ನವದೆಹಲಿ : ಹೆಣ್ಣು ಮಕ್ಕಳು ಹೆದರುವುದು ಬೇಗ, ಸವಾಲಿನ ಕೆಲಸ ಅವರಿಂದ ಸಾಧ್ಯವಿಲ್ಲ. ಅದರಲ್ಲೂ ಅನಿರೀಕ್ಷಿತ ಅವಘಡದ ವೇಳೆ ಅವರು ಧೃತಿಗೆಡುವುದೇ ಹೆಚ್ಚು ಎಂಬುದು ಪುರುಷ ಪ್ರಧಾನ ಸಮಾಜದ ನಂಬಿಕೆ. ಈ ಕಲ್ಪನೆಗೆ ವ್ಯತಿರಿಕ್ತ ಎಂಬಂತೆ women pilot ಒಬ್ಬರು ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡರೂ ಧೃತಿಗೆಡದೆ ಧೈರ್ಯವಾಗಿ ವಿಮಾನ ಲ್ಯಾಂಡ್ ಮಾಡಿ ನೂರಾರು ಪ್ರಯಾಣಿಕರನ್ನು ಕಾಪಾಡಿದ್ದಾರೆ. ಅವರ ಧೈರ್ಯಕ್ಕೆ ಇದೀಗ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವಿಮಾನದಲ್ಲಿ ಬೆಂಕಿ, ಮಹಿಳಾ ಪೈಲೆಟ್ ಮಾಡಿದ್ದೇನು?
ಭಾನುವಾರ ಮಧ್ಯಾಹ್ನ ೧೮೫ ಪ್ರಯಾಣಿಕರನ್ನು ಹೊತ್ತ ಸ್ಪೈಸ್ ಜೆಟ್ ಬೋಯಿಂಗ್ 737 ವಿಮಾನ ಪಾಟ್ನಾದ ಜಯ ಪ್ರಕಾಶ್ ನಾರಾಯಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಹಾರಾಟ ಆರಂಭಿಸಿತ್ತು . ಆದರೆ, ದುರದೃಷ್ಟವಶಾತ್ ವಿಮಾನ ಟೇಕಾಫ್ ಆದ ಕೆಲವೇ ನಿಮಿಷದಲ್ಲೇ ವಿಮಾನದ ಎಂಜಿನ್ಗೆ ಪಕ್ಷಿ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ವಿಮಾನದಲ್ಲಿದ್ದ ಸಿಬ್ಬಂದಿ ವಿಮಾನದಿಂದ ಹೊಗೆ ಬರುತ್ತಿರುವುದನ್ನು ಗಮನಿಸಿ ತಕ್ಷಣ ಏರ್ ಟ್ರಾಫಿಕ್ ಕಂಟ್ರೋಲ್ಗೆ ಮಾಹಿತಿ ಮುಟ್ಟಿಸಿದ್ದಾರೆ. ಬಳಿಕ ಕ್ಯಾಪ್ಟನ್ ಮೋನಿಕಾಗೆ ಮಾಹಿತಿ ನೀಡಲಾಗಿದ್ದು, ಅವರು ಪ್ರಮಾಣಿತ ಕಾರ್ಯವಿಧಾನ ಬಳಸಿ ಬೆಂಕಿ ಹೊತ್ತಿಕೊಂಡಿದ್ದ ಎಂಜಿನ್ ಸ್ಥಗಿತಗೊಳಿಸಿದ್ದಾರೆ. ಬಳಿಕ ಒಂದೇ ಎಂಜಿನ್ ಮೂಲಕ ವಿಮಾನ ಹಾರಾಟ ಮುಂದುವರಿಸಿದೆ.
ಒಂದೇ ಎಂಜಿನ್‌ನಲ್ಲಿ ವಿಮಾನ ಹಾರಾಟ
19 ನಿಮಿಷಗಳ ಕಾಲ ವಿಮಾನವನ್ನು ಒಂದೇ ಎಂಜಿನ್‌ನಲ್ಲಿ ಕ್ಯಾಪ್ಟನ್ ಮೋನಿಕಾ ಖನ್ನಾ ಹಾರಾಟ ನಡೆಸಿದ್ದಾರೆ. ಈ ಸಮಯದಲ್ಲಿ ವಿಮಾನದಲ್ಲಿದ್ದ ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ಯಾಕೆಂದರೆ ಒಂದು ಚೂರು ಹೆಚ್ಚು ಕಮ್ಮಿ ಆಗಿದ್ದರೂ ಇಡೀ ವಿಮಾನ ಸುಟ್ಟು ಭಸ್ಮವಾಗುವ ಸಾಧ್ಯತೆಗಳಿದ್ದವು. ಆದರೆ. ಕ್ಯಾಪ್ಟನ್ ಮೋನಿಕಾ ಹೆದರದೇ, ಧೈರ್ಯವಾಗಿ ಒಂದೇ ಇಂಜಿನ್ನಲ್ಲಿ ಹಾರಾಟ ನಡೆಸಿ ಪಾಟ್ನಾದಂತಹ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಎಲ್ಲಾ ಪ್ರಯಾಣಿಕರನ್ನು ಇಳಿಸಿದ್ದಾರೆ. ಪ್ರಯಾಣಿಕರು ಕೂಡ ವಿಮಾನ ಇಳಿದ ಕೂಡಲೇ ನೆಮ್ಮದಿಯ ನಿಟ್ಟುಸಿರುವ ಬಿಟ್ಟಿದ್ದಾರೆ. ಅಲ್ಲದೆ ಕ್ಯಾಪ್ಟನ್ ಮೋನಿಕಾ ಧೈರ್ಯ, ಜಾಣತನಕ್ಕೆ ಇಡೀ ದೇಶವೇ ಈಗ ಶ್ಲಾಘನೆ ವ್ಯಕ್ತಪಡಿಸುತ್ತಿದೆ.ಸಂಭವಿಸಬಹುದಾದ ದೊಡ್ಡ ದುರಂತದಿಂದ ಎಲ್ಲಾ ಪ್ರಯಾಣಿಕರನ್ನು ಕ್ಯಾಪ್ಟನ್ ಮೋನಿಕಾ ಬಚಾವ್ ಮಾಡಿದ್ದಾರೆ. ಈ ಸಂದಿಗ್ದ ಸಮಯದಲ್ಲಿ ಮೋನಿಕಾಗೆ ಫಸ್ಟ್ ಆಫೀಸರ್ ಬಲ್ ಪ್ರೀತ್ ಸಿಂಗ್ ಭಾಟಿಯಾ ಕೂಡ ಸಹಾಯ ಮಾಡಿದ್ದಾರೆ. ಇಬ್ಬರು ಜೊತೆಗೂಡಿ ದೊಡ್ಡ ಸಾಹಸವನ್ನೇ ಮಾಡಿ 185 ಪ್ರಯಾಣಿಕರ ಜೊತೆಗೆ ಆರು ಜನ ಸಿಬ್ಬಂದಿಗಳ ಅಮೌಲ್ಯ ಜೀವವನ್ನು ಉಳಿಸಿದ್ದಾರೆ.
ಕ್ಯಾಪ್ಟನ್ ಮೋನಿಕಾ ಖನ್ನಾ ಸಾಹಸಕ್ಕೆ ಅಪಾರ ಮೆಚ್ಚುಗೆ
ಇನ್ನು ಮೋನಿಕಾ ಅವರ ಸಾಧನೆಯನ್ನು ಮೆಚ್ಚಿಕೊಂಡಿರುವ ಏರ್ಲೈನ್ನ ಹಿರಿಯ ಕಮಾಂಡರ್ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಈ ರೀತಿ ವಿಮಾನವನ್ನು ಇಳಿಸುವ ಮೂಲಕ ಕ್ಯಾಪ್ಟನ್ ಮೋನಿಕಾ ನಿಜವಾಗಿಯೋ ಅದ್ಬುತಗಳನ್ನು ಮಾಡಿದ್ದಾರೆ. ಏಕೆಂದರೆ ಪಾಟ್ನಾವನ್ನು ಕಷ್ಟಕರವಾದ ವಿಮಾನ ನಿಲ್ದಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.. ಒಂದೆಡೆ ಎತ್ತರದ ಮರಗಳಿದ್ದರೆ ಇನ್ನೊಂದೆಡೆ ರೈಲು ಮಾರ್ಗವಿದೆ. ಈ ರೀತಿ ಕಷ್ಟದ ಸಂದರ್ಭದಲ್ಲೂ ಮೋನಿಕಾ ವಿಮಾನವನ್ನು ಲ್ಯಾಂಡ್ ಮಾಡಿರುವುದು ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.
ಒಟ್ಟಿನಲ್ಲಿ ಮಹಿಳೆಯರನ್ನು ಅಸಮರ್ಥರು ಎನ್ನುವವರಿಗೆ ಈ ಒಂದು ಘಟನೆ ನಿಜಕ್ಕೂ ಉತ್ತಮ ನಿದರ್ಶನವಾಗಿದೆ. ಈ ದಿಟ್ಟ ಮಹಿಳಾ ಪೈಲೆಟ್ನ ಕಾರ್ಯ ಬೇರೆಯವರಿಗೂ ಸ್ಪೂರ್ತಿಯಾಗಿದ್ದು, ಇದೀಗ ದೇಶಾದ್ಯಂತ ಈಕೆಯ ಸಾಹಸಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.