾಗುತ್ತಿದೆ. ಇಬ್ಬರೂ ಒಗ್ಗೂಡಿ ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಕ್ಷವನ್ನು ಕಟ್ಟಿಹಾಕುವುದು ಗುರಿಯಾಗಿದೆ.

ಇದನ್ನೂ ಓದಿ | ಲಂಡನ್‌ನಲ್ಲಿ ಸರ್ಜರಿಗೆ ಒಳಗಾದ ಕ್ಯಾ. ಅಮರಿಂದರ್‌ ಸಿಂಗ್‌; ವಾಪಸ್‌ ಬರುತ್ತಿದ್ದಂತೆ ಬಿಜೆಪಿ ಸೇರ್ಪಡೆ

Exit mobile version