Site icon Vistara News

Cash from Trash: ಕಸ ಮಾರಿ ಚಂದ್ರಯಾನದ ಬಜೆಟ್‌ನಷ್ಟು ಕಾಸು ಗಳಿಸಿದ ಸರ್ಕಾರ!

government office

ಹೊಸದಿಲ್ಲಿ: ಚಂದ್ರಯಾನ- 3 (Chandrayaan- 3) ಮಿಷನ್‌ನ ಬಜೆಟ್‌ಗೆ ಸಮನಾದ ಮೊತ್ತವನ್ನು ಕೇಂದ್ರ ಸರ್ಕಾರ ಕಸ ಮಾರಿಯೇ (Cash from Trash) ಗಳಿಸಿದೆ!

ಹೌದು, ನಂಬಿ ಅಥವಾ ಬಿಡಿ, ಕೇಂದ್ರ ಸರ್ಕಾರ ಆಗಸ್ಟ್‌ವರೆಗೆ ಸ್ಕ್ರಾಪ್‌ ಮಾರಿ ಗಳಿಸಿದ ಮೊತ್ತ ಸುಮಾರು 600 ಕೋಟಿ ರೂ. ಇದರಲ್ಲಿ ಕಳೆದ ಹಲವು ವರ್ಷಗಳ ಕಡತಗಳು, ತುಂಡಾದ ಕಚೇರಿ ಉಪಕರಣಗಳು, ಬಳಕೆಯಲ್ಲಿಲ್ಲದ ವಾಹನಗಳು ಸೇರಿವೆ. ಇದರ ಮೊತ್ತ ಅಕ್ಟೋಬರ್ ವೇಳೆಗೆ 1,000 ಕೋಟಿ ರೂ. ದಾಟಬಹುದು ಎಂದು ಅಂದಾಜಿಸಲಾಗಿದೆ. ಇದನ್ನು ನರೇಂದ್ರ ಮೋದಿ ಸರಕಾರದ ಹೊಸ ಆದಾಯದ ಮಾರ್ಗ ಎಂದು ಕರೆಯಬಹುದಾಗಿದೆ.

ಸರ್ಕಾರ ತನ್ನ ಈ ವಿಶೇಷ ಅಭಿಯಾನ 3.0 ಅನ್ನು ಅಕ್ಟೋಬರ್ 2ರಿಂದ ಅಕ್ಟೋಬರ್ 31ರವರೆಗೆ ನಡೆಸಲಿದೆ. ಸರ್ಕಾರ ಸ್ವಚ್ಛತೆ ಮತ್ತು ಉಪಕರಣ ಕಡಿತದತ್ತ ಮತ್ತಷ್ಟು ಗಮನಹರಿಸಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಇದೇ ರೀತಿಯ ಅಭಿಯಾನದಿಂದ ರೂ. 371 ಕೋಟಿ ಗಳಿಸಿದ್ದರೆ, ಈ ಬಾರಿ ಮೂರನೇ ತ್ರೈಮಾಸಿಕದಲ್ಲಿ ಸುಮಾರು ರೂ. 400 ಕೋಟಿ ಆದಾಯವನ್ನು ಗಳಿಸುವ ಗುರಿ ಇದೆ ಎಂದು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ಇಂತಹ ಮೊದಲ ಉಪಕ್ರಮದಿಂದ ಸರ್ಕಾರ ರೂ. 62 ಕೋಟಿ ಗಳಿಸಿದೆ. ನಂತರ ಇದನ್ನು ಸರ್ಕಾರ ನಿರಂತರವಾಗಿ ಮಾಡುತ್ತ ಬಂದಿದ್ದು, ಪ್ರತಿ ತಿಂಗಳು ಸುಮಾರು ರೂ. 20 ಕೋಟಿ ಗಳಿಸಿದೆ.

ಇದರ ಮೂಲಕ ಸರ್ಕಾರಿ ಕಚೇರಿಗಳಲ್ಲಿ ಕಾರಿಡಾರ್‌ಗಳನ್ನು ಸ್ವಚ್ಛಗೊಳಿಸಲಾಗಿದ್ದು, ಸ್ಟೀಲ್ ಅಲ್ಮೆರಾಗಳಲ್ಲಿ ತುಂಬಿದ ಕಡತಗಳನ್ನು ತೆರವುಗೊಳಿಸಲಾಗಿದೆ ಮತ್ತು ವಾಹನಗಳನ್ನು ಹರಾಜು ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಈ ಅಭಿಯಾನ ಪ್ರಾರಂಭವಾದಾಗಿನಿಂದ ಸುಮಾರು 31 ಲಕ್ಷ ಸರ್ಕಾರಿ ಕಡತಗಳನ್ನು ಆಚೆ ಕಳಿಸಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಮುಕ್ತಗೊಳಿಸಲಾದ ಜಾಗದ ಪ್ರಮಾಣ ಇಲ್ಲಿಯವರೆಗೆ ಸುಮಾರು 185 ಲಕ್ಷ ಚದರ ಅಡಿ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಪೈಕಿ ದಾಖಲೆಯ 90 ಲಕ್ಷ ಚದರ ಅಡಿ ಜಾಗವನ್ನು ಮುಕ್ತಗೊಳಿಸಿದ್ದರೆ, ಈ ಅಕ್ಟೋಬರ್‌ನಲ್ಲಿ ಕನಿಷ್ಠ 100 ಲಕ್ಷ ಚದರ ಅಡಿ ಜಾಗವನ್ನು ಮುಕ್ತಗೊಳಿಸುವುದು ಗುರಿಯಾಗಿದೆ. ಕಳೆದ ಅಭಿಯಾನದಲ್ಲಿ ಸರ್ಕಾರ 1.01 ಲಕ್ಷ ಕಚೇರಿ ಜಾಗಗಳನ್ನು ಕ್ಲೀನ್‌ ಮಾಡಿದೆ. ಮೂರನೇ ಆವೃತ್ತಿಯಲ್ಲಿ ಸುಮಾರು 1.5 ಲಕ್ಷ ಕಚೇರಿ ಸೈಟ್‌ಗಳನ್ನು ಗುರಿಯಾಗಿಸಿಕೊಂಡಿದೆ.

ವಿಶೇಷ ಅಭಿಯಾನ 2.0ರ ಯಶಸ್ಸು ಈ ವರ್ಷ ದೊಡ್ಡ ಅಭಿಯಾನವನ್ನು ಯೋಜಿಸಲು ಸರ್ಕಾರವನ್ನು ಉತ್ತೇಜಿಸಿದೆ. ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಅಭಿಯಾನದಲ್ಲಿ ಭಾಗವಹಿಸುತ್ತಿವೆ. ಸೆಪ್ಟೆಂಬರ್ 15ರಿಂದ ಸೆಪ್ಟೆಂಬರ್ 30ರವರೆಗೆ ಪೂರ್ವಸಿದ್ಧತೆ ಹಂತ. ಅಕ್ಟೋಬರ್ 2ರಿಂದ ಅಕ್ಟೋಬರ್ 31ರವರೆಗೆ ಅನುಷ್ಠಾನದ ಹಂತ. ಸಚಿವಾಲಯಗಳು ಮತ್ತು ಇಲಾಖೆಗಳ ಎಲ್ಲಾ ಕಚೇರಿಗಳಲ್ಲಿ ಸ್ವಚ್ಛತೆಯನ್ನು ಕಲ್ಪಿಸಬೇಕು ಎಂದು ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Modi in Karnataka: ಜನಮನ ಗೆದ್ದ ಪ್ರಧಾನಿ ನಡೆ: ನಡವಳಿಕೆಯಿಂದಲೇ ಸ್ವಚ್ಛ ಭಾರತದ ಸಂದೇಶ ನೀಡಿದ ನರೇಂದ್ರ ಮೋದಿ

Exit mobile version