Site icon Vistara News

Ship Hijacked: ಸೊಮಾಲಿಯಾ ಬಳಿ 15 ಭಾರತೀಯರಿದ್ದ ಹಡಗು ಹೈಜಾಕ್;‌ ನೌಕಾಪಡೆ ಕಟ್ಟೆಚ್ಚರ

Ship Hijack

Cargo Ship with 15 Indians on board hijacked near Somalia, Indian Navy keeping a close watch

ನವದೆಹಲಿ: ಸೊಮಾಲಿಯಾ ಸಾಗರ ಪ್ರದೇಶದ ಬಳಿಕ 15 ಭಾರತೀಯರಿದ್ದ ಹಡಗೊಂದನ್ನು ಗುರುವಾರ (ಜನವರಿ 4) ಸಂಜೆ ಹೈಜಾಕ್‌ (Ship Hijacked) ಮಾಡಲಾಗಿದೆ. ಲಿಬೇರಿಯಾ ದೇಶದ ಧ್ವಜ ಇದ್ದ ಕಾರ್ಗೊ ಹಡಗನ್ನು ಹೈಜಾಕ್‌ ಮಾಡಲಾಗಿದ್ದು, ಯಾರು ಅಪಹರಣ ಮಾಡಿದ್ದಾರೆ ಎಂಬುದರ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಲಿಬೇರಿಯಾದ ಎಂವಿ ಲಿಲಾ ನೋರ್‌ಫೋಕ್‌ (MV Lila Norfolk) ಹಡಗಿನಲ್ಲಿ 15 ಭಾರತೀಯರಿದ್ದರು ಎಂಬುದನ್ನು ಹಾಗೂ ಹಡಗನ್ನು ಹೈಜಾಕ್‌ ಮಾಡಿರುವುದನ್ನು ಸೊಮಾಲಿಯಾ ದೃಢಪಡಿಸಿದೆ.

ನೌಕೆ ನಿಯೋಜಿಸಿದ ಭಾರತ

ಅರಬ್ಬೀ ಸಮುದ್ರದಲ್ಲಿ ಭಾರತೀಯರಿದ್ದ ಹಡಗನ್ನು ಹೈಜಾಕ್‌ ಮಾಡಿದ ಸುದ್ದಿ ತಿಳಿಯುತ್ತಲೇ ಸಾಗರ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯು ಕಟ್ಟೆಚ್ಚರ ವಹಿಸಿದೆ. ಅಲ್ಲದೆ, ಅಪಹರಣಕ್ಕೀಡಾದ ಹಡಗನ್ನು ಪತ್ತೆಹಚ್ಚಲು ಭಾರತೀಯ ನೌಕಾಪಡೆಯು ಸಾಗರ ಪ್ರದೇಶದಲ್ಲಿ ಐಎನ್‌ಎಸ್‌ ಚೆನ್ನೈ ನೌಕೆಯನ್ನು ನಿಯೋಜಿಸಿದೆ. ಐವರಿಂದ ಆರು ದುಷ್ಕರ್ಮಿಗಳು ಶಸ್ತ್ರಾಸ್ತ್ರ ಸಜ್ಜಿತವಾಗಿ ಹಡಗನ್ನು ಸುತ್ತುವರಿದು ಹೈಜಾಕ್‌ ಮಾಡಿದ್ದಾರೆ ಎಂದು ತಿಳಿದುಬಂದಿರುವ ಕಾರಣ ಭಾರತೀಯ ನೌಕಾಪಡೆಯು ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗಿದೆ.

ಭಾರತೀಯ ನೌಕಾಪಡೆಯ ಐಎನ್‌ಎಸ್‌ ಚೆನ್ನೈ ನೌಕೆಯಲ್ಲಿರುವ ಸಿಬ್ಬಂದಿಯು ಈಗಾಗಲೇ ಹೈಜಾಕ್‌ ಆಗಿರುವ ಹಡಗಿನಲ್ಲಿರುವವರ ಜತೆ ಸಂಪರ್ಕ ಸಾಧಿಸಿದೆ. ಭಾರತದ ಎಲ್ಲ ಸಿಬ್ಬಂದಿಯು ಕೂಡ ಸುರಕ್ಷಿತರಾಗಿದ್ದಾರೆ. ಅವರ ರಕ್ಷಣೆಗೆ ನೌಕಾಪಡೆ ಸಿಬ್ಬಂದಿಯು ಕಾರ್ಯತಂತ್ರ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಅರಬ್ಬೀ ಸಮುದ್ರ, ಕೆಂಪು ಸಮುದ್ರ (Red Sea) ಸೇರಿ ಹಲವು ಸಾಗರ ಪ್ರದೇಶಗಳಲ್ಲಿ ಇತ್ತೀಚೆಗೆ ಕಾರ್ಗೊ ಹಡಗುಗಳ ಅಪಹರಣ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಹಾಗಾಗಿ, ಭಾರತೀಯ ನೌಕಾಪಡೆಯು ದೇಶದ ಸಾಗರ ಪ್ರದೇಶದಲ್ಲಿ ಶತ್ರುಗಳ ಮೇಲೆ ನಿಗಾ ಇರಿಸಲು ನೌಕೆಗಳನ್ನು ನಿಯೋಜಿಸಿದೆ.

ಇದನ್ನೂ ಓದಿ: ಇರಾಕ್‌ ಬೆಂಬಲಿತ ಹಡಗುಗಳ ಮೇಲೆ ಅಮೆರಿಕ ದಾಳಿ; 10 ಹೌತಿ ಉಗ್ರರ ಹತ್ಯೆ, ವಿಡಿಯೊ ಇದೆ

ಟರ್ಕಿಯಿಂದ ಭಾರತಕ್ಕೆ ಹೊರಟಿದ್ದ ಸರಕು ಸಾಗಣೆ ಹಡಗನ್ನು ಯೆಮೆನ್‌ನ ಹೌತಿ ಬಂಡುಕೋರರು ಕಳೆದ ನವೆಂಬರ್‌ನಲ್ಲಿ ಕೆಂಪು ಸಮುದ್ರದಲ್ಲಿ ಅಪಹರಿಸಿದ್ದರು. ಹಡಗಿನಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ಸುಮಾರು 25 ಸಿಬ್ಬಂದಿ ಇದ್ದರು. ಇಸ್ರೇಲ್‌ ಹಡಗನ್ನು ಹೈಜಾಕ್ ಮಾಡಿರುವುದಾಗಿ ಹೌತಿಗಳು ಹೇಳಿದ್ದರು. ಆದರೆ, ಕ್ಲೇಮ್ ನಿರಾಕರಿಸಿದ್ದ ಇಸ್ರೇಲ್ ಸರ್ಕಾರವು, ಅಪಹರಣಕ್ಕೊಳಗಾದ ಗ್ಯಾಲಕ್ಸಿ ಲೀಡರ್ ಹಡಗಿನಲ್ಲಿ ಯಾವುದೇ ಭಾರತೀಯರು ಇರಲಿಲ್ಲ ಎಂದು ತಿಳಿದುಬಂದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version