ನ್ಯೂಯಾರ್ಕ್ ಪೊಲೀಸ್ ಡಿಪಾರ್ಟ್ಮೆಂಟ್ನಲ್ಲಿ ಕ್ಯಾಪ್ಟನ್ ಶ್ರೇಣಿ ಹುದ್ದೆ ಪಡೆದ ಮೊದಲ ದಕ್ಷಿಣ ಏಷ್ಯಾದ ಮಹಿಳೆ ಎಂಬ ಹೆಗ್ಗಳಿಕೆಗೆ ಪ್ರತಿಮಾ ಭುಲ್ಲರ್ ಮೊಲ್ಡೊನಾಡೊ (Captain Pratima Bhullar Maldonado) ಪಾತ್ರರಾಗಿದ್ದಾರೆ. ಅವರು ಕ್ವೀನ್ಸ್ನಲ್ಲಿರುವ ಸೌತ್ ರಿಚ್ಮಂಡ್ ಹಿಲ್ನ 102ನೇ ಪೊಲೀಸ್ ಉಪವಿಭಾಗವನ್ನು ಮುನ್ನಡೆಸುತ್ತಿದ್ದು, ಕಳೆದ ತಿಂಗಳಷ್ಟೇ ಕ್ಯಾಪ್ಟನ್ ಆಗಿ ಬಡ್ತಿ ಪಡೆದಿದ್ದಾರೆ.
ಇವರು ಮೂಲತಃ ಪಂಜಾಬ್ನವರಾಗಿದ್ದು, 9ನೇ ವರ್ಷದವರೆಗೆ ಮಾತ್ರ ಅಲ್ಲಿದ್ದರು. ಬಳಿಕ ತನ್ನ ತಂದೆ ತಾಯಿಯೊಂದಿಗೆ ನ್ಯೂಯಾರ್ಕ್ನ ಕ್ವೀನ್ಸ್ಗೆ ತೆರಳಿ ಅಲ್ಲಿಯೇ ವಿದ್ಯಾಭ್ಯಾಸ ಮಾಡಿ, ಕೆಲಸ ಹಿಡಿದಿದ್ದಾರೆ. ಪ್ರತಿಮಾ ಭುಲ್ಲರ್ ಅವರಿಗೆ ನಾಲ್ಕು ಮಕ್ಕಳಿದ್ದು, ಅಮ್ಮನ ಕರ್ತವ್ಯದ ಜತೆಜತೆಗೇ ತಮ್ಮ ಹುದ್ದೆಯಲ್ಲೂ ಯಶಸ್ಸು ಕಾಣುತ್ತಿದ್ದಾರೆ.
‘ಇಲ್ಲಿನ ಪೊಲೀಸ್ ವಿಭಾಗದಲ್ಲಿ ನಾನು ಕಳೆದ 25ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಇದು ನನಗೆ ಮನೆಯಂತೇ ಆಗಿಬಿಟ್ಟಿದೆ’ ಎಂದು ಭುಲ್ಲರ್ ಮೊಲ್ಡೊನಾಡೊ ತಿಳಿಸಿದ್ದಾರೆ. ದಕ್ಷಿಣ ರಿಚ್ಮಂಡ್ ಹಿಲ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಖ್ ಸಮುದಾಯದವರೇ ಇದ್ದಾರೆ. ನಾನೂ ಸಹ ಇಲ್ಲಿಯೇ ಬೆಳೆದಿದ್ದೇನೆ. ಬಾಲ್ಯದಿಂದಲೂ ಇಲ್ಲಿನ ಹಲವು ಗುರುದ್ವಾರಗಳಿಗೆ ಹೋಗುತ್ತಿದ್ದೆ’ ಎಂದು ತಿಳಿಸಿದ್ದಾರೆ.
ಪ್ರತಿಮಾ ಭುಲ್ಲರ್ ಮೊಲ್ಡೊನಾಡೊ ಅವರು ನ್ಯೂಯಾರ್ಕ್ ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಶ್ರೇಣಿಗೆ ಏರಿದ ದಕ್ಷಿಣ ಏಷ್ಯಾ ಮೂಲದ ಮೊದಲ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು. ಆ ದಾರಿ ಅವರಿಗೆ ಸುಲಭದ್ದೇನೂ ಆಗಿರಲಿಲ್ಲ. ‘ಒಬ್ಬ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುವುದು, ಜನರ ರಕ್ಷಣೆಗೆ ಧಾವಿಸುವುದು ಕೆಲವೊಮ್ಮೆ ನಮಗೇ ಶಾಪವಾಗುತ್ತದೆ. ನಿಮ್ಮನ್ನು ಯಾರೂ ಪ್ರಶಂಸೆ ಮಾಡುವುದಿಲ್ಲ. ನಿಮ್ಮ ಅಗತ್ಯ ಇಲ್ಲದಲ್ಲೂ ನೀವು ಹೋಗಬೇಕಾಗುತ್ತದೆ, ಜನರಿಂದ ಬೈಸಿಕೊಳ್ಳಬೇಕಾಗುತ್ತದೆ’ ಎಂದು ಭುಲ್ಲರ್ ಮೊಲ್ಡೊನಾಡೊ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ನನಗೀಗ ಸಿಕ್ಕಿರುವುದು ಅತಿದೊಡ್ಡ ಜವಾಬ್ದಾರಿ. ನಾನು ಅತ್ಯಂತ ಸಕಾರಾತ್ಮಕವಾಗಿ ಮತ್ತು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತೇನೆ. ಬರೀ ನನ್ನ ಸಮುದಾಯಕ್ಕಾಗಿ ಮಾತ್ರವಲ್ಲ, ಎಲ್ಲರಿಗಾಗಿ, ಮಹಿಳೆಯರಿಗಾಗಿ, ಮಕ್ಕಳಿಗಾಗಿ ದುಡಿಯುತ್ತೇನೆ’ ಎಂದಿದ್ದಾರೆ.
ಇದನ್ನೂ ಓದಿ: ಹಿಜಾಬ್ ಧರಿಸೋದಿಲ್ಲ ಎಂದ ಸುದ್ದಿ ನಿರೂಪಕಿ; ಸಂದರ್ಶನ ಕೊಡೋದಿಲ್ಲವೆಂದು ಹೋದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ
‘ನನ್ನ ತಂದೆಯವರು ಟ್ಯಾಕ್ಸಿ ಓಡಿಸುತ್ತಿದ್ದರು. ಅವರು ನಮಗೆ ತುಂಬ ಸಪೋರ್ಟ್ ಕೊಟ್ಟಿದ್ದಾರೆ. ಅವರೊಬ್ಬ ಶ್ರಮಿಕರಾಗಿದ್ದರು. 2006ರಲ್ಲಿ ನಮ್ಮನ್ನು ಅಗಲಿ ಹೋದರು. ನಾನು ಪೊಲೀಸ್ ಆಗುವುದಕ್ಕೂ ಮೊದಲೇ ತೀರಿಹೋಗಿದ್ದಾರೆ. ಅವರು ಇದ್ದಿದ್ದರೆ ನನ್ನನ್ನು ನೋಡಿ ತುಂಬ ಹೆಮ್ಮೆ ಪಡುತ್ತಿದ್ದರು. ನನ್ನ ಸಾಧನೆ ಬಗ್ಗೆ ನನಗೇ ಹೆಮ್ಮೆಯಾಗಿದೆ’ ಎಂದು ತಿಳಿಸಿದ್ದಾರೆ.