ಜೋಧ್‌ಪುರ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುವುದರ ವಿರುದ್ಧ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಇತ್ತ ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಸಿಬಿಐ ಶಾಕ್ ಕೊಟ್ಟಿದೆ.
ಅಶೋಕ್ ಗೆಹ್ಲೋಟ್ ಅವರ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರ ಜೋಧಪುರ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿದೆ. 2007ರ ರಸಗೊಬ್ಬರ ಹಗರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸುವುದಕ್ಕಾಗಿ ಅಗ್ರಸೇನ್ ಗೆಹ್ಲೋಟ್ ಅವರ ಜೋಧಪುರ ನಿವಾಸ ಮತ್ತು ಅಂಗಡಿಯ ಮೇಲೆ ಸಿಬಿಐ ಲಗ್ಗೆ ಇಟ್ಟಿದೆ.
ಅಗ್ರಸೇನ್ ಗೆಹ್ಲೋಟ್ ಅವರು ರಸಗೊಬ್ಬರ ವ್ಯಾಪಾರಿಯಾಗಿದ್ದು, ರಸಗೊಬ್ಬರ ಹಗರಣದಲ್ಲಿ ಈ ಹಿಂದೆ ಕೂಡ ಜಾರಿ ನಿರ್ದೇಶನಾಲಯದಿಂದ ವಿಚಾರಣೆ ನಡೆಸಲಾಗಿತ್ತು. ಸಬ್ಸಿಡಿಯಲ್ಲಿ ದೊರೆತ, ಇಲ್ಲಿನ ರೈತರಿಗೆ ವಿತರಿಸಬೇಕಾದ ರಸಗೊಬ್ಬರವನ್ನು ರಫ್ತು ಮಾಡಿದ ಆರೋಪ ಅಗ್ರಸೇನ್ ಗೆಹ್ಲೋಟ್ ಮೇಲಿದೆ. ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2007 ಮತ್ತು 2009 ರ ನಡುವೆ ನಡೆದಿರುವ ವಿದ್ಯಮಾನ ಈಗ ಮತ್ತೆ ಜೀವ ಪಡೆದಿದೆ.
2007 ರಿಂದ 2009 ರ ಅವಧಿಯಲ್ಲಿ ಅಗ್ರಸೇನ್ ಗೆಹ್ಲೋಟ್ ಅವರು ಸಂಚು ರೂಪಿಸಿ ಹೆಚ್ಚಿನ ಪ್ರಮಾಣದ ಮ್ಯೂರಿಯೇಟ್ ಆಫ್ ಪೊಟ್ಯಾಶ್ (MoP) ಅನ್ನು ವಿದೇಶಗಳಿಗೆ ವಿದೇಶಗಳಿಗೆ ರಫ್ತು ಮಾಡಿದ್ದರು, ಆದರೆ ಈ ರಸಗೊಬ್ಬರ ಅವರಿಗೆ ಸಬ್ಸಿಡಿ ದರದಲ್ಲಿ ದೊರೆತಿದ್ದಾಗಿತ್ತು. ಅವರು ಅದನ್ನು ದೇಶದ ರೈತರಿಗೆ ವಿತರಣೆ ಮಾಡಬೇಕಾಗಿತ್ತು.
ಅಗ್ರಸೇನ್ ಗೆಹ್ಲೋಟ್ ಅವರು ತಮ್ಮ ಕಂಪನಿ ಅನುಪಮ್ ಕೃಷಿ ಮೂಲಕ MoP ಅನ್ನು ಸಬ್ಸಿಡಿ ದರದಲ್ಲಿ ಖರೀದಿಸಿದರು, ಆದರೆ ಭಾರತೀಯ ರೈತರಿಗೆ ನೀಡದೆ ಅದನ್ನು ಮಲೇಷ್ಯಾ ಮತ್ತು ವಿಯೆಟ್ನಾಂನಂತಹ ದೇಶಗಳಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದ್ದರು ಎಂದು ಜಾರಿ ನಿರ್ದೇಶನಾಲಯ ತನ್ನ ತನಿಖೆ ವೇಳೆ ಕಂಡುಕೊಂಡಿತ್ತು. 2020ರಲ್ಲಿ ಸಲ್ಲಿಸಲಾದ ವರದಿಯಲ್ಲೂ ಇದನ್ನು ತಿಳಿಸಿತ್ತು.
ಇದನ್ನೂ ಓದಿ: ಮೂಸೆವಾಲಾ ಹತ್ಯೆ ಮಾಸ್ಟರ್‌ಮೈಂಡ್ ಲಾರೆನ್ಸ್ ಬಿಷ್ಣೋಯಿ: ಪೊಲೀಸ್